Advertisement

ನೇಕಾರರ ಸಾಲ ಮನ್ನಾ ಮಾಡಿ

04:54 PM Dec 21, 2019 | Suhan S |

ದೋಟಿಹಾಳ: ಕೈಮಗ್ಗ ನೇಕಾರರು ಸಿದ್ಧಪಡಿಸುವ ಉಡುಪು ಹಾಗೂ ಬಟ್ಟೆಗಳನ್ನು ರಾಜ್ಯ ಸರಕಾರ ಖರೀದಿಸುತ್ತಿಲ್ಲ ಎಂದು ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ ಆರೋಪಿಸಿದರು.

Advertisement

ಶುಕ್ರವಾರ ಗ್ರಾಮದ ರುದ್ರಮುನಿಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಕೈಮಗ್ಗ ನೇಕಾರರು ಸಿದ್ಧಪಡಿಸುವ ಉಡುಪು ಹಾಗೂ ಬಟ್ಟೆಗಳನ್ನು ರಾಜ್ಯ ಸರಕಾರ ಖರೀದಿ ಮಾಡಿದರೆ ನೇಕಾರರು ಬಾಳು ಹಸನಾಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 58 ಕೋಟಿ ನೇಕಾರರ ಸಾಲ ಮನ್ನಾ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ನೇಕಾರರ 100 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ಆದರೆ ಅಂಕಿ ಅಂಶಗಳ ಪ್ರಕಾರ ರಾಜ್ಯದ ನೇಕಾರರು ಅಷ್ಟೊಂದು ಪ್ರಮಾಣದಲ್ಲಿ ಸಾಲ ಮಾಡಿಲ್ಲ. ಸಾಲಮನ್ನಾ ವಿಷಯದಲ್ಲಿ ಇಂದಿನ ಸರಕಾರ 20 ಷರತ್ತುಗಳನ್ನು ಹಾಕಿದ್ದು, ಇದರಿಂದ ಯಾವ ನೇಕಾರರಿಗೂ ಲಾಭವಾಗಿಲ್ಲ. ರಾಜ್ಯದಲ್ಲಿ ನೇಕಾರಿಕೆ ಅನುಭವ ಇಲ್ಲದವರನ್ನು ಜವಳಿ ಸಚಿವರನ್ನಾಗಿ ಮಾಡುವುದರಿಂದ ನೇಕಾರರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ, ಇದರಿಂದ ಕಷ್ಟವಾಗುತ್ತಿದೆ. ಇನ್ನಾದರೂ ನೇಕಾರಿಕೆ ಅನುಭವ ಇರುವವರನ್ನು ಜವಳಿ ಸಚಿವರನ್ನಾಗಿ ಮಾಡಿದರೆ ಒಳೆಯದು ಎಂದರು.

ರೈತರು ಹಾಗೂ ನೇಕಾರರು ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಹೇಳುವುವರು ರೈತರಿಗೆ ಯಾವುದೇ ಷರತ್ತುಗಳಿಲ್ಲದೆ ಸಾಲಮನ್ನಾ ಮಾಡುತ್ತಾರೆ. ಆದರೆ ನೇಕಾರರಿಗೆ ಹಲವು ಷರತ್ತುಗಳು ಹಾಕಿ ಸಾಲಮನ್ನಾ ಮಾಡುತ್ತಾರೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪ ಮಾಡಿದರು. ಗ್ರಾಮದ ದೇವಾಂಗ ಸಮಾಜದವರು ಎಂ.ಡಿ. ಲಕ್ಷ್ಮೀ  ನಾರಾಯಣ ಅವರನ್ನು ಸನ್ಮಾನಿಸಿದರು. ಈ ವೇಳೆ ವಿವೇಕಾನಂದ ಸ್ವಾಮಿಗಳು ಹಾಗೂ ಈಶ್ವರ ಸ್ವಾಮಿಗಳು, ಇಲ್ಲಕಲ್‌ ನಗರಸಭೆಯ ಮಾಜಿ ಅಧ್ಯಕ್ಷ ವೆಂಕಟೇಶ ಪುತ್ತ ಹಾಗೂ ಗ್ರಾಮದ ದೇವಾಂಗ ಸಮಾಜದ ಗುರು-ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next