ಸಾಂಕ್ರಾಮಿಕ ಕಾಯಿಲೆಗಳ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆ ಪ್ರತೀ ವರ್ಷ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಲೇ ಬರುತ್ತಿದೆ. ಇದರ ಹೊರತಾಗಿಯೂ ಆಶ್ರಿತ ರೋಗಗಳು ಜನರನ್ನು ಕಾಡಲಾರಂಭಿಸುತ್ತವೆ. ಇದಕ್ಕೆ ಪ್ರಮುಖ ಕಾರಣ ಸ್ವಚ್ಛತೆಯ ಕೊರತೆ ಮತ್ತು ಜನಸಾಮಾನ್ಯರ ನಿರ್ಲಕ್ಷéವೇ ಆಗಿದೆ. ಇದರ ಪರಿಣಾಮ ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾದಂಥ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತವೆ.
ನಗರ ಮತ್ತು ಪಟ್ಟಣಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದೇ ಇರುವುದರಿಂದ ಕೊಳಚೆ ನೀರು ಈ ಸಾಂಕ್ರಾಮಿಕಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿವೆ. ಇನ್ನು ಇಲ್ಲಿರುವ ಹಳ್ಳ, ತೋಡುಗಳು ತ್ಯಾಜ್ಯಗಳಿಂದ ತುಂಬಿ ಹೋಗಿದ್ದು ಇದರಿಂದಾಗಿ ಮಳೆ ನೀರು ಹರಿದು ಹೋಗಲು ಅಡಚಣೆಯಾಗುತ್ತಿದೆ. ಇದು ಕೂಡ ಸ್ವಚ್ಛತೆಗೆ ಬಲುದೊಡ್ಡ ತೊಡಕಾಗಿ ಪರಿಣಾಮಿಸಿದ್ದು ಸಹಜವಾಗಿಯೇ ಸಾಂಕ್ರಾಮಿಕ ಕಾಯಿಲೆಗಳು ಹರಡಲು ಕಾರಣವಾಗುತ್ತಿವೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದರೂ ಜನರು ಮಾತ್ರ ಘೋರ ನಿರ್ಲಕ್ಷ್ಯ ತಾಳಿದ್ದಾರೆ. ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತೀ ಮುಖ್ಯವಾಗಿದೆ. ಈ ನೆಲೆಯಲ್ಲಿ ಸ್ವಯಂ ಜಾಗೃತಿಯಿಂದ ರೋಗಗಳನ್ನು ತಡೆಯುವಲ್ಲಿ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.
ನಮ್ಮ ನೆರೆಯ ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಅಧಿಕವಾಗಿದ್ದು ಅಲ್ಲಿಗೆ ಹೋಲಿಸಿದಲ್ಲಿ ನಮ್ಮ ಜಿಲ್ಲೆ ಹೆಚ್ಚು ಸುರಕ್ಷಿತವಾಗಿದೆ ಎಂದು ಮೈಮರೆಯುವುದು ಸರಿಯಲ್ಲ. ಸಾಂಕ್ರಾಮಿಕ ರೋಗಗಳು ಒಮ್ಮೆ ಕಾಣಿಸಿಕೊಂಡಲ್ಲಿ ಅವುಗಳನ್ನು ನಿಯಂತ್ರಿಸುವುದು ತುಸು ಪ್ರಯಾಸವೇ ಸರಿ. ಹೀಗಾಗಿ ಜನರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸ್ವಚ್ಛಗೆ ಆದ್ಯತೆ ನೀಡಲೇಬೇಕಿದೆ.
ಮನೆ ಆವರಣದಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಆವರಣದಲ್ಲಿರುವ ಹೂವಿನಕುಂಡ, ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು.
ದ.ಕ. ಜಿಲ್ಲೆಯಲ್ಲಿ ಈ ವರ್ಷ 476 ಮಲೇರಿಯಾ ಹಾಗೂ 176 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. ತಜ್ಞರ ಮಾಹಿತಿಗಳ ಪ್ರಕಾರ 10 ಮಂದಿಯಲ್ಲಿ ಡೆಂಗ್ಯೂ ಖಚಿತಗೊಂಡರೆ ಅದರ ಹತ್ತು ಪಟ್ಟು ಅಂದರೆ 100 ಮಂದಿಗೆ ಬಾಧಿಸುವುದು ನಿಶ್ಚಿತ. ಡೆಂಗ್ಯೂ ಕಾಯಿಲೆಗೆ ಈವರೆಗೆ ನಿರ್ದಿಷ್ಟ ಔಷಧವನ್ನು ಸಂಶೋಧಿಸಲು ವೈದ್ಯಕೀಯ ಲೋಕಕ್ಕೆ ಸಾಧ್ಯವಾಗಿಲ್ಲ. ಯಾವುದೇ ರೀತಿಯ ಸಾಂಕ್ರಾಮಿಕ ಕಾಯಿಲೆಗಳ ಲಕ್ಷಣಗಳು ಕಾಣಿಸಿಕೊಂಡ ಸಂದರ್ಭ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಕಾಯಿಲೆ ಉಲ್ಬಣಗೊಂಡು ಪ್ರಾಣಹಾನಿ ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸುರಕ್ಷತೆಯೊಂದೇ ನಮ್ಮ ಆರೋಗ್ಯವನ್ನು ಕಾಪಾಡಬಲ್ಲುದಾಗಿದೆ. ಈ ಸಾಂಕ್ರಾಮಿಕಗಳಿಂದ ಪಾರಾಗಲು ಸ್ವಚ್ಛತೆ, ಸ್ವಯಂ ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳೇ ಎಲ್ಲರ ಆದ್ಯತೆಗಳಾಗಬೇಕಿದೆ.
–ಸಂ