Advertisement

ಹಿಂದೂ ಕಾರ್ಯಕರ್ತರಿಂದ ಸಿದ್ದ ಸರೋವರ ಕೆರೆಯ ಸ್ವಚ್ಛತೆ

08:39 PM Aug 02, 2023 | Team Udayavani |

ಮಹಾಲಿಂಗಪುರ: ಪಟ್ಟಣದ ಕುಡಿಯುವ ನೀರಿನ ಮೂಲಾಧಾರವಾದ ಐತಿಹಾಸಿಕ ಸಿದ್ದ ಸರೋವರ ಕೆರೆಯನ್ನು ಪಟ್ಟಣದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಬಜರಂಗದಳದ 60ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಸ್ವಚ್ಛತೆ ಮಾಡಿ ಕೆರೆಯ ನೋಟವನ್ನೇ ಬದಲಿಸಿದ್ದಾರೆ.

Advertisement

ಬಯಲು ಶೌಚವಾಗಿದ್ದ ಕೆರೆ :
ಸಿದ್ದ ಸರೋವರ ಕೆರೆಯನ್ನು 2003ರಲ್ಲಿ ಅಗಲಿಕರಣ ಮತ್ತು ಹೂಳೆತ್ತುವ ಕೆಲಸ ಮಾಡಲಾಗಿತ್ತು. ನಂತರ 2017ರ ಜುಲೈ ತಿಂಗಳಲ್ಲಿ ಅಂದು ಸಚಿವೆ ಉಮಾಶ್ರೀ ಅವರು ಸರ್ಕಾರದಿಂದ ಒಂದು ಕೋಟಿ ಹಣ ಬಿಡುಗಡೆ ಮಾಡಿಸಿ ಕರೆ ಹೂಳೆತ್ತುವ ಮತ್ತು ಕೆರೆಯ ಒಡ್ಡಿನ ಸುತ್ತಲು ಕಲ್ಲಿನಹಾಸು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆದರೆ ಪೂರ್ಣ ಕೆಲಸ ಮುಗಿಯದೇ ಕೇವಲ 70 ಲಕ್ಷ ಖರ್ಚಾಗಿ, 30 ಲಕ್ಷ ಅನುದಾನವು ಮರಳಿ ಜಿಲ್ಲಾಧಿಕಾರಿಗಳ ಕಛೇರಿಗೆ ಹೋಗಿತ್ತು. 2017ರ ನಂತರ ಕಳೆದ 7 ವರ್ಷಗಳಿಂದ ಕೆರೆಯ ಸ್ವಚ್ಛತೆಯತ್ತ ಯಾರು ಗಮನಹರಿಸದ ಕಾರಣ ಕೆರೆಯ ಸುತ್ತಲಿನ ಪ್ರದೇಶವು ಬಯಲುಶೌಚದ ಪ್ರದೇಶವಾಗಿ ಯಾರು ಸಂಚರಿಸಲು ಸಾಧ್ಯವಿಲ್ಲದಷ್ಟು ಹೊಲಸಾಗಿತ್ತು.

ಸ್ವಯಂಪ್ರೇರಿತ ಸ್ವಚ್ಛತೆ :
ಸುಮಾರು 12 ಎಕರೆಗೂ ಅಧಿಕ ವಿಸ್ತೀರ್ಣವುಳ್ಳ ಕೆರೆಯ ಸುತ್ತಲಿನ ಪರಿಸರವನ್ನು ನೋಡಲಾಗದೇ ಪಟ್ಟಣದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗದಳದ 60ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಪುರಸಭೆ ಸದಸ್ಯ ರವಿ ಜವಳಗಿ ನೇತೃತ್ವದಲ್ಲಿ ಜುಲೈ 22ರಂದು ಸ್ವಚ್ಛತಾಕಾರ್ಯವನ್ನು ಆರಂಭಿಸಿ ಅಗಷ್ಟ 2ರ ಬುಧವಾರದವರೆಗೆ ನಿರಂತರ 12 ದಿನಗಳ ಕಾಲ ಸ್ವಚ್ಛತೆಯನ್ನು ಮಾಡಿ ಕೆರೆ ನಿರ್ಮಾಣದ 50 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಘಟನೆಯೊಂದು ಸಂಪೂರ್ಣ ಕೆರೆಯ ಸ್ವಚ್ಛತೆ ಮಾಡಿದ ಮೊದಲ ಸಂಘಟನೆ ಎಂಬುವದು ವಿಶೇಷ.

ನಿತ್ಯ 3 ಗಂಟೆಗಳ ಕಾಲ ಪರಿಶ್ರಮ :
ಪ್ರತಿನಿತ್ಯ ಮುಂಜಾನೆ 6 ರಿಂದ 9 ರವರೆಗೆ ಸುಮಾರ 60 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಬಂದು ಸ್ವಚ್ಛತಾ ಕಾರ್ಯದ ಸೇವೆಯೆಂಬ ಯಜ್ಞದಲ್ಲಿ ಭಾಗವಹಿಸಿದ್ದರ ಫಲವಾಗಿ 12 ದಿನಗಳಲ್ಲಿ ಕೆರೆಯ ಪರಿಸರವು ಸಂಪೂರ್ಣ ಬದಲಾಗಿದೆ. ಮಧ್ಯದ ಬಾಟಲಿ, ಗಿಡಗಂಟಿ, ಪ್ಲಾಸ್ಟಿಕ್ ತಾಜ್ಯ, ಮುಳ್ಳುಕಂಟಿ, ನಿರುಪಯೋಗಿ ಬಟ್ಟೆಗಳ ರಾಶಿ ಸೇರಿದಂತೆ ಅಲ್ಲಿನ ಎಲ್ಲಾ ತಾಜ್ಯವನ್ನು ತೆರವುಗೊಳಿಸಿ, ಸುತ್ತಲು ಇರುವ ಗಿಡಗಳ ಬುಡಕ್ಕೆ ಕಸಿಮಾಡುವ ಮೂಲಕ ಸುಮಾರು 1ಕೀಮಿಗೂ ಅಧಿಕ ಸುತ್ತಳತೆಯ ಬೃಹತ್ ಕೆರೆಯ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಇತರ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ.

ಕಂಬದ ಸಿಡಿ ನಿರ್ಮಾಣ :
ಕೆರೆಯ ಉತ್ತರ ಭಾಗದಲ್ಲಿ ಕಾಲುವೆ ನೀರು ಬರಲು ಬೃಹತ ಚರಂಡಿ ನಿರ್ಮಿಸಿದ್ದರಿಂದ ಸಿಡಿ ಇಲ್ಲದೇ ಪಾದಚಾರಿಗಳು ಕೆರೆ ಸುತ್ತಲು ಸಾಧ್ಯವಾಗುತ್ತಿರಲಿಲ್ಲ. ಕೆರೆಯ ಸ್ವಚ್ಛತೆಯ ಜೊತೆಗೆ ರೈತರ ಹೊಲದಲ್ಲಿನ ನಿರುಪಯುಕ್ತ ಸಿಮೆಂಟ ಕಂಬಗಳನ್ನು ತಂದು ಕಂಬದ ಸಿಡಿ ನಿರ್ಮಿಸಿ, ವಾಯು ವಿಹಾರಿಗಳು ಕೆರೆ ಸುತ್ತಲು ಸಂಚರಿಸಲು ಅನುಕೂಲ ಕಲ್ಪಿಸಿದ್ದಾರೆ. ನಿತ್ಯ ಮುಂಜಾನೆ ಸಂಜೆ ಇಲ್ಲಿ ಜನ ಸಂಚರಿಸುವಂತಾದರೆ ಕೆರೆಯ ಸ್ವಚ್ಛತೆಯನ್ನು ನಿರಂತರ ಕಾಪಾಡಲು ಸಾಧ್ಯವಾಗುತ್ತದೆ ಎಂಬುದು ಕಾರ್ಯಕರ್ತರ ಅಭಿಪ್ರಾಯ.

Advertisement

ಕೆರೆ ಈಗ ವಾಯುವಿಹಾರದ ತಾಣ :
ಹಿಂದೂ ಸಂಘಟನೆಗಳ ಕಾರ್ಯಕರ್ತರ 12 ದಿನಗಳ ನಿರಂತರ ಸ್ವಚ್ಛತಾ ಕಾರ್ಯದ ಸೇವೆಯ ನಂತರ ಸಿದ್ದ ಸರೋವರ ಕೆರೆಯ ಆವರಣ ಇಂದು ವಾಯು ವಿಹಾರದ ಸುಂದರ ತಾಣವಾಗಿ ಕಂಗೊಳಿಸುತ್ತಿದೆ. ಪಟ್ಟಣದ ವಾಯು ವಿಹಾರಿಗಳು, ಹಿರಿಯರು, ಯುವಕರು ನಿತ್ಯ ಕೆರೆಯ ಸುತ್ತಲು ವಾಯು ವಿಹಾರ ಪ್ರಾರಂಭಿಸಿದರೆ ಕೆರೆಯ ಪಕ್ಕದ ನಿವಾಸಿಗಳಿಂದ ಆಗುತ್ತಿರುವ ಬಯಲುಶೌಚ ತಪ್ಪುತ್ತದೆ. ನಿರಂತರವಾಗಿ ಕೆರೆಯ ಪರಿಸರ ಸ್ವಚ್ಛ ಮತ್ತು ಸುಂದರವಾಗಿ ಉಳಿಯಲು ಅನುಕೂಲವಾಗುತ್ತದೆ. ಜೊತೆಗೆ ಸ್ಥಳೀಯ ಆಡಳಿತದ ಪುರಸಭೆಯ ಅಧಿಕಾರಿಗಳು ಭವಿಷ್ಯದಲ್ಲಿ ಕೆರೆಯ ಸುತ್ತಲು ತಂತಿಬೇಲಿ ಅಳವಡಿಸಿ, ಸೋಲಾರ ದೀಪ, ವಾಯು ವಿಹಾರಿಗಳ ಅನುಕೂಲಕ್ಕಾಗಿ ಕಲ್ಲಿನಕುರ್ಚಿಗಳನ್ನು ಅಳವಡಿಸಿ ಕೆರೆಯ ಸ್ವಚ್ಛತೆಯನ್ನು ನಿರಂತರವಾಗಿ ಉಳಿಸಿಕೊಂಡು ಹೋಗುವದು ಭವಿಷ್ಯದ ದೊಡ್ಡ ಸವಾಲಾಗಿದೆ.

ಸಾರ್ವಜನಿಕರು ಮತ್ತು ಪುರಸಭೆ ಸಹಕಾರ ಅಗತ್ಯ :
ಮೊದಲ 7 ದಿನಗಳವರೆಗೆ ಸತತ ಜಡಿಮಳೆಯ ನಡುವೆಯೇ ಕೆರೆಯ ಸ್ವಚ್ಛತಾಕಾರ್ಯ ಮಾಡಿದೇವು. ಆರಂಭದ ಎರಡು ದಿನ ನಿರಂತರಮಳೆ ಮತ್ತು ಬಯಲು ಶೌಚದ ವಾಸನೆಯಿಂದಾಗಿ ನಮ್ಮ ಕೆಲ ಕಾರ್ಯಕರ್ತರು ವಾಂತಿಮಾಡಿಕೊಂಡಿದ್ದಾರೆ. ಅಷ್ಟೊಂದು ಹದಗೆಟ್ಟಿದ್ದ ಕೆರೆಯ ಪರಿಸರದ ಸ್ವಚ್ಛತೆಯ ಸಂಕಲ್ಪ ಹೊಂದಿದ್ದ ನಾವೆಲ್ಲರೂ ಸತತ 12 ದಿನಗಳ ಕಾಲ 60 ಕಾರ್ಯಕರ್ತರು ಕಷ್ಟಪಟ್ಟು ಕೆರೆಯ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದೇವೆ. ಕೆರೆಯ ಸುತ್ತಮುತ್ತಲಿನ ನಿವಾಸಿಗಳು ಕೆರೆಯಲ್ಲಿ ತ್ಯಾಜ್ಯಹಾಕುವದನ್ನು ಮತ್ತು ಬಯಲುಶೌಚವನ್ನು ನಿಲ್ಲಿಸಿದಾಗ ಮಾತ್ರ ಕೆರೆಯ ಆವರಣವು ಸದಾ ಸ್ವಚ್ಛತೆ ಉಳಿಯಲು ಸಾಧ್ಯ. ಜೊತೆಗೆ ಪುರಸಭೆಯವರು ಕೆರೆಯ ಸ್ವಚ್ಛತೆಗಾಗಿ ಹೆಚ್ಚಿನ ಕಾಳಜಿವಹಿಸುವುದು ಅಗತ್ಯವಾಗಿದೆ.

ಸೇವಾಯಜ್ಞದಲ್ಲಿ ಭಾಗವಹಿಸಿದ ಕಾರ್ಯಕರ್ತರು :
ಪುರಸಭೆ ಸದಸ್ಯ ರವಿ ಜಳವಗಿ, ಪತ್ರಕರ್ತ ಚಂದ್ರಶೇಖರ ಮೋರೆ, ಕಾರ್ಯಕರ್ತರಾದ ಸಚಿನ ಕಲ್ಮಡಿ, ನಂದು ಲಾತೂರ, ರಾಘು ಪವಾರ, ಬೈರೇಶ ಆದೆಪ್ಪನವರ, ಅಭಿ ಲಮಾಣಿ, ಹಣಮಂತ ನಾವ್ಹಿ, ಅರ್ಜುನ ಪವಾರ, ಕೃಷ್ಣಾ ಕಳ್ಳಿಮನಿ, ಬಸು ಮುರಾರಿ, ಆನಂದ ಮಡ್ಡೆನ್ನವರ, ಶ್ರೀನಿಧಿ ಕುಲಕರ್ಣಿ, ಜಗದೀಶ ಜಕ್ಕನ್ನವರ, ಈರಪ್ಪ ಹುಣಶ್ಯಾಳ, ಶಿವು ಕಲ್ಮಡಿ, ರಾಜು ನಾವ್ಹಿ, ಚೇತನ ಬಂಡಿವಡ್ಡರ, ಮಹಾಲಿಂಗ ಹಾವನಳ್ಳಿ, ಯಲ್ಲಪ್ಪ ಬನ್ನೆನ್ನವರ, ಮಹಾಲಿಂಗ ದೇಸಾಯಿ, ಆನಂದ ಬಂಡಿಗಣಿ, ಚನ್ನು ಆರೇಗಾರ, ಆನಂದ ಮಾಳವದೆ, ಧರ್ಮು ಪೂಜಾರಿ, ತಮ್ಮಣ್ಣ ಆದೆಪ್ಪನವರ, ಸಾಗರ ಪರೀಟ, ಹರೀಷ್ ಮುಕ್ಕೆನ್ನವರ, ರಾಕೇಶ ಕೆಸರಗೊಪ್ಪ, ಶಶಿ ಬದ್ನಿಕಾಯಿ, ಸಿ.ಬಿ.ಭಯಂತ್ರಿ, ಪ್ರಜ್ವಲ ಶೆಟ್ಟಿ, ಸಂತೋಷ ಹಜಾರೆ, ಅಭಿ ಗುಮಾಟೆ, ಮಂಜು ಸಿಂಪಿ, ಮಹಾದೇವ ಮಾಂಗ, ಕಿರಣ ದಲಾಲ, ಸುರೇಶ ಕೊಣ್ಣುರ, ಮಹಾಲಿಂಗ ಘಟ್ಟೆಪ್ಪವರ, ಸಂತೋಷ ಉಕ್ಕಲಿ, ಅನೀಲ ಖವಾಸಿ, ಆನಂದ ಶಿರಗುಪ್ಪಿ, ರಾಘು ಗರಗಟ್ಟಿ, ಪ್ರಭು ನುಚ್ಚಿ, ಸುನೀಲ ರಾಮೋಜಿ, ದತ್ತ ಯರಗಟ್ಟಿ, ಸಾಗರ ಭೋವಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

-ಚಂದ್ರಶೇಖರ ಮೋರೆ. ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next