Advertisement

Eshwara Khandre ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು

12:12 AM Aug 03, 2024 | Team Udayavani |

ಬೆಂಗಳೂರು: ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಅರಣ್ಯ, ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ.

Advertisement

ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವ ಸಚಿವರು, ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್‌ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅರಣ್ಯ ಒತ್ತುವರಿಯನ್ನು ತತ್‌ಕ್ಷಣದಿಂದಲೇ ತೆರವುಗೊಳಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಒಂದು ತಿಂಗಳೊಳಗೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್‌ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್‌ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ತಮ್ಮ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

ಚಾರಣಕ್ಕೂ ಕಡಿವಾಣ?
ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಜನರು ಬರುವುದೂ ಇಂತಹ ದುರಂತಗಳಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಿದ್ದು ಚಾರಣಕ್ಕೂ ಕಡಿವಾಣ ಬೀಳುವ ಸಾಧ್ಯತೆ ಇದೆ.

ರಾಜ್ಯದ ಶಿರೂರು ಮತ್ತು ವಯ
ನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತ ನಮಗೂ ಎಚ್ಚರಿಕೆಯ ಗಂಟೆಯಾಗಿದ್ದು ಪಶ್ಚಿಮ ಘಟ್ಟದ ಉಳಿವು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next