Advertisement

ಪ್ರಮುಖ ನಾಲಾಗಳ ಸ್ವಚ್ಛತೆಗೆ ಮುಂದಾದ ಪಾಲಿಕೆ

09:40 AM May 25, 2020 | Suhan S |

ಹುಬ್ಬಳ್ಳಿ: ಮಳೆಗಾಲ ಆರಂಭಕ್ಕೂ ಮುನ್ನಾ ಮಹಾನಗರ ವ್ಯಾಪ್ತಿಯ ಪ್ರಮುಖ ನಾಲಾ ಹೂಳೆತ್ತುವ ಹಾಗೂ ಗಟಾರುಗಳ ಸ್ವತ್ಛತೆಗೆ ಮಹಾನಗರ ಪಾಲಿಕೆ ಮುಂದಾಗಿದ್ದು, ಇನ್ನೊಂದು ತಿಂಗಳಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲು ಕಾರ್ಯ ಪ್ರವೃತ್ತವಾಗಿದೆ.

Advertisement

ಅವಳಿನಗರದ ಪ್ರಮುಖ ನಾಲಾಗಳ ಒತ್ತುವರಿ ಹಾಗೂ ಹೂಳೆತ್ತುವಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಹಿಂದಿನ ವರ್ಷ ಮಹಾ ಮಳೆ ದುರಂತಕ್ಕೆ ಕಾರಣವಾಗಿತ್ತು. ಉಣಕಲ್ಲ ನಾಲಾ ತುಂಬಿ ಹರಿದ ಪರಿಣಾಮ ಅಕ್ಕಪಕ್ಕದ ಪ್ರದೇಶಗಳು ನೀರಿನಿಂದ ಆವೃತ್ತವಾಗಿ ಸುಮಾರು 500 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ನಾಲಾ ಮೇಲಿನ ಸಂಪರ್ಕ ಸೇತುವೆಗಳು ಕೂಡ ಕೊಚ್ಚಿಕೊಂಡು ಹೋಗಿದ್ದವು. ಹೀಗಾಗಿ ಕಳೆದ ವರ್ಷದ ಸಂಭವಿಸಿದ ಅವಘಡ ಮರುಕಳಿಸಬಾರದು ಎನ್ನುವ ಕಾರಣಕ್ಕೆ ಮಹಾನಗರ ಪಾಲಿಕೆ ಮಹಾನಗರ ವ್ಯಾಪ್ತಿಯ ಪ್ರಮುಖ ಹಾಗೂ ಇನ್ನಿತರೆ ನಾಲಾ ಹಾಗೂ ಗಟಾರುಗಳ ಸ್ವತ್ಛತೆಗೆ ಮುಂದಾಗಿದೆ.

ಮಳೆಗಾಲ ಪೂರ್ವ ತಯಾರಿಗೆ ಏಪ್ರಿಲ್‌ ತಿಂಗಳಲ್ಲಿ ನಾಲಾಗಳ ಸ್ವಚ್ಛತಾ ಕಾರ್ಯ ಆರಂಭವಾಗಬೇಕು. ಆದರೆ ಈಬಾರಿ ಕೋವಿಡ್ ಸೋಂಕಿನ ವಿರುದ್ಧ ಹೋರಾಟದ ನಡುವೆಯೂ ಏಪ್ರಿಲ್‌ ಮೊದಲ ವಾರದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಲಾಕ್‌ ಡೌನ್‌ ಪರಿಣಾಮ ಜನರ ಓಡಾಟ ಹಾಗೂ ಯಾವುದೇ ಅಡ್ಡಿ ಆತಂಕವಿಲ್ಲದೆ ನಾಲಾ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ಹಾನಿಯಾಗಿದ್ದ ಪ್ರದೇಶಗಳಲ್ಲಿನ ನಾಲಾ ಹೂಳು, ಸುತ್ತಲೂ ಬೆಳೆದಿದ್ದ ಗಿಡ ಗಂಟಿ, ತ್ಯಾಜ್ಯ ವಸ್ತುಗಳನ್ನು ಮೇಲೆತ್ತಿ ಅದೇ ದಿನ ಬೇರೆಡೆಗೆ ಸಾಗಿಸುವ ಕೆಲಸ ನಡೆದಿದೆ.

ದೊಡ್ಡ ನಾಲಾಗಳಿಗೆ ಆದ್ಯತೆ: ತೀವ್ರ ಮಳೆಯಿಂದ ಹಾನಿಯುಂಟು ಮಾಡಿದ ನಾಲಾಗಳ ಸ್ವಚ್ಛತೆಗೆ ಪಾಲಿಕೆ ಮೊದಲ ಆದ್ಯತೆ ನೀಡಿದೆ. ಉಣಕಲ್ಲ ಕೆರೆ ಕೋಡಿ ಹರಿದ ಪರಿಣಾಮ ನಾಲಾ ಅಕ್ಕಪಕ್ಕದ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯುಂಟಾಗಿತ್ತು. ಹೀಗಾಗಿಯೇ ಕೆರೆ ತುಂಬಿದ ನಂತರ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಉಣಕಲ್ಲ ಕರೆಯಿಂದ ಗಬ್ಬೂರುವರೆಗೂ ಹೂಳು ಹಾಗೂ ಬೆಳೆದಿರುವ ಗಿಡ ಗಂಟಿಗಳ ಸ್ವತ್ಛತಾ ಕಾರ್ಯ ನಡೆದಿದ್ದು, ಇದೀಗ ಸುಮಾರು 1 ತಿಂಗಳು ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಗಬ್ಬೂರುವರೆಗೂ ಹೂಳೆತ್ತುವ ಕಾರ್ಯ ಪೂರ್ಣಗೊಳ್ಳಲಿದೆ. ಇನ್ನು ಧಾರವಾಡದ ಚನ್ನಬಸವೇಶ್ವರ ನಗರದ, ಭಾವಿಕಟ್ಟಿ ಪ್ಲಾಟ್‌ ಸೇರಿದಂತೆ ಇನ್ನಿತರೆ ಪ್ರಮುಖ ನಾಲಾಗಳನ್ನು ಮೊದಲ ಹಂತದಲ್ಲಿ ಸ್ವತ್ಛಗೊಳಿಸಲಾಗುತ್ತಿದ್ದು, ಇವು ಪೂರ್ಣಗೊಂಡ ನಂತರ ಇನ್ನಿತರ ಸಣ್ಣ ಪುಟ್ಟ ನಾಲಾಗಳ ಹೂಳೆತ್ತುವ ಕಾರ್ಯ ನಡೆಯಲಿದೆ.

ವಾರಕ್ಕೊಮ್ಮೆ ಗಟಾರು ಸ್ವಚ್ಛತೆ: ಪ್ರಮುಖ ನಾಲಾಗಳ ಜತೆಗೆ ಸಣ್ಣಪುಟ್ಟ ಚರಂಡಿ ಹಾಗೂ ಗಟಾರು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಪ್ರತಿ ವಾರಕ್ಕೊಮ್ಮೆ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಮಳೆಗಾಲ ಆರಂಭವಾಗವುದರೊಳಗೆ ಗಟಾರು ಸ್ವತ್ಛತಾ ಕಾರ್ಯ ಪೂರ್ಣಗೊಳ್ಳಬೇಕು ಎಂದು ವಲಯ ಸಹಾಯಕ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಾರ್ಡುವಾರು ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಳ್ಳುತ್ತಿದಂತೆ ಸಂಜೆಯೊಳಗೆ ಅಲ್ಲಿಂದ ಕಸ ಎತ್ತುವ ಕೆಲಸ ನಡೆಯುತ್ತಿದೆ. ಆದರೆ ಕೆಲವಡೆ ಹೂಳು ಪಕ್ಕದಲ್ಲಿ ಬಿಡುವುದರಿಂದ ಮಳೆಗೆ ಮತ್ತೆ ಗಟಾರು ಸೇರುತ್ತಿದೆ. ಗಟಾರು-ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಒಂದು ತಿಂಗಳಲ್ಲಿ ಪೂರ್ಣಗೊಳಿಸುವ ನಿಟ್ಟನಲ್ಲಿ ಸ್ವಚ್ಛತೆ ನಡೆಯುತ್ತಿದೆ.

Advertisement

ಟಾಟಾ ಹಿಟಾಚಿ ನೆರವು: ಟಾಟಾ ಹಿಟಾಚಿ ಕಂಪನಿ ತನ್ನ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನಾಲಾ ಸ್ವಾತ್ಛತೆಗೆ ಎರಡು ಹಿಟಾಚಿಗಳನ್ನು ನೀಡಿದ್ದು, ಉಣಕಲ್ಲ ನಾಲಾ ಸ್ವಚ್ಛತಾ ಕಾರ್ಯಕ್ಕೆ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇನ್ನು ಎತ್ತಿದ ಹೂಳನ್ನು ಬೇರೆಡೆಗೆ ಸಾಗಿಸಲು ಗುತ್ತಿಗೆದಾರರೊಬ್ಬರು ಟಿಪ್ಪರ್‌ಗಳನ್ನು ನೀಡಿದ್ದಾರೆ. ಹೀಗಾಗಿ ಮಾಹಾನಗರ ವ್ಯಾಪ್ತಿಯ ಪ್ರಮುಖ ಹಾಗೂ ಕಳೆದ ವರ್ಷದ ಭಾರಿ ಅನಾಹುತ ಸೃಷ್ಟಿಸಿದ ಉಣಕಲ್ಲ ನಾಲೆ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ಮಳೆಗಾಲ ಆರಂಭವಾಗುವುದರೊಳಗೆ ಮುನ್ನೆಚ್ಚರಿಕಾ ಕಾರ್ಯ ಪೂರ್ಣಗೊಳಿಸಲು ಪಾಲಿಕೆ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಕೋವಿಡ್  ಸೋಂಕಿನ ವಿರುದ್ಧದ ಹೋರಾಟ  ದೊಟ್ಟಿಗೆ ಮಳೆಗಾಲದ ಪೂರ್ವ ತಯಾರಿಗೆ ಪಾಲಿಕೆ ಆದ್ಯತೆ ನೀಡಿದ್ದು, ಈ ಕಾರ್ಯ ಕೆಲ ನಾಲಾ, ಗಟಾರು ಸ್ವಚ್ಛತೆಗೆ ಸೀಮಿತವಾಗದೆ ಮಹಾನಗರ ವ್ಯಾಪ್ತಿಯ ಎಲ್ಲಾ ಭಾಗದಲ್ಲೂ ಈ ಕಾರ್ಯ ನಡೆಯಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಮಳೆಗಾಲದ ಆರಂಭಕ್ಕೂ ಮುನ್ನಾ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕೊರೊನಾ ಸೋಂಕಿನ ವಿರುದ್ಧದ ಕಾರ್ಯದ ಜತೆಗೆ ಈ ಕಾರ್ಯಕ್ಕೂ ಪ್ರಮುಖ ಆದ್ಯತೆ ನೀಡಲಾಗಿದೆ. ಹಿಂದಿನ ವರ್ಷ ಹಾನಿಯುಂಟು ಮಾಡಿದ ನಾಲಾ, ಚರಂಡಿಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಇದು ಪೂರ್ಣಗೊಂಡ ನಂತರ ಇತರೆ ನಾಲಾ ಸ್ವತ್ಛತೆ ಮಾಡಲಾಗುವುದು. ಈ ಎಲ್ಲಾ ಕಾರ್ಯಗಳನ್ನು ಮುಂದಿನ ಒಂದು ತಿಂಗಳದೊಳಗೆ ಪೂರ್ಣಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ. -ಡಾ|ಸುರೇಶ ಇಟ್ನಾಳ, ಆಯುಕ್ತ, ಹು-ಧಾ ಮಹಾನಗರ ಪಾಲಿಕೆ

 

– ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next