Advertisement
ಆದರೆ ಇದು ಆರಂಭ ಶೂರತ್ವಕ್ಕೆ ಮಾತ್ರ ಸೀಮಿತವಾಗಬಾರದು. ಯಾರೇ ಒತ್ತುವರಿ ಮಾಡಿದ್ದರೂ ಎಷ್ಟೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇದೊಂದು ರೀತಿಯ ಶಾಶ್ವತ ಪರಿಹಾರದಂತಾಗ ಬೇಕು. ಇಲ್ಲದಿದ್ದರೆ ಸರಕಾರ ಪ್ರತೀ ಬಾರಿ ಮಳೆ ಬಂದು ಪ್ರವಾಹ ಉಂಟಾದಾಗ ಭರವಸೆ ನೀಡುವುದು ಮತ್ತೆ ಮರೆಯುವುದು; ಹೆಸರಿಗೆ ಎಂಬಂತೆ ಒಂದೆರಡು ಕಡೆ ಜೆಸಿಬಿ ನುಗ್ಗಿಸಿ ಕಾರ್ಯಾಚರಣೆ ಮಾಡಿ ಸುಮ್ಮನಾಗುವುದು; ಮತ್ತೊಮ್ಮೆ ಮಳೆ ಬಂದಾಗ ಘರ್ಜಿಸುವುದು ಮಾಡಿದರೆ ಜನತೆಗೆ ನಂಬಿಕೆ ಬಾರದು.
Related Articles
Advertisement
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಳೆ ಬಂದಾಗ ಪ್ರವಾಹ ಉಂಟಾಗಿದ್ದ ಪ್ರದೇಶಗಳಲ್ಲಿ ಒತ್ತುವರಿ ತೆರವು ಮಾಡಿರುವುದು ಗಮನಾರ್ಹ. ಭೂಮಾಪಕರು ಗುರುತಿಸಿದಂತಹ ಒತ್ತುವರಿ ಪ್ರದೇಶವನ್ನು ಪಾಲಿಕೆಯ ಅಧಿಕಾರಿಗಳು, ಮಾರ್ಷಲ್‌ಗಳ ತಂಡವು ಪೊಲೀಸ್ ಸಿಬಂದಿ ಸಹಯೋಗದೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಒತ್ತುವರಿ ತೆರವುಕಾರ್ಯಚರಣೆ ನಡೆಸಿರುವ ಎಲ್ಲ ಕಡೆಗಳಲ್ಲಿಯೂ ಮತ್ತೂಮ್ಮೆ ಒತ್ತುವರಿ ಮಾಡದಂತೆ ಹಾಗೂ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್ ಗೋಡೆ ನಿರ್ಮಿಸದಂತೆ ಎಚ್ಚರಿಕೆ ನೀಡಿರುವುದು ಸರಿಯಾಗಿದೆ.ಈ ಕಾರ್ಯಾಚರಣೆ ಇಲ್ಲಿಗೆ ನಿಲ್ಲಬಾರದು. ನಿರಂತರವಾಗಿ ಮುಂದುವರಿಯಬೇಕು. ಕೇವಲ ಮಹದೇವಪುರ ವಲಯವಷ್ಟೇ ಅಲ್ಲದೆ ಯಲಹಂಕ, ಬೊಮ್ಮನಹಳ್ಳಿ, ದಾಸರಹಳ್ಳಿ, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ -ಹೀಗೆ ಎಲ್ಲ ವಲಯಗಳಲ್ಲಿಯೂ ಒತ್ತುವರಿ ಗುರುತಿಸಿ ತೆರವು ಮಾಡಬೇಕು. ಇಲ್ಲದಿದ್ದರೆ ಇಂದು ಮಹದೇವಪುರ ವಲಯದಲ್ಲಿ ಆದದ್ದು ಮುಂದೊಂದು ದಿನ ಮತ್ತೊಂದು ವಲಯದಲ್ಲಿ ಆಗಬಹುದು. ಹೀಗಾಗಿ ಇದೊಂದು ಸಂಕಲ್ಪದಂತೆ ಸರಕಾರ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಸರಕಾರಕ್ಕೂ ಒಳ್ಳೆಯ ಹೆಸರು ಬರಲು ಸಾಧ್ಯ. ಒತ್ತುವರಿ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಇರದೆ ಯಾರೇ ಆಗಲಿ, ಯಾವುದೇ ಪಕ್ಷದವರು ಇರಲಿ, ಪ್ರತಿಷ್ಠಿತ ಕಂಪೆನಿ ಇರಲಿ- ಒತ್ತುವರಿ ಕಂಡುಬಂದರೆ ತೆರವು ಮಾಡಬೇಕು. ವಿಪಕ್ಷಗಳು ಕೂಡ ಸರಕಾರದ ಈ ಕಾರ್ಯಕ್ಕೆ ಬೆಂಬಲ ನೀಡಬೇಕು. ಆರೋಪಕ್ಕೆ ಸೀಮಿತವಾಗದೆ ಸರಕಾರದ ಜತೆ ನಿಲ್ಲಬೇಕು. ಆಗ ಮಾತ್ರ ಸ್ಪಷ್ಟ ಸಂದೇಶ ರವಾನೆ ಸಾಧ್ಯ.