Advertisement

ಡಾ|ಅನಂತಮತಿಯ ಸಚ್ಛತಾ ಜಾಗೃತಿ

05:03 PM Mar 08, 2021 | Team Udayavani |

ಬನಹಟ್ಟಿ: ರಬಕವಿ ಪಟ್ಟಣದ ಡಾ| ಅನಂತಮತಿ ಎಂಡೊಳ್ಳಿ ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡು ಗುರುತಿಸಿಕೊಂಡಿದ್ದಾರೆ.

Advertisement

ರಬಕವಿ, ಬನಹಟ್ಟಿ, ರಾಮಪುರ, ಹೊಸೂರ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸ್ವತ್ಛತೆ ಕೈಗೊಳ್ಳುವುದರ ಜತೆಗೆ ಸಾರ್ವಜನಿಕರಲ್ಲಿ ಸ್ವತ್ಛತೆಯ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಮಹತ್ವಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಅಭಿಯಾನ ಕೈಗೊಂಡು ಜನರಲ್ಲಿ ಸ್ವಚ್ಛತೆಯ ಅರಿವು, ಜಾಗೃತಿ, ತಿಳಿವಳಿಕೆ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಣೇಶವಾಡಿಯವರಾದ ಡಾ|ಅನಂತಮತಿ, ವಿವಾಹ ಬಳಿಕ ರಬಕವಿಗೆ ಬಂದಿದ್ದಾರೆ.ಬಾಲ್ಯದಲ್ಲಿ ಗಾಂಧಿಧೀಜಿಯವರ ಪಾಠಗಳಿಂದ ಪ್ರಭಾವಿತರಾಗಿ ಶಾಲಾ ಕೊಠಡಿ, ಆವರಣ ಮತ್ತು ತಮ್ಮ ಮನೆ ಸುತ್ತಲಿನ ಪರಿಸರ ಸ್ವತ್ಛವಾಗಿಡುತ್ತಿದ್ದರು. ಸದ್ಯ ರಬಕವಿ ಬನಹಟ್ಟಿ ಹಾಗೂ ಸುತ್ತಲಿನ ಪ್ರದೇಶವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿ ಕೊಂಡಿದ್ದಾರೆ. ಶಾಲಾ ಕಾಲೇಜುಗಳ ಆವರಣ, ಬಸ್‌ ನಿಲ್ದಾಣಗಳು, ದೇವಸ್ಥಾನಗಳು, ಹರಿಜನ ಕೇರಿಗಳು, ಗಲ್ಲಿಗಳು, ಪ್ರಮುಖ ರಸ್ತೆ, ಕೃಷ್ಣಾ ನದಿ ತೀರವನ್ನು ಸ್ವಚ್ಛಗೊಳಿಸಿದ್ದಾರೆ.

ಇದುವರೆಗೆ ಅಂದಾಜು 100ಕ್ಕಿಂತ ಹೆಚ್ಚು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಇವರೊಂದಿಗೆ ರಬಕವಿಯ ಪಾರ್ವತಿ ಸಾಬೋಜಿ, ಅನಸೂಯಾ ವಜ್ರಮಟ್ಟಿ, ಸುಮಾ ಸಾಬೋಜಿ, ಭಾರತಿ ಸೋಳಂಕಿ ಮತ್ತು ವಿಜಯಲಕ್ಷ್ಮೀ ಡೊಮನಾಳ ಕೂಡಾ ಸಹಕಾರ ನೀಡುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ನಗರಸಭೆಪೌರಕಾರ್ಮಿಕರ, ವಿದ್ಯಾರ್ಥಿನಿಯರ ಮತ್ತು ಸ್ಥಳೀಯರ ಸಹಕಾರ ಪಡೆಯುತ್ತಾರೆ. ಸ್ವಚ್ಛತಾ ಅಭಿಯಾನ ಕುರಿತು ಬೀದಿ ನಾಟಕ ಪ್ರದರ್ಶನ ಕೂಡಾ ಮಾಡಿದ್ದಾರೆ.

ಡಾ| ಅನಂತಮತಿ ಅವರ ಕಾರ್ಯ ಗಮನಿಸಿ ರಬಕವಿ-ಬನಹಟ್ಟಿ ತಾಲೂಕು ಆಡಳಿತ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Advertisement

 

ಯೋಗ-ಪ್ರಾಣಾಯಾಮ ಪಾಠ ಮಾಡುವ ಡಾ| ಭಾರತಿ ಲೋಹಾರ್‌ :

ಲೋಕಾಪುರ: ಪಟ್ಟಣದ ಡಾ| ಭಾರತಿ ಸೋಮಶೇಖರ ಲೋಹಾರ ಒಂದೂವರೆ ದಶಕದಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಸುಖ ಜೀವನದ ಕಲೆಗಳು ಹೀಗೆ ಹಲವಾರು ತರಬೇತಿ ನೀಡುತ್ತಾ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಹೈದ್ರಾಬಾದ್‌, ಗದಗ, ಧಾರವಾಡ, ಬೆಂಗಳೂರು, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ವಿವಿಧ ತರಬೇತಿ ನೀಡುತ್ತಿದ್ದಾರೆ. ಯೋಗ ಶಿಕ್ಷಣದ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಗುರುಕುಲ ನಿರ್ಮಾಣ ಮಾಡಿದ್ದಾರೆ. ಯೋಗ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ| ಭಾರತಿ ಪಟ್ಟಣದ ಬಾಲಾಜಿ ಶಿಕ್ಷಣ ಸಂಸ್ಥೆ ರಾಯಲ್‌ ಪ್ಯಾಲೆಸ್‌ ಇಂಟರ್‌ನ್ಯಾಷನಲ್‌ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಖ್ಯ ಗುರುಮಾತೆಯಾಗಿ ಸೇವೆ ಸಲ್ಲಿಸುತ್ತಿದ್ದು, ಯೋಗಬ್ರಹ್ಮ ಋಷಿ ಪ್ರಭಾಕರ ಗುರೂಜಿ ಶಿಷ್ಯರಲ್ಲಿ ಒಬ್ಬರು.

ಶಿಕ್ಷಣ ಸೇವಾ ರತ್ನ ಹಾಗೂ ರಾಷ್ಟ್ರ ಮಟ್ಟದ ಶ್ರೇಷ್ಠ ಶಿಕ್ಷಣ ತಜ್ಞೆ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next