ಮಲ್ಪೆ: ಮಲ್ಪೆ ಮುಖ್ಯರಸ್ತೆಯಿಂದ ವಡಭಾಂಡೇಶ್ವರಕ್ಕೆ ಹೋಗುವ ಮಾರ್ಗದ ಸುದರ್ಶನ್ ಐಸ್‌ಪ್ಲಾಂಟ್ ಮುಂಭಾಗದಲ್ಲಿ ರಸ್ತೆಗೆ ಬಾಗಿಕೊಂಡು ವಾಹನ ಸಂಚಾರರಿಗೆ ಸಂಚಕಾರವನ್ನು ತಂದೊಡ್ಡುತ್ತಿದ್ದ ಎರಡು ತೆಂಗಿನ ಮರಗಳನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಂಜು ಕೊಳ ನೇತೃತ್ವದಲ್ಲಿ ಸೋಮವಾರ ತೆರವುಗೊಳಿಸುವ ಕಾರ್ಯ ನಡೆಯಿತು.
ನಗರದ ಮುಖ್ಯರಸ್ತೆಯನ್ನು ಬಳಸಿಕೊಂಡು ನಿತ್ಯ ಈ ರಸ್ತೆಯ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಲವಾರು ಬಾರಿ ವಾಹನ ಸವಾರರ ಮೇಲೆ ತೆಂಗಿನಕಾಯಿ, ಸೋಗೆಗಳು ಬಿದ್ದು ವಾಹನ ಸವಾರರು ನೆಲಕ್ಕೆ ಉರುಳಿ ಬಿದ್ದು ಸಣ್ಣ ಪುಟ್ಟ ಅಪಘಾತಗಳು, ವಾಹನಗಳಿಗೆ ಹಾನಿಯಾಗುವ ಪ್ರಸಂಗಳು ನಿತ್ಯ ನಡೆಯುತ್ತಲೇ ಇದ್ದವು.
ಬಾಗಿಕೊಂಡ ತೆಂಗಿನಮರಕ್ಕೆ ತಾಗಿಕೊಂಡು ವಿದ್ಯುತ್ ತಂತಿ ಹಾದುಹೋಗಿದ್ದರಿಂದ ಕಾಯಿ ಕೀಳಲು ಮರ ಹತ್ತುವುದಕ್ಕೂ ಯಾರೂ ಮುಂದಾಗುತ್ತಿರಲಿಲ್ಲ. ಹಾಗಾಗಿ ಕಾಯಿಗಳು ಒಣಗಿ ವಾಹನಗಳ ಮೇಲೆ ಆಗಾಗ ಬೀಳುತ್ತಿದ್ದವು. ಸೋಮವಾರವೂ ವ್ಯಕ್ತಿಯೊಬ್ಬರ ಮೇಲೆ ತೆಂಗಿನ ಕಾಯಿಬಿದ್ದು ಗಾಯಗೊಂಡಿರುವ ಘಟನೆ ನಡೆದಿತ್ತು. ತೆಂಗಿನ ಮರ ಖಾಸಾಗಿಯವರಿಗೆ ಸೇರಿದ್ದರಿಂದ ಮಂಜು ಕೊಳ ಅವರು ಮನೆಯವರ ಮನವೊಲಿಸಿ ಸಮಸ್ಯೆ ತಂದೊಡ್ಡುತ್ತಿದ್ದ ಎರಡೂ ಮರಗಳನ್ನು ಕಡಿದು ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ.
ವಾಹನದ ಸಾವರರ ಮೇಲೆ ತೆಂಗಿನಕಾಯಿ ಬಿದ್ದು ಅಪಘಾತಗಳು ಉಂಟಾಗುತ್ತಿರುವ ಘಟನೆಗಳು ಇತೀ¤ಚಿನ ದಿನಗಳಲ್ಲಿ ಹಲವಾರು ಬಾರಿ ನಡೆದಿದೆ. ಮಳೆಗಾಲದಲ್ಲಿ ಗಾಳಿಗೆ ಬೀಳುವ ಸ್ಥಿತಿಯಲ್ಲಿತ್ತು. ಕಳೆದ 7-8 ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗೆ ಮುಕ್ತಿ ದೊರಕಿದಂತಾಗಿದೆ.
–ಮಂಜು ಕೊಳ, ಸಾಮಾಜಿಕ ಕಾರ್ಯಕರ್ತ