Advertisement

ಎಪಿಎಂಸಿಯಲ್ಲಿ ಸ್ವಚ್ಛತೆ ಮರೀಚಿಕೆ

09:14 PM Oct 13, 2019 | Lakshmi GovindaRaju |

ಚಿಂತಾಮಣಿ: ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಚ್ಛತೆ, ಮೂಲಭೂತ ಸೌಲಭ್ಯಗಳಿಲ್ಲದೇ ರೈತರು ಪರದಾಡುತ್ತಿದ್ದು, ಕೂಡಲೇ ಮಾರುಕಟ್ಟೆಯಲ್ಲಿ ಸಮಸ್ಯೆಗಳನ್ನು ಈಡೇರಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಬೇಕಿದೆ ಎಂದು ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಾರುಕಟ್ಟೆ ಕಾರ್ಯದರ್ಶಿ ಉಮಾ ಅವರನ್ನು ಒತ್ತಾಯಿಸಿದ್ದಾರೆ.

Advertisement

ಸ್ವಚ್ಛತೆ ಮರೀಚಿಕೆ: ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಮತ್ತು ಟೊಮೆಟೋ ಹಾಗೂ ಗೋಡಂಬಿ ಸೇರಿದಂತೆ ಇತರೆ ತರಕಾರಿಗಳ ಹರಾಜಿಗೆ ರಾಜ್ಯದ ವಿವಿಧ ಕಡೆಗಳಿಂದ ಬಂದ ರೈತರು ಹರಾಜಿನಲ್ಲಿ ತಮ್ಮ ಬೆಳೆಗಳನ್ನು ಮಾರಾಟ ಮಾಡಿಕೊಳ್ಳುತ್ತಾರೆ. ಇದರಿಂದ ಮಾರುಕಟ್ಟೆಗೆ ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ಮಾರುಕಟ್ಟೆಯಲ್ಲಿ ಮಾತ್ರ ಸ್ವಚ್ಛತೆ ಮರೀಚಿಕೆಯಾಗಿದೆ. ಕಸ ಕಡ್ಡಿ ಎಲ್ಲೆಂದರಲ್ಲಿ ಬಿಸಾಡಿದ ಪರಿಣಾಮ ಕೊಳಚೆ ನೀರು ನಿಂತು ಮಾರುಕಟ್ಟೆಯಲ್ಲ ಅವ್ಯವಸ್ಥೆಯ ಆಗರವಾಗಿದೆ.

ಗಬ್ಬುನಾರುತ್ತಿರುವ ಶೌಚಾಲಯ: ಎಪಿಎಂಸಿ ಮಾರುಕಟ್ಟೆಯಲ್ಲಿರುವ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ. ಉಪಯೋಗಕ್ಕೆ ಯೋಗ್ಯವಿಲ್ಲದಿರುವುದರಿಂದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುವ ರೈತರು ಪರದಾಡುವಂತಾಗಿದ್ದು, ಶೌಚಾಲಯಗಳನ್ನು ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪ್ರತ್ಯೇಕ ಸ್ಥಳ ನಿಗದಿಪಡಿಸಿ: ಎಪಿಎಂಸಿ ಯಾರ್ಡ್‌ನಲ್ಲಿ ಹೆಚ್ಚಿನ ವ್ಯಾಪಾರ ಮತ್ತು ವ್ಯವಹಾರ ನಡೆಯುವುದರಿಂದ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ನಿಯೋಜಿಸಿ ಟ್ರಾಫಿಕ್‌ಜಾಮ್‌ ನಿಯಂತ್ರಿಸಲು ಕ್ರಮ ಜರುಗಿಸುವುದು ಮತ್ತು ಲಾರಿ, ಟೆಂಪೋ ಹಾಗೂ ಆಟೋ, ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕವಾದ ಸ್ಥಳ ನಿಗದಿಡಿಪಡಿಸಿ ವಾಹನ ಕಳ್ಳತನ ನಡೆಯದಂತೆ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದರು.

ಜಾನುವಾರು ಸಂತೆಗೆ ಸ್ಥಳ ನೀಡಿ: ಪುರಾತನ ಕಾಲದಿಂದ ನಡೆಯುತ್ತಿದ್ದ ಜಾನುವಾರುಗಳ ಸಂತೆಯ ಜಾಗವನ್ನು ಖಾಲಿ ಮಾಡಿಸಿದ್ದು, ಅನೇಕ ವರ್ಷಗಳಿಂದ ಜಾನುವಾರುಗಳ ಸಂತೆ ನಡೆಸಲು ಜಾಗವಿಲ್ಲದೇ ಖಾಸಗಿ ಜಾಗದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತಿದೆ. ಕೂಡಲೇ ಜಾನುವಾರುಗಳ ಸಂತೆ ನಡೆಸಲು ಸರ್ಕಾರ ಜಾಗವನ್ನು ಗುರುತಿಸಿಕೊಡಬೇಕೆಂದು ಒತ್ತಾಯಿಸಿದರು. ಕರ್ನಾಟಕ ರೈತ ಸಂಘದ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ಉಮಾ ಮಾತನಾಡಿ, ಶೀಘ್ರವೇ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

Advertisement

ಜೆ.ವಿ.ರಘುನಾಥರೆಡ್ಡಿ, ಕೆ.ವೆಂಕಟರಾಮಯ್ಯ, ಎಸ್‌.ವೆಂಕಟಸುಬ್ಬಾರೆಡ್ಡಿ, ತಿಮ್ಮರಾಯಪ್ಪ, ಬಿ.ವಿ.ಶ್ರೀರಾಮರೆಡ್ಡಿ, ಸತ್ಯನಾರಾಯಣ, ಜಯರಾಮರೆಡ್ಡಿ, ವೆಂಕಟೇಶಪ್ಪ, ನರಸಿಂಹಮೂರ್ತಿ, ಸೀಕಲ್‌ ವೆಂಕಟೇಶ್‌, ತ್ಯಾಗರಾಜು, ಅಶ್ವತ್ಥಗೌಡ.ವೈ.ಎಂ, ರಾಮನ್ನ, ಎಸ್‌.ವಿ.ಗಂಗುಲಪ್ಪ, ಕೃಷ್ಣ ಸಿ.ಎಂ, ಶ್ರೀ ನಿವಾಸಪ್ರಸಾದ್‌, ಬಚ್ಚಣ್ಣ, ಮಿಲ್‌ ನಾರಾಯಣಸ್ವಾಮಿ, ಅಂಕಾಲಮಡಗು ಶ್ರೀ ರಾಮರೆಡ್ಡಿ, ಸೀತಾರಾಮರೆಡ್ಡಿ, ವೆಂಕಟರೆಡ್ಡಿ, ರಾಮಚಂದ್ರಪ್ಪ, ಆನಂದ್‌, ಮುನಯಪ್ಪ, ಆಂಜನೇಯರೆಡ್ಡಿ, ಶ್ರೀರಾಮ್‌, ನರಸಪ್ಪ, ವನಜಾಕ್ಷಮ್ಮ, ನಾಗರಾಜ್‌, ರೆಡ್ಡೆಪ್ಪ ಕೆ.ವಿ, ಸುರೇಶ್‌, ಚೋಟೂಸಾಬ್‌, ನಾರಾಯಣಸ್ವಾಮಿ, ಮಂಜುನಾಥ್‌, ನಾಗೇಶ್‌, ಚಂದ್ರಶೇಖರ್‌ ಇದ್ದರು.

ಕ್ಯಾಂಟೀನ್‌, ಬ್ಯಾಂಕ್‌ ಸ್ಥಾಪಿಸಿ: ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ಆದರೆ ಮಾರುಕಟ್ಟೆಯಲ್ಲಿ ಯಾವುದೇ ಒಂದು ಬ್ಯಾಂಕ್‌ ಕೇಂದ್ರ ಇಲ್ಲದಿರುವುದು ತೀವ್ರ ತೊಂದರೆಯಾಗಿದೆ. ರೈತರಿಗೆ ಮಾರುಕಟ್ಟೆಯಲ್ಲಿ ಬಂದ ಹಣವನ್ನು ಬ್ಯಾಂಕ್‌ಗೆ ಹಾಕಬೇಕಾದರೆ ಒಂದು ಕಿ.ಮೀ ದೂರ ಹೋಗಬೇಕು. ಇದರಿಂದ ಕಳ್ಳತನವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಮಾರುಕಟ್ಟೆಯಲ್ಲೇ ಬ್ಯಾಂಕ್‌ ಸ್ಥಾಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಉಪಾಹಾರ ಮತ್ತು ಊಟಕ್ಕೆ ಕ್ಯಾಂಟೀನ್‌ ನಿರ್ಮಿಸಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next