ಬೆಳಗಾವಿ: ಸುವರ್ಣ ವಿಧಾನಸೌಧ ಮೆಟ್ಟಿಲುಗಳ ಮೇಲೆ ಶಾವಿಗೆ, ಸಂಡಿಗೆ ಹಾಗೂ ಹಪ್ಪಳ ಒಣಗಿ ಹಾಕಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸುವರ್ಣ ವಿಧಾನ ಸೌಧಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುವರ್ಣ ವಿಧಾನಸೌಧದ ಘನತೆ ಗಮನದಲ್ಲಿ ಇಟ್ಟುಕೊಂಡು ಅಲ್ಲಿನ ಭದ್ರತೆ, ಸ್ವತ್ಛತೆ ಸೇರಿದಂತೆ ಒಟ್ಟಾರೆ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಸುವರ್ಣ ವಿಧಾನಸೌಧದ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಮಿಕರ ಜತೆ ಚರ್ಚೆ ನಡೆಸಿದರು. ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಹಾಗೂ ಸಂಡಿಗೆ ಒಣಹಾಕಿದ್ದ ಮಹಿಳಾ ಕಾರ್ಮಿಕರೊಬ್ಬರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ಸ್ವಚ್ಛತೆ ಸೇರಿದಂತೆ ಮತ್ತಿತರ ದೈನಂದಿನ ನಿರ್ವಹಣೆ ಕೆಲಸ ಕಾರ್ಯಗಳಿಗೆ ನಿಯೋಜಿಸಲಾಗುವ ಸಿಬ್ಬಂದಿ ಹಾಗೂ ಕಾರ್ಮಿಕರು ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು ಎಂದರು.
ಕಡ್ಡಾಯ ತಪಾಸಣೆಗೆ ನಿರ್ದೇಶನ: ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿ ಕಾರಿಗಳು, ಪ್ರತಿಯೊಬ್ಬರನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಪ್ರವೇಶ ಕಲ್ಪಿಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಲಹೆ-ಸೂಚನೆ ತಪ್ಪದೆ ಪಾಲಿಸಬೇಕು. ಯಾವುದೇ ರೀತಿಯ ಅಚಾತುರ್ಯ ಉಂಟಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ ಹುಲಕಾಯಿ, ಸುವರ್ಣ ವಿಧಾನದೌಧದ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಭೀಮಾ ನಾಯ್ಕ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.
ಕೆಲಸದಿಂದ ಮಹಿಳೆ ವಜಾ ಮಾಡಿದ ಜಿಲ್ಲಾಡಳಿತ: ಸುವರ್ಣ ವಿಧಾನಸೌಧ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಶಾವಿಗೆ, ಸಂಡಿಗೆ ಹಾಗೂ ಹಪ್ಪಳ ಒಣಗಿ ಹಾಕಲಾಗಿತ್ತು. ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದಾಗ ವ್ಯಾಪಕ ಟೀಕೆ-ಟಿಪ್ಪಣಿ ವ್ಯಕ್ತವಾಗಿದ್ದವು. ಈ ಸಂಡಿಗೆ, ಹಪ್ಪಳ ಒಣಗಿ ಹಾಕಿದ್ದು ಯಾರು ಎಂಬುದನ್ನು ಪರಿಶೀಲಿಸಿದಾಗ, ಸಾಂಬ್ರಾದಲ್ಲಿ ಮಾರಾಟ ಮಾಡುತ್ತಿದ್ದ ಶಾವಿಗೆ ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಖರೀದಿಸಿ ಹಸಿಯಾಗಿದ್ದರಿಂದ ಇಲ್ಲಿ ಒಣ ಹಾಕಿದ್ದಳು. ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಆ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದೆ.