ರಾಯಚೂರು: ನಗರದ ಕೆಲವು ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು, ಸಮಾನ ಮನಸ್ಕರು ಒಗ್ಗೂಡಿ “ಸ್ವಚ್ಛ-ಸುಂದರ ಶಾಲೆ, ನಮ್ಮನಿಮ್ಮೆಲ್ಲರ ಹೊಣೆ’ ಎಂಬ ಧ್ಯೇಯವಾಕ್ಯದೊಂದಿಗೆ “ಸಂಕಲ್ಪ’ ಹೆಸರಿನ ಶಾಲಾ ಸ್ವಚ್ಛತಾ ಅಭಿಯಾನ ನಡೆಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಲಯನ್ಸ ಕ್ಲಬ್, ಗ್ರೀನ್ ರಾಯಚೂರು, ಶಿಲ್ಪಾ ಫೌಂಡೇಶನ್, ಲಿಯೋ ಕ್ಲಬ್, ಪರ್ಯಾವರಣ ಸಂರಕ್ಷಣೆ ಗತಿವಿ ಸಹಯೋಗದಲ್ಲಿ ನಗರದ ದೇವರು ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವತ್ಛತಾ ಕಾರ್ಯ ನಡೆಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಜನ್ ರಮೇಶ್ ಅಪ್ಪಾಸಾಹೇಬ್ ಮಾತನಾಡಿ, ಲಾಕ್ ಡೌನ್‌ನಲ್ಲಿ ಎಲ್ಲ ಶಾಲೆಗಳು ಸಂಪೂರ್ಣ ಮುಚ್ಚಿದ್ದರಿಂದ ಗಿಡ-ಗಂಟಿ ಬೆಳೆದಿದ್ದು, ತ್ಯಾಜ್ಯ ಸಂಗ್ರಹಗೊಂಡಿದೆ. ಮಕ್ಕಳಿಗೆ ಓದುವ ವಾತಾವರಣ ಇಲ್ಲದಾಗಿದೆ. ಇಂಥ ವೇಳೆ ಎಲ್ಲರೂ ಸೇರಿ ಶಾಲಾವರಣ ಸ್ವಚ್ಛತೆ ಮಾಡಿದ್ದು ಶ್ಲಾಘನೀಯ ಕೆಲಸ. ಸಸಿ ನೆಟ್ಟು ಅದರ ಪೋಷಣೆ ಜವಾಬ್ದಾರಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ನೀಡಿರುವುದು ಉತ್ತಮ ನಿರ್ಧಾರ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ಮಹಾಲಿಂಗಪ್ಪ ಮಾತನಾಡಿ, ನಾನು ಕೂಡ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದೇನೆ. ಆರೋಗ್ಯ ರಕ್ಷಣೆ, ಪೌಷ್ಟಿಕ ಆಹಾರ ಸೇವನೆ, ಶಾಲೆ-ಮನೆ-ಬೀದಿಗಳಲ್ಲಿ ಸ್ವತ್ಛತೆ ಕಾಪಾಡುವುದು ಅಗತ್ಯ. ಎಲ್ಲರೂ ಮುಂದೆ ಇಂಥ ಸಾಮಾಜಿಕ ಕಾರ್ಯ ಮಾಡಬೇಕು ಎಂದರು.
ಗ್ರೀನ್ ರಾಯಚೂರು ಕಾರ್ಯದರ್ಶಿ ರಾಜೇಂದ್ರಕುಮಾರ್ ಶಿವಾಳೆ ಮಾತನಾಡಿ, ಲಾಕ್‌ಡೌನ್ ಬಳಿಕ ಸರ್ಕಾರಿ ಶಾಲೆಗಳ ಆವರಣ ಅಶುಚಿತ್ವದ ಸಮಸ್ಯೆ ತಲೆದೂರಿರುವ ಕಾರಣ ಶಾಲೆಗಳನ್ನು ಸ್ವತ್ಛಗೊಳಿಸುವ ಜೊತೆಗೆ ಸಸಿ ನೆಡಲಾಗುವುದು. ಶಾಲಾ ಕಟ್ಟಡಗಳಿಗೆ ಸುಣ್ಣ-ಬಣ್ಣ ಮಾಡಿಸುವ ಸಂಕಲ್ಪ ಮಾಡಿದ್ದೇವೆ. ವಾರಕ್ಕೊಂದು ಶಾಲೆಯಂತೆ ಬರುವ ದಿನಗಳಲ್ಲಿ ನಗರದ ಎಲ್ಲ 10-15 ಶಾಲೆಗಳಲ್ಲಿ ಅಭಿಯಾನ ನಡೆಸಲಾಗುವುದು ಎಂದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರತಿಜ್ಞಾವಿಧಿ ಬೋ ಧಿಸಲಾಯಿತು. ಈ ವೇಳೆ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಗೋವಿಂದರಾಜ, ಹಿರಿಯ ಶಸ್ತ್ರಚಿಕಿತ್ಸಕ ಡಾ| ಎಂ.ಕೆ. ರಾಮಕೃಷ್ಣ, ಬಿಇಒ ಚಂದ್ರಶೇಖರ್ ದೊಡ್ಡಮನಿ, ಪ್ರಕಾಶ್ ಕುಲಕರ್ಣಿ, ಉದಯ್ ಕಿರಣ, ಪಿಯುಶ್ ಜೈನ್, ಉಪನ್ಯಾಸಕ ವಿಜಯ್ ಸರೋದೆ, ಅಮಿತ್ ದಂಡಿನ, ವಿನೋದ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ರಾಜ್ಯ ಸದಸ್ಯರಾದ ಸರಸ್ವತಿ ಕಿಲಕಿಲೆ, ಶಿಕ್ಷಕಿ ಎಂ. ಸರೋಜಾ, ಶ್ರೀದೇವಿ ಇತರರಿದ್ದರು.