Advertisement

ಬೇಸಗೆ ದಾಹವಿದ್ದರೂ ಶುದ್ಧ ನೀರು ಘಟಕಕ್ಕೆ ದುರಸ್ತಿ ಫಲಕ..!

08:32 AM May 11, 2019 | mahesh |

ಸುಳ್ಯ: ಜಾಲ್ಸೂರಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕಕ್ಕೆ ನೀರಿನ ದಾಹವಿರುವ ಬೇಸಗೆ ಹೊತ್ತಿನಲ್ಲೇ ದುರಸ್ತಿ ಫಲಕ ಅಂಟಿಸಲಾಗಿದೆ! ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಈ ಘಟಕ ಕಾರ್ಯಾರಂಭಕ್ಕೆ ಮೀನ ಮೇಷ ಎಣಿಸುತ್ತಿದೆ. ಸ್ಥಳೀಯ ಪರಿಸರದ ಹಾಗೂ ಪ್ರಯಾಣಿಕರ ನೀರಿನ ದಾಹ ನೀಗಿಸಲು ಒಂದಷ್ಟು ನೆರವಾಗಬಹುದಿತ್ತು. ಅದಾಗ್ಯೂ ಘಟಕ ಕಾರ್ಯನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.

Advertisement

ಎರಡು ಗ್ರಾ.ಪಂ. ವ್ಯಾಪ್ತಿಗೆ ಅನುಕೂಲ
ಜಾಲ್ಸೂರು ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇತೃತ್ವದಲ್ಲಿ ಘಟಕ ನಿರ್ಮಿಸಲಾಗಿದೆ. ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪನೆಗೊಂಡಿರುವ ಈ ಘಟಕ ನೀರು ಒದಗಿಸಲು ಇನ್ನೂ ಶಕ್ತವಾಗಿಲ್ಲ. ಜಾಲ್ಸೂರು ಮತ್ತು ಕನಕಮಜಲು ಎರಡೂ ಗ್ರಾ.ಪಂ.ಗಳ ವ್ಯಾಪ್ತಿ ಪ್ರದೇಶದ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ನೀರು ಪಡೆದುಕೊಳ್ಳಲು ಅನುಕೂಲ. ಉಭಯ ಗ್ರಾ.ಪಂ. ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ನೀರಿನ ಕೊರತೆ ಕಂಡಿದ್ದು, ಇಂತಹ ಸಂದರ್ಭದಲ್ಲಿ ಘಟಕ ಸಹಕಾರಿ ಆಗುತಿತ್ತು. ಆದರೆ ದುರಸ್ತಿ ಬಗ್ಗೆ ಸ್ಥಳೀಯಾಡಳಿತವು ಮನಸ್ಸು ಮಾಡಿಲ್ಲ ಎನ್ನುವುದು ಸಾರ್ವಜನಿಕರ ದೂರು.

ನೀರು ನೀಡದಂತೆ ಲಾಬಿ
ಪ್ರಸಿದ್ಧ ತೀರ್ಥ ಕ್ಷೇತ್ರ ಸುಬ್ರಹ್ಮಣ್ಯ, ಶಬರಿಮಲೆಗೆ ಜಾಲ್ಸೂರು ಜಂಕ್ಷನ್‌ ಮೂಲಕ ಅತಿ ಹೆಚ್ಚು ಭಕ್ತರು ಸಂಚರಿಸುತ್ತಾರೆ. ಇಂತಹ ಸಂದರ್ಭ ಈ ಘಟಕ ಪ್ರಯಾಣಿಕರಿಗೆ ಅನುಕೂಲ ಎಂದು ಭಾವಿಸಲಾಗಿತ್ತು. ಆದರೆ ಘಟಕ ಸ್ಥಾಪನೆಗೊಂಡು ವರ್ಷ ಸಂದರೂ ಕಾರ್ಯಾರಂಭ ಆಗಿಲ್ಲ. ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣವೋ ಅಥವಾ ನೀರು ನೀಡದಂತೆ ಪ್ರಭಾವಿಗಳ ಲಾಬಿ ಇದೆಯೋ ಎಂಬ ಅನುಮಾನ ಇದೆ ಅನ್ನುತ್ತಾರೆ ಸಾರ್ವಜನಿಕರು.

ಎರಡು ಕಡೆ ಬಳಕೆ
ಅರಂತೋಡು ಮತ್ತು ಬೆಳ್ಳಾರೆ ಘಟಕ ಕಾರ್ಯಾರಂಭ ಮಾಡಿದ್ದು, ನೀರಿನ ಪ್ರಯೋಜನ ಜನರಿಗೆ ಸಿಕ್ಕಿದೆ. ಹಾಗಾಗಿ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವ ಘಟಕ ಪೂರ್ಣಗೊಳಿಸಿ ಬಳಕೆಗೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ತೆರಿಗೆ ಹಣ ಪೋಲಾಗುತ್ತದೆ ಎನ್ನುತ್ತಾರೆ ಬೆಳ್ಳಾರೆಯ ನಾಸಿರ್‌. ದೂರದ ಊರಿನಿಂದ ಸಾವಿರಾರು ಮಂದಿ ಪ್ರಯಾಣಿಸುವ ಕಾರಣ ಜಾಲ್ಸೂರಿನಲ್ಲಿ ಘಟಕದಿಂದ ಅನುಕೂಲ ಇದೆ. ಇಲ್ಲದಿದ್ದರೆ ದುಡ್ಡು ಕೊಟ್ಟು ಬಾಟ್ಲಿ ನೀರು ಖರೀದಿಸಬೇಕು. ಈ ಹೊರೆ ತಪ್ಪಿಸಲು ಜಾಲ್ಸೂರು ಘಟಕ ತತ್‌ಕ್ಷಣ ಆರಂಭಿಸಬೇಕು ಅನ್ನುತ್ತಾರೆ ವಾಹನ ಸವಾರ ವಿನೋದ್‌.

ಎರಡು ದಿನಗಳಲ್ಲಿ ಕ್ರಮ ಕೊಳವೆ ಬಾವಿಯಿಂದ ಅಳವಡಿಸಿರುವ ಪೈಪಿನಿಂದ ನೀರು ಪೂರೈಕೆ ಆಗುತ್ತಿದ್ದರೂ ಅದು ಘಟಕಕ್ಕೆ ಡಂಪ್‌ ಆಗುತಿಲ್ಲ. ಟ್ಯಾಂಕ್‌ ಶುದ್ಧೀಕರಣ ಕೆಲಸವು ಆಗಬೇಕಿದೆ. ಎರಡು ದಿನದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
– ಶೀನ ಎ. ಕಾರ್ಯದರ್ಶಿ, ಜಾಲ್ಸೂರು ಗ್ರಾ.ಪಂ.

ಅನುಷ್ಠಾನದಲ್ಲಿ ಲೋಪ!
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 2015-16ನೇ ಸಾಲಿನಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ದಿನದ 24 ತಾಸು ನೀರೊದಗಿಸಲು ಜನಸಂದಣಿ ಸ್ಥಳಗಳಲ್ಲಿ ಘಟಕ ಸ್ಥಾಪಿಸಲು ಉದ್ದೇಶಿಸಿತ್ತು. ಗ್ರಾ.ಪಂ. ಸಹಭಾಗಿತ್ವದಲ್ಲಿ ಸ್ಥಳ ನಿಗದಿಪಡಿಸಿ ಘಟಕ ಸ್ಥಾಪಿಸಬೇಕಿತ್ತು. ಈ ಯಂತ್ರಕ್ಕೆ 1 ರೂ. ನಾಣ್ಯ ಹಾಕಿದರೆ, ಆರರಿಂದ ಎಂಟು ಲೀಟರ್‌ ತನಕ ಶುದ್ಧ ನೀರು ಒದಗಿಸುವ ಯೋಜನೆ ಇದಾಗಿತ್ತು. ದ.ಕ. ಜಿಲ್ಲೆಯಲ್ಲಿ ಈ ಯೋಜನೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ಆರಂಭದಲ್ಲೇ ವ್ಯಕ್ತವಾಗಿದ್ದರೂ ಕಾಮಗಾರಿ ಅನುಷ್ಠಾನಗೊಂಡಿತ್ತು. ಅದು ಸಮರ್ಪಕ ರೀತಿಯಲ್ಲಿ ಸಾಗದ ಕಾರಣ ಗುತ್ತಿಗೆ ಸಂಸ್ಥೆಗೆ ನೀಡಿದ ಟೆಂಡರ್‌ ಅನ್ನು ಸರಕಾರ ರದ್ದುಗೊಳಿಸಿತ್ತು. ದ.ಕ.ಜಿ.ಪಂ.ನಲ್ಲಿ ಸದನ ಸಮಿತಿ ರಚಿಸಿ ಪರಿಶೀಲನೆ ಕ್ರಮ ಕೈಗೊಳ್ಳಲಾಗಿತ್ತು. ಹೊಸ ಕಾಮಗಾರಿ ಆರಂಭಿಸದಂತೆ ತಡೆ ಹಿಡಿಯಲಾಗಿತ್ತು.

Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next