Advertisement

ಧಾರ್ಮಿಕ ಕಟ್ಟಡಗಳ ತೆರವು?

12:50 AM Mar 05, 2020 | Lakshmi GovindaRaj |

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ 2009ರ ಸೆ.29ರ ಮುನ್ನ ಹಾಗೂ ನಂತರ ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಅನ ಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ಗುರುತಿಸಿರುವ ಬಿಬಿಎಂಪಿ, ಆ ಕುರಿತು ಪಟ್ಟಿಯನ್ನು ಬುಧವಾರ ಹೈಕೋರ್ಟ್‌ಗೆ ಸಲ್ಲಿಸಿತು.

Advertisement

ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿ ಸುವ ವಿಚಾರವಾಗಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ವೇಳೆ ಬಿಬಿಎಂಪಿ ವಕೀಲರು, ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 2009ರ ಸೆ.29ರ ಮುನ್ನ ಮತ್ತು ನಂತರ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ವಾರ್ಡ್‌ ವಾರು ಮಟ್ಟದಲ್ಲಿ ಕಾರ್ಯಕಾರಿ ಎಂಜಿನಿಯರ್‌ಗಳು ಸರ್ವೇ ಮಾಡಿ ಅನಧಿಕೃತ ಕಟ್ಟಡಗಳನ್ನು ಗುರುತಿಸಿದ್ದಾರೆ. ಅವುಗಳ ತೆರವಿಗೆ ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ-1976 ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ, ಆ ಕುರಿತು ಬಿಬಿಎಂಪಿ ಆಯುಕ್ತರು ಸಲ್ಲಿಸಿರುವ ಪಟ್ಟಿಯನ್ನು ಸಲ್ಲಿಸಿದರು.

ಅಲ್ಲದೆ, ಅಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವಿಗೆ ಮುಂದಾಗುವ ಅಧಿಕಾರಿಗಳಿಗೆ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಭದ್ರತೆ ಕಲ್ಪಿಸಲು ಸಶಸ್ತ್ರ ಪೊಲೀಸ್‌ ಸಿಬ್ಬಂದಿ ಒಳಗೊಂಡ ವಿಶೇಷ ಕಾರ್ಯಪಡೆಯ ಅಗತ್ಯವಿದೆ.

ಇತ್ತೀಚೆಗೆ ಶ್ರೀರಾಮಪುರದ ಗಂಗೈಯಮ್ಮನ ದೇವಸ್ಥಾನದ ಒತ್ತುವರಿ ತೆರವಿಗೆ ಹೋಗಿದ್ದಾಗ ಅಧಿಕಾರಿಗಳ ಮೇಲೆ ಸ್ಥಳೀಯರು ದಾಳಿ ನಡೆಸಲು ಮುಂದಾಗಿದ್ದರು. ಇನ್ನೂ ಸದ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು ಅದು ಮುಗಿಯುವರೆಗೆ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ತೆರವು ಕಾರ್ಯಾಚರಣೆಗೆ ಮುಂದಾಗುವ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ತಿಳಿಸಿದರು.

Advertisement

ಅದನ್ನು ಪರಿಗಣಿಸಿದ ನ್ಯಾಯಪೀಠ, ಅಧಿವೇಶನದ ನೆಪದಲ್ಲಿ ಪೊಲೀಸರು ಭದ್ರತೆ ನೀಡಲು ನಿರಾಕರಿಸುವಂತಿಲ್ಲ. ತೆರವು ಕಾರ್ಯಾಚರಣೆ ವೇಳೆ ಪಾಲಿಕೆ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕಿದೆ. ಆದ್ದರಿಂದ ಅಧಿಕಾರಿಗಳು ವಿಶೇಷ ಪೊಲೀಸ್‌ ಸ್ವಾಡ್‌ ನಿಯೋಜಿಸಲು ಮನವಿ ಸಲ್ಲಿಸಿದರೆ, ಅದನ್ನು ನಗರ ಪೊಲೀಸ್‌ ಆಯುಕ್ತರು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾ. 20ಕ್ಕೆ ಮುಂದೂಡಿದೆ.

ಅಲ್ಲದೆ, ಬಿಬಿಎಂಪಿಯ ಎಂಟು ವಲಯದಲ್ಲಿ ಸಾರ್ವಜನಿಕ ಪ್ರದೇಶದಲ್ಲಿನ ಸರ್ವೇ ನಡೆಸಿ ಅನಧಿಕೃತ ಕಟ್ಟಡಗಳನ್ನು ಗುರುತಿಸಿರುವವರ ಹೆಸರುಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕು. ಒಂದು ವೇಳೆ ಯಾವುದೇ ಅನಧಿಕೃತ ಧಾರ್ಮಿಕ ಕೇಂದ್ರ ಇರುವುದು ಕಂಡುಬಂದರೆ, ಅದಕ್ಕೆ ಅವರೇ ಜವಾಬ್ದಾರರಾಗುತ್ತಾರೆ ಎಂದು ತಿಳಿಸಿ ಪ್ರಮಾಣಪತ್ರ ಸಲ್ಲಿಸಬೇಕು ನಿರ್ದೇಶಿಸಿತು.

ಕೇಂದ್ರದ ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್‌
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮವನ್ನು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಕುರಿತು ಕಲ್ಮಕಾರು ಗ್ರಾಮದ ನಿವಾಸಿಗಳಾದ ನರೇಂದ್ರ ಬಿಳಿಮಲೆ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಕಲ್ಮಕಾರು ಗ್ರಾಮವನ್ನು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿ 2017ರ ಜೂ.28ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಕಲ್ಮಕಾರು ಗ್ರಾಮಕ್ಕೆ ಮಾತ್ರ ಅನ್ವಯವಾಗುವಂತೆ ರದ್ದುಗೊಳಿಸಿ, ಅರ್ಜಿಯನ್ನು ಭಾಗಶ: ಮಾನ್ಯ ಮಾಡಿ ಆದೇಶಿಸಿತು.

ಕೇಂದ್ರ ಸರ್ಕಾರದ ಪ್ರಾಥಮಿಕ ಅಧಿಸೂಚನೆಯಲ್ಲಿ ಕಲ್ಮಕಾರು ಗ್ರಾಮದ ಹೆಸರು ಇರಲಿಲ್ಲ. ಆದರೆ, ಏಕಾಏಕಿ ಅಂತಿಮ ಅಧಿಸೂಚನೆಯಲ್ಲಿ ಸೇರಿಸಲಾಗಿದೆ. ಇದ ರಿಂದ ಗ್ರಾಮದವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೈನಂದಿನ ಬದುಕು ದುಸ್ತರವಾಗಲಿದೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಅರ್ಜಿದಾರರ ಪರ ಪಿ.ಎನ್‌. ಹೆಗ್ಡೆ ವಕಾಲತ್ತು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next