ತೋಕೂರು: ಸುಮಾರು 30 ಅಡಿ ಆಳದ ಕುಡಿಯುವ ನೀರಿನ ಬಾವಿ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿತ್ತು. ನೀರೆಲ್ಲ ಹಳದಿಯಾಗಿ, ಬಾವಿಯ ಒಳ, ಹೊರಗೆ ಗಿಡ ಗಂಟಿಗಳು ಬೆಳೆದಿದ್ದು, ಪಾಳು ಬಾವಿಯಂತಿತ್ತು. ಸಾರ್ವಜನಿಕರಿಗೆ ನೀರಿನ ತಾತ್ವಾರ ಇರುವಾಗ ಸಂಜೀವಿನಿಯಾಗಿರುವ ಈ ಬಾವಿಯನ್ನು ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿಯ ಸುಮಾರು 40 ಮಂದಿ ಶ್ರಮ ದಾನ ಮಾಡಿ ಸ್ವಚ್ಛಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದ್ದಾರೆ.
ಕಳೆದ ವರ್ಷವಷ್ಟೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗೆ ತೋಕೂರಿನ ನಾರಾಯಣ ಆಚಾರ್ಯ ಅವರು ತಮ್ಮ ಮನೆಯ ಆವರಣದಲ್ಲಿದ್ದ ಬಾವಿಯನ್ನು ನೀಡಿದ್ದರು. ಇದು ಸುತ್ತಮುತ್ತಲಿನ ಹಲವು ಮನೆಗಳಿಗೆ ನೀರು ಒದಗಿಸುತ್ತಿತ್ತಾದರೂ ಸೂಕ್ತ ನಿರ್ವಹಣೆಯ ಕೊರತೆ ಇತ್ತು. ಮೇ 20ರಂದು ವಿನಾಯಕ ಮಿತ್ರ ಮಂಡಳಿಯವರು ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಬಿಡುವಿಲ್ಲದೇ ದುಡಿದು ಬಾವಿಯನ್ನು ಸ್ವಚ್ಛಗೊಳಿಸಿದ್ದಾರೆ.
ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿಯು ಮಂಗಳೂರಿನ ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಜಂಟಿಯಾಗಿ ಕಾರ್ಯಕ್ರಮವನ್ನು ಸ್ವಚ್ಛತಾ ಅಭಿಯಾನದ ರೀತಿಯಲ್ಲಿ ಹಮ್ಮಿಕೊಂಡಿತ್ತು. ಪಡುಪಣಂಬೂರು ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಸಂಘ ಪರಿವಾರದ ಎಚ್.ರಾಮಚಂದ್ರ ಶೆಣೈ, ಯೋಗ ಗುರು ಜಗದೀಶ್ ಮಂಗಲ್ಪಾಡಿ ಮೊದಲಾದವರು ಮಾರ್ಗದರ್ಶನ ನೀಡಿ ಸಹಕಾರ ನೀಡಿದ್ದರು.
ಪಕ್ಷಿಕೆರೆ ವ್ಯಾಪ್ತಿಯಲ್ಲಿ ಹಲವು ಸೇವಾ ಚಟುವಟಿಕೆಯನ್ನು ಮಾಡುತ್ತಿದ್ದೇವೆ, ಸಾರ್ವಜನಿಕವಾಗಿ ಬಳಸಲ್ಪಡುವ ಆರ್‌ಎಸ್‌ಎಸ್ ಸಂಘದ ಮನೆಯ ಕುಡಿಯುವ ನೀರಿನ ಬಾವಿಯನ್ನು ಸ್ವಚ್ಛಗೊಳಿಸಲು ಕೇಳಿಕೊಂಡಾಗ ನಮ್ಮ ಮಂಡಳಿಯ ಎಲ್ಲ ಸದಸ್ಯರು ಒಟ್ಟು ಸೇರಿಕೊಂಡು ಬಾವಿಯನ್ನು ಸ್ವಚ್ಛಗೊಳಿಸಿ ಕುಡಿಯಲು ಯೋಗ್ಯವಾಗುವಂತೆ ಮಾಡಿದ್ದೇವೆ ಇದು ನಮ್ಮ ಸಂಘಟನಾತ್ಮಕ ಶಕ್ತಿಗೆ ಈ ಕಾರ್ಯ ಉತ್ತಮ ವೇದಿಕೆಯಾಗಿದೆ ಎನ್ನುತ್ತಾರೆ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ಸ್ಥಾಪಕಾಧ್ಯಕ್ಷರಾದ ರಾಜೇಶ್ ದಾಸ್.
ನೀರಿನ ಬವಣೆ ನೀಗಿಸಲು ಸಹಕಾರಿ
ಗ್ರಾಮ ಪಂಚಾಯತ್‌ಗೆ ಹಲವು ಸಂಘ ಸಂಸ್ಥೆಗಳು ಮುಕ್ತವಾಗಿ ನೆರವು ನೀಡುತ್ತಿರುವುದರಿಂದ ಸ್ವಚ್ಛತೆ ಮತ್ತು ಜಲಕ್ಷಾಮವನ್ನು ನಿಭಾಯಿಸಲು ಸಹಕಾರಿಯಾಗಿದೆ. ಕುಡಿಯುವ ನೀರಿನ ಬಾವಿಗಳನ್ನು ಸ್ವಚ್ಛವಾಗಿಡಲು ಹಾಗೂ ಸುತ್ತಮುತ್ತ ಸ್ವಚ್ಛ ಪರಿಸರದ ಜಾಗೃತಿಗೆ ಮಿತ್ರ ಮಂಡಳಿ ಪಂಚಾಯತ್‌ನೊಂದಿಗೆ ಕೈ ಜೋಡಿಸಿದೆ. ಇಂತಹ ಸೇವಾ ಮನೋಭಾವನೆಯಿಂದ ಪಂಚಾಯತ್‌ಗೂ ಆಧಾರವಾಗಿದೆ.
-ಮೋಹನ್‌ದಾಸ್
ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ