Advertisement

ವಿಮಾನ ನಿಲ್ದಾಣದಲ್ಲಿ  ಸ್ವಚ್ಛತೆ ಸವಾಲು

04:40 PM Aug 02, 2018 | Team Udayavani |

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ನಿರ್ಮಾಣಗೊಂಡಿರುವ ಇಲ್ಲಿನ ವಿಮಾನ ನಿಲ್ದಾಣ ಆವರಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಎಲೆ-ಅಡಿಕೆ, ಗುಟ್ಕಾ ತಿಂದು ಉಗಿಯುವುದು, ಮದ್ಯ ಹಾಗೂ ನೀರಿನ ಬಾಟಲಿಗಳನ್ನು ಎಸೆಯುತ್ತಿರುವುದು ನಿಲ್ದಾಣ ಪ್ರಾಧಿಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

Advertisement

ವಿಮಾನ ನಿಲ್ದಾಣ ಮುಂಭಾಗದಲ್ಲಿ ಗಿಡ ಬೆಳೆಸಿ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗಿದೆಯಾದರೂ ಇಲ್ಲಿಗೆ ಬರುವ ಸಾರ್ವಜನಿಕರು, ವಾಹನಗಳ ಚಾಲಕರು ಟರ್ಮಿನಲ್‌ ಸುತ್ತ ಅದರಲ್ಲೂ ವಾಹನಗಳ ಪಾರ್ಕಿಂಗ್‌ ಸ್ಥಳ ಹಾಗೂ ಮುಂಭಾಗದಲ್ಲಿರುವ ಗಿಡಗಳು, ಹುಲ್ಲುಹಾಸು ಮೇಲೆ ಎಲ್ಲೆಂದರಲ್ಲಿ ಉಗುಳುವುದು, ಪಾರ್ಕಿಂಗ್‌ ಸ್ಥಳ ಹಾಗೂ ಗಿಡಗಳ ಬುಡದಲ್ಲಿ ಮದ್ಯದ ಹಾಗೂ ನೀರಿನ ಬಾಟಲಿ ಬಿಸಾಡುವುದು, ಊಟ ಮಾಡಿದ ಪೇಪರ್‌ ತಟ್ಟೆಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ.

ಶೌಚಾಲಯದ ಸಾಮಗ್ರಿ ಪುಡಿಪುಡಿ: ವಿಮಾನ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಿದ ಶೌಚಾಲಯದಲ್ಲಿನ ಸಾಮಗ್ರಿಗಳನ್ನೆಲ್ಲ ಕಿಡಿಗೇಡಿಗಳು ಕಿತ್ತೂಗೆದು ಹಾನಿ ಪಡಿಸಿದ್ದಾರೆ. ಎಲ್ಲೆಂದರಲ್ಲಿ ಉಗಿದು ಕಾಲಿಡಲು ಆಗದಷ್ಟು ಗಲೀಜು ಮಾಡಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್‌ದ ಪುರುಷರ ಶೌಚಾಲಯದಲ್ಲಿ ಅಳವಡಿಸಿರುವ ಬಾಗಿಲು ಕೊಂಡಿ, ನಳದ ತೊಟ್ಟಿ ಸೇರಿದಂತೆ ಬೆಲೆ ಬಾಳುವ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ನಿಲ್ದಾಣದ ಸಿಬ್ಬಂದಿ ಪ್ರಾಧಿಕಾರದ ಆಸ್ತಿಯ ಸಂರಕ್ಷಣೆಗಾಗಿ ಎಷ್ಟೇ ಜಾಗೃತಿ ವಹಿಸಿದರೂ, ಕೆಲವರು ಸಿಸಿ ಕ್ಯಾಮರಾ ಹಾಗೂ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಇಂತಹ ದುಷ್ಕೃತ್ಯ ಮಾಡುತ್ತಿದ್ದಾರೆ.

ಪ್ರವೇಶ ದ್ವಾರ ಬಳಿಯೇ ಜನರ ಜಮಾವಣೆ: ನಿಲ್ದಾಣಕ್ಕೆ ಆಗಮಿಸುವ ಹಾಗೂ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗದೆ ಸುಗಮವಾಗಿ ಹೋಗಲು ಆಗಮನ ಮತ್ತು ನಿರ್ಗಮನದ ಪ್ರತ್ಯೇಕ ಎರಡು ದ್ವಾರಗಳು ಇವೆ. ಆದರೆ ನಿಲ್ದಾಣಕ್ಕೆ ಬರುವ ಬಹುತೇಕರು ಟರ್ಮಿನಲ್‌ದ ಮುಖ್ಯ ಪ್ರವೇಶ ದ್ವಾರ ಬಳಿಯೇ ವಾಹನಗಳನ್ನು ಸಾಲುಗಟ್ಟಿ ನಿಲ್ಲಿಸುತ್ತಾರೆ. ಟ್ಯಾಕ್ಸಿಯವರು ಸಹಿತ ವಾಹನ ನಿಲುಗಡೆಗೆ ಕಲ್ಪಿಸಲಾದ ಸ್ಥಳ ಬಿಟ್ಟು ನೋಪಾರ್ಕಿಂಗ್‌ ಸ್ಥಳದಲ್ಲೇ ನಿಲ್ಲಿಸುತ್ತಿದ್ದಾರೆ. ಜೊತೆಗೆ ಗಣ್ಯರು, ರಾಜಕೀಯ ಮುಖಂಡರನ್ನು ಬೀಳ್ಕೊಡಲು ಹಾಗೂ ಸ್ವಾಗತಿಸಲು ಅವರ ಅಭಿಮಾನಿಗಳು, ಅನುಯಾಯಿಗಳು ಟರ್ಮಿನಲ್‌ದಿಂದ ಹೊರಗೆ ಬರುವ ಹಾಗೂ ಒಳಗೆ ಪ್ರವೇಶಿಸುವ ದ್ವಾರ ಬಳಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವುದರಿಂದ ಪ್ರಯಾಣಿಕರಿಗೆ
ತೊಂದರೆ ಆಗುತ್ತಿದೆ. ನಿಲ್ದಾಣದ ಭದ್ರತಾ ಸಿಬ್ಬಂದಿ ದಾರಿ ಬಿಟ್ಟು ನಿಲ್ಲಿ ಎಂದು ಎಷ್ಟೇ ಬಾರಿ ಮನವಿ ಮಾಡಿದರೂ ಹಾಗೆ
ನಿಂತುಕೊಳ್ಳುತ್ತಾರೆ.

ಜನರ ಸಹಕಾರ-ಸಹಭಾಗಿತ್ವ ಮುಖ್ಯ: ನಗರದ ವಿಮಾನ ನಿಲ್ದಾಣ ಕೋಟ್ಯಂತರ ರೂ. ಖರ್ಚು ಮಾಡಿ ವಿಶ್ವದರ್ಜೆ ಮಟ್ಟದಲ್ಲಿ ಅಭಿವೃದ್ಧಿಗೊಂಡಿದ್ದು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವುದು ವಿಮಾನ ನಿಲ್ದಾಣ ಪ್ರಾಧಿಕಾರದವರ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಹೊಣೆಗಾರಿಕೆ ಸಾರ್ವಜನಿಕರದ್ದೂ ಇದೆ. ನಿಲ್ದಾಣ ಆವರಣದಲ್ಲಿ ಸ್ವತ್ಛತೆ ಕಾಪಾಡಬೇಕಿದೆ. ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕಿದೆ. 

Advertisement

ವಿಮಾನ ನಿಲ್ದಾಣ ಪ್ರಾಧಿಕಾರ ಆಸ್ತಿಯನ್ನು ಹಾನಿ ಪಡಿಸುತ್ತಿದ್ದಾರೆ. ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಎಲ್ಲೆಂದರಲ್ಲಿ ನೀರಿನ ಹಾಗೂ ಮದ್ಯದ ಬಾಟಲಿ ಎಸೆಯುತ್ತಿದ್ದಾರೆ. ಎಲೆ-ಅಡಿಕೆ, ಗುಟ್ಕಾ ಉಗುಳುತ್ತಿದ್ದಾರೆ. ಶೌಚಾಲಯದಲ್ಲಿನ ಸಾಮಗ್ರಿಗಳನ್ನು ಹಾನಿಗೊಳಿಸಿದ್ದಾರೆ. ಪ್ಲಾಸ್ಟಿಕ್‌ ಬಳಸುವುದನ್ನು ನಿಷೇಧಿಸಿದ್ದರೂ ಆವರಣದ ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಪದೇ ಪದೇ ಸ್ವಚ್ಛಗೊಳಿಸಿದರೂ ಗಲೀಜು ಮಾಡುತ್ತಿದ್ದಾರೆ. ಎಷ್ಟಂಥ ಸಿಬ್ಬಂದಿ ನಿಯೋಜಿಸಬೇಕು. ಜನರು ಸಹಿತ ಶುಚಿತ್ವದ ಬಗ್ಗೆ ಗಮನ ಹರಿಸಬೇಕಿದೆ.
ಅಹಿಲ್ಯಾ ಎಸ್‌. ಕಾಕೋಡಿಕರ,
ನಿರ್ದೇಶಕಿ, ವಿಮಾನ ನಿಲ್ದಾಣ ಹುಬ್ಬಳ್ಳಿ
ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next