ಬಾಗಲಕೋಟೆ: ಕಳೆದ ಮೂರು ತಿಂಗಳಿಂದ ವ್ಯಾಪಾರ-ವಹಿವಾಟು ಇಲ್ಲದೇ ಸಂಕಷ್ಟದಲ್ಲಿದ್ದ ನಗರದ ವ್ಯಾಪಾರಸ್ಥರಿಗೆ ನಗರಸಭೆ ಅಧಿಕಾರಿಗಳು, ಮಂಗಳವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದರು.
ವ್ಯಾಪಾರಸ್ಥರು ತಮ್ಮ ಅಂಗಡಿಗೆ ಬರುವ ಮುಂಚೆಯೇ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ಅಂಗಡಿಗಳ ಮುಂದೆ ಇದ್ದ ಮೆಟ್ಟಿಲು, ತಗಡು ಎಲ್ಲವನ್ನೂ ತೆರವುಗೊಳಿಸಿದ್ದರು. ಅಂಗಡಿ ಮುಂದಿನ ನಾಮಫಲಕ ಸಹಿತ, ರಸ್ತೆ-ಚರಂಡಿ ಮೇಲೆ ಹಾಕಿದ್ದ ಮೆಟ್ಟಿಲು ತೆರವುಗೊಳಿಸಲಾಯಿತು. ನಗರದ ಫಂಕಾ ಮಸೀದಿಯಿಂದ ಬಸವೇಶ್ವರ ವೃತ್ತದವರೆಗಿನ ಎಂ.ಜಿ. ರಸ್ತೆಯಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಬೆಳಗ್ಗೆ 6 ಗಂಟೆಯಿಂದಲೇ ಆರಂಭಗೊಂಡ ಕಾರ್ಯಾಚರಣೆ, ಸಂಜೆ 7ರ ವರೆಗೂ ಮುಂದುವರಿದಿತ್ತು.
ಬೀದಿ ಬದಿ ವ್ಯಾಪಾರಸ್ಥರ ಆಕ್ರೋಶ: ದಿನ ನಿತ್ಯ ಬೀದಿ ಬದಿ ವಿವಿಧ ಹಣ್ಣು, ಹೂವು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಮಹಿಳೆಯರು ಸಹಿತ ನೂರಾರು ಜನರನ್ನು ತೆರವುಗೊಳಿಸಲಾಯಿತು. ಈ ವೇಳೆ ಮಹಿಳೆಯರು, ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಎಂ.ಜಿ. ರಸ್ತೆಯ ವ್ಯಾಪಾರಿ ಕೇಂದ್ರ, ನಗರದ ವ್ಯಾಪರಸ್ಥರ ಹೃದಯ ಭಾಗವಾಗಿದ್ದು, ಎರಡು ತಿಂಗಳು ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈ ಪ್ರದೇಶ ನಿಷೇಧಿತ ಪ್ರದೇಶವಾಗಿತ್ತು. ಕಳೆದ ಮೇ 3ರಿಂದ ಈ ಪ್ರದೇಶದಲ್ಲಿ ವ್ಯಾಪಾರ-ವಹಿವಾಟಿಗೆ ಅವಕಾಶ ಕಲ್ಪಿಸಿದ್ದು, ಇದೀಗ ಸುಧಾರಿಸಿಕೊಳ್ಳುತ್ತಿದ್ದ ವ್ಯಾಪಾರಸ್ಥರಿಗೆ ನಗರಸಭೆ ಅಧಿಕಾರಿಗಳಿಂದ ಇಂದಿನ ತೆರವು ಕಾರ್ಯಾಚರಣೆ ಶಾಕ್ ನೀಡಿತು.
ನಗರಸಭೆ ಅಧಿಕಾರಿಗಳ ದೌರ್ಜನ್ಯ: ಕೋವಿಡ್ ಸಂಕಷ್ಟದಲ್ಲಿರುವ ವ್ಯಾಪಾರಸ್ಥರು ತೊಂದರೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅತಿಕ್ರಮಣ ತೆರವು ಹೆಸರಿನಲ್ಲಿ ಅಂಗಡಿಗಳ ಮುಂದಿನ ಮೆಟ್ಟಿಲು, ತಗಡು, ನಾಮಫಲಕ ಎಲ್ಲವೂ ತೆರವುಗೊಳಿಸಲಾಗುತ್ತಿದೆ. ರಸ್ತೆ ಬದಿ ವ್ಯಾಪಾರ ಮಾಡಿಕೊಂಡಿದ್ದ ಜನರನ್ನು ಒಕ್ಕಲೆಬ್ಬಿಸಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಈ ಕಾರ್ಯಾಚರಣೆ ಅಗತ್ಯವಿರಲಿಲ್ಲ. ಅತಿಕ್ರಮ ತೆರವು ಮಾಡುವುದೇ ಆದರೆ ವ್ಯಾಪಾರಸ್ಥರಿಗೆ ಸೂಚನೆ ನೋಟಿಸ್ ನೀಡಿ, ಸ್ವಯಂ ತೆರವು ಮಾಡಿಕೊಳ್ಳಲು ಅವಕಾಶ ನೀಡಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಯಾವುದನ್ನೂ ಮಾಡದೇ, ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹಲವು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ನಗರದ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚರಂಡಿ, ರಸ್ತೆ ಅತಿಕ್ರಮಣ ಮಾಡಿಕೊಂಡ ಅಂಗಡಿಗಳ ಎದುರಿನ ತಗಡು ತೆಗೆಯಲಾಗಿದೆ. ಈ ಕಾರ್ಯಾಚರಣೆಗೆ ಯಾರ ಒತ್ತಡವೂ ಇಲ್ಲ. ನಗರದ ಸೌಂದರ್ಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
–ಮುನಿಶಾಮಪ್ಪ, ಪೌರಾಯುಕ್ತ, ನಗರಸಭೆ