Advertisement

ಸ್ವಚ್ಛ ಭಾರತ ಅಭಿಯಾನ ಶೇ.98 ಪೂರ್ಣ

01:18 PM Oct 07, 2017 | Team Udayavani |

ಧಾರವಾಡ: ಸ್ವಚ್ಛ ಭಾರತ ಅಭಿಯಾನದಡಿ ಧಾರವಾಡ ತಾಲೂಕು ಶೇ.98ರಷ್ಟು ಸಾಧನೆ ಮಾಡಿದ್ದು, ಉಳಿದ ಶೇ.2ರಷ್ಟು ಅ.15 ರೊಳಗೆ ಪೂರ್ಣಗೊಳಿಸುವಂತೆ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

Advertisement

ಧಾರವಾಡ ತಾಲೂಕಿನಲ್ಲಿ ಬಾಕಿ ಇರುವ ಶೌಚಾಲಯಗಳನ್ನು ಶೀಘ್ರ ಪೂರ್ಣಗೊಳಿಸುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ಮಾಡಲು ನೋಡಲ್‌ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚನೆ ನೀಡಿದರು. ಧಾರವಾಡ ತಾಲೂಕಿನ ನಿಗದಿ, ಶಿವಳ್ಳಿ, ಮಾದನಭಾವಿ, ಹಾರೋಬೆಳವಡಿ, ತಡಕೋಡ ಸೇರಿದಂತೆ 13 ಪಂಚಾಯತಿಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಕಾಮಗಾರಿ ಬಾಕಿ ಉಳಿದಿದ್ದು, ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. 

ಮುಂದಿನ ಸಭೆಯಲ್ಲಿ ಆಯಾ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಹಾಜರಾಗಬೇಕು. ಆದರೆ ಕೆಡಿಪಿ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಹೀಗಾಗಿ ಇಂದಿನ ಸಭೆಗೆ ಗೈರಾದ ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ತಾಪಂ ಅಧ್ಯಕ್ಷರು ಆದೇಶಿಸಿದರು. 

ಧಾರವಾಡ ಗ್ರಾಮೀಣ ಬಿಇಒ ವಿದ್ಯಾ ನಾಡಗೇರ ಮಾತನಾಡಿ, ತಾಲೂಕಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ಶಾಲೆಯ 9 ಮತ್ತು 10ನೇ ತರಗತಿಯ ಎಸ್ಸಿ-ಎಸ್ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ಎಂಬ ಅಕ್ಟೋಬರ್‌ ರಜೆಯ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ತಡಕೋಡ, ನರೇಂದ್ರ ಹಾಗೂ ಯಾದವಾಡ ಗ್ರಾಮಗಳ ಮೂರು ಕೇಂದ್ರಗಳಲ್ಲಿ ವಿಶ್ವಾಸ ಕಿರಣ ತರಬೇತಿ ನಡೆಯಲಿದೆ. ಒಂದು ಕೇಂದ್ರದಲ್ಲಿ ನೂರಕ್ಕು ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿದಿನ ಬೆಳಗ್ಗೆ 10:00ರಿಂದ ಮಧ್ಯಾಹ್ನ 1:00ರ ವರೆಗೆ ತರಗತಿಗಳು ನಡೆಯಲಿದ್ದು, ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. 

Advertisement

ತಾಲೂಕಿನಲ್ಲಿ ಕೇವಲ ಮೂರು ಕೇಂದ್ರಗಳಲ್ಲಿ ಈ ತರಬೇತಿ ಶಿಬಿರ ಹಮ್ಮಿಕೊಂಡರೇ ಉಳಿದ ಗ್ರಾಮದ ವಿದ್ಯಾರ್ಥಿಗಳು ಏನು ಮಾಡಬೇಕು. ಅವರು ತರಬೇತಿ ಶಿಬಿರದಿಂದ ವಂಚಿತರಾಗುವುದಿಲ್ಲವೇ? ಉಳಿದವರಿಗೂ ಈ ಶಿಬಿರದ ಲಾಭ ದೊರೆಯುವಂತೆ ನೀವೇಕೆ ಕಾರ್ಯಸೂಚಿ ರೂಪಿಸಲಿಲ್ಲ ಎಂಬುದಾಗಿ ಸಭೆಯಲ್ಲಿ ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ನಾಡಿಗೇರ, ನಾನು ಸಹ ಮೇಲಾಧಿಕಾರಿಗಳಿಗೆ ಈ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೇನೆ. ಆದರೂ ಸಹ ಕೇವಲ ಮೂರು ಕೇಂದ್ರಗಳಲ್ಲಿ ಶಿಬಿರ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ತಾಪಂ ಇಒ ರುದ್ರಸ್ವಾಮಿ ಮಾತನಾಡಿ, ತಾಲೂಕಿನಾದ್ಯಂತ ಕೆಲವು ಶಾಲೆಗಳಲ್ಲಿ ಮುಖ್ಯ ಶಿಕ್ಷಕಿಯರು ಕೇವಲ ಕಚೇರಿ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ.

ಇವರಿಗೆ ವಾರಕ್ಕೆ 11 ತರಗತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬ ನಿಯಮ  ಪಾಲಿಸುವಂತೆ ಖಡಕ್‌ ಸೂಚನೆ ನೀಡಬೇಕು ಎಂದು ಬಿಇಒ ಅವರಿಗೆ ಸೂಚಿಸಿದರು. ತಾಪಂ ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ, ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ ಬುಡ್ಡಿಕಾಯಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next