Advertisement

ಸ್ವಚ್ಛ ವಾರ್ಡ್‌ರೋಬ್‌ ಅಭಿಯಾನ

11:18 AM Dec 26, 2019 | mahesh |

ವರ್ಷದ ಕೊನೆ ಎಂಬುದು, ವಾರ್ಡ್‌ರೋಬ್‌ಗಳನ್ನು ಫಿಲ್ಟರ್‌ ಮಾಡಲು ಸಿಗುವ ಒಂದೊಳ್ಳೆ ಅವಕಾಶ. ಹೊಸವರ್ಷದ ಮೊದಲ ದಿನದಿಂದ ನಿಮ್ಮ ವಾರ್ಡ್‌ರೋಬ್‌ನಲ್ಲಿ ಯಾವ್ಯಾವ ಬಟ್ಟೆಗಳು ಇರಬೇಕು? ಅವುಗಳ ವಿಂಗಡಣೆ ಹೇಗಿರಬೇಕು ಎಂಬುದನ್ನು ಪ್ಲಾನ್‌ ಮಾಡುವುದು ಜಾಣ ನಡೆ…

Advertisement

2019ರ ಕೊನೆಯ ವಾರದಲ್ಲಿದ್ದೇವೆ ನಾವು. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬಂದುಬಿಡುತ್ತದೆ. ಹೊಸ ವರ್ಷ ಅಂದರೆ ಹೊಸ ಹುರುಪು. ಕಳೆದ ದಿನಗಳ ಸಿಹಿಯನ್ನಷ್ಟೇ ಉಳಿಸಿಕೊಂಡು, ಕಹಿಯನ್ನೆಲ್ಲ ಮರೆತು ಮುನ್ನಡೆಯುವ ಕಾಲ. ನೆನಪುಗಳನ್ನಷ್ಟೇ ಫಿಲ್ಟರ್‌ ಮಾಡಿದರೆ ಸಾಲದು; ನಿಮ್ಮ ವಾರ್ಡ್‌ರೋಬ್‌ ಅನ್ನೂ ಫಿಲ್ಟರ್‌ ಮಾಡಲು ಇದೇ ಒಳ್ಳೆಯ ಸಮಯ. 2020ರ ವಾರ್ಡ್‌ರೋಬ್‌ನಲ್ಲಿ ಏನಿರಬೇಕು, ಏನಿರಬಾರದು, ಯಾವೆಲ್ಲ ಬಟ್ಟೆಗಳನ್ನು ಅಗತ್ಯವಿದ್ದವರಿಗೆ ದಾನ ಮಾಡಬಹುದು, ಉಳಿದವನ್ನು ಏನು ಮಾಡುವುದು ಅಂತ ಉಡುಗೆಗಳ ವಿಲೇವಾರಿಗೆ ಪ್ಲಾನ್‌ ಮಾಡಿ.

ಟ್ರಯಲ್‌ ಮಾಡಿ
ಕಪಾಟಿನಲ್ಲಿ ಇರುವ ಎಲ್ಲಾ ದಿರಿಸುಗಳನ್ನು ಒಂದಾದ ಮೇಲೆ ಒಂದು ತೊಟ್ಟು ನೋಡಿ. ಯಾವುದು ಬಿಗಿಯಾಗುತ್ತದೆ, ಯಾವುದು ಸಡಿಲವಾಗುತ್ತದೆ ಮತ್ತು ಯಾವುದು ಸರಿಯಾಗುತ್ತದೆ ಎಂದು ಬೇರೆ-ಬೇರೆ ಮಾಡಿ ಇಡಿ. ಹರಿದು ಹೋದ, ಅಳತೆಯಲ್ಲಿ ಉದ್ದ ಕಡಿಮೆ ಆದ ಅಥವಾ ಬಣ್ಣ ಮಾಸಿ ಹೋದ ಬಟ್ಟೆಗಳನ್ನೂ ಪ್ರತ್ಯೇಕವಾಗಿಡಿ. ಮುಂದಿನ ವರ್ಷ ತೊಡಲು ಇಷ್ಟ ಪಡುವ ಉಡುಗೆಗಳನ್ನು ಕಪಾಟಿನಲ್ಲಿಯೇ ಉಳಿಸಿಕೊಳ್ಳಿ. ಯಾವುದಕ್ಕೆ ಆಲೆಶನ್‌ ಬೇಕು, ಯಾವುದಕ್ಕೆ ಮೇಕ್‌ ಓವರ್‌ ಬೇಕು, ಯಾವುದನ್ನು ಬಿಸಾಕಬೇಕು ಮತ್ತು ಯಾವುದನ್ನು ದಾನ ಮಾಡಬೇಕು ಎಂದು ಪಟ್ಟಿ ಮಾಡಿ.

ಮೇಕ್‌ ಓವರ್‌ ಹೇಗೆ?
ಉಡುಗೆಗೆ ಮೇಕ್‌ಓವರ್‌ ನೀಡುವುದು ಹೇಗೆ ಗೊತ್ತಾ? ಉದಾಹರಣೆಗೆ, ಒಂದು ಹಳೆಯ ಸೀರೆ. ಆ ಸೀರೆಯಲ್ಲಿ ತೂತು, ಇಸ್ತ್ರಿಯಿಂದ ಸುಟ್ಟ ಕಲೆ ಅಥವಾ ಯಾವುದಾದರೂ ರೀತಿಯಲ್ಲಿ ಡ್ಯಾಮೇಜ್‌ ಆಗಿದ್ದರೆ, ಆ ಸೀರೆಯನ್ನು ಡಾರ್ನಿಂಗ್‌ ಇಲ್ಲದೆ ಉಡಲು ಸಾಧ್ಯವಿಲ್ಲ. ಸೀರೆಯನ್ನು ಡಾರ್ನಿಂಗ್‌ ಮಾಡಿಸಿ ಉಡಲು ಇಷ್ಟವಿಲ್ಲದಿದ್ದರೆ ಅದರಿಂದ ಟಾಪ್‌, ಕುರ್ತಿ, ದುಪಟ್ಟಾ, ಲಂಗ, ಚೂಡಿದಾರ ಮುಂತಾದ ಬಗೆಯ ಉಡುಗೆಗಳನ್ನು ಹೊಲಿಸಬಹುದು.

ಇದು ತೊಡುವ ಬಟ್ಟೆಗಷ್ಟೇ ಸೀಮಿತವಲ್ಲ. ಪಾದರಕ್ಷೆ, ಬ್ಯಾಗ್‌ ಮತ್ತು ಕೆಲವೊಂದು ಆಕ್ಸೆಸರೀಸ್‌ಗೂ ಅನ್ವಯಿಸುತ್ತದೆ. ರಬ್ಬರ್‌, ಪ್ಲಾಸ್ಟಿಕ್‌, ರೆಸಿನ್‌ ಮುಂತಾದವುಗಳನ್ನು ಬಿಟ್ಟು ಬಟ್ಟೆ, ಚರ್ಮ, ಜೂಟ್‌ನಿಂದ ಮಾಡಿದ ಪಾದರಕ್ಷೆಗಳನ್ನು ತೊಡದೇ ವರ್ಷಗಳ ಕಾಲ ಹಾಗೇ ಇಟ್ಟರೆ, ಅವುಗಳು ಹಾಳಾಗುತ್ತವೆ. ಹಾಗಾಗಿ ಯಾವುದು ಬೇಕು – ಬೇಡ ಎಂದು ವಿಂಗಡಿಸಿ, ಕಸವನ್ನು ಕಡಿಮೆ ಮಾಡಿಕೊಳ್ಳಿ. ತೂತಾದ ಸಾಕ್ಸ್, ಜೊತೆ ಕಳೆದು ಹೋದ ಸಾಕ್ಸ್, ವಿಪರೀತ ಬಣ್ಣ ಬಿಡುವ ಸಾಕ್ಸ್, ಸ್ವಲ್ಪವೂ ಆರಾಮ ನೀಡದ ಸಾಕ್ಸ್ ಗಳನ್ನೂ ಕಣ್ಣು ಮುಚ್ಚಿ ಕಸದ ಬುಟ್ಟಿಗೆ ಹಾಕಿಬಿಡಿ. ಇಲ್ಲವಾದರೆ ಬೇಡದ ವಸ್ತುಗಳ ಗುಡ್ಡ ಬೆಳೆಯುತ್ತಲೇ ಇರುತ್ತದೆ!

Advertisement

ಯಾಕೆ ಫಿಲ್ಟರ್‌ ಮಾಡಬೇಕು?
ಹೊಸ ಬಟ್ಟೆ ಕೊಂಡುಕೊಳ್ಳುವ ಉತ್ಸಾಹ ಒಳ್ಳೆಯದ್ದೇ. ಆದರೆ ಹಳೆಯದ್ದನ್ನು ಆಚೆ ಹಾಕದೆ ಪದೇ ಪದೆ ಹೊಸತನ್ನು ಕೊಂಡುಕೊಂಡರೆ ಕಪಾಟಿನಲ್ಲಿ ಇಡಲು ಜಾಗ ಇರಲಾರದು. ಬೇಡದ ವಸ್ತುಗಳೇ ಅನಗತ್ಯವಾಗಿ ಜಾಗವನ್ನು ನುಂಗಿ ಬಿಟ್ಟಿರುತ್ತವೆ. ಗಡಿಬಿಡಿಯಲ್ಲಿ ಹುಡುಕುವಾಗ ಅಗತ್ಯವಾದುದು ಬೇಗ ಕೈಗೆ ಸಿಗುವುದಿಲ್ಲ. ಒಂದು ಬಟ್ಟೆ ಹುಡುಕಲು, ಹತ್ತು ಬಟ್ಟೆಗಳನ್ನು ಆಚೀಚೆ ಸರಿಸಬೇಕಾಗುತ್ತದೆ. ಉಟ್ಟ ಬಟ್ಟೆಯನ್ನೇ ಮತ್ತೆ ಮತ್ತೆ ಉಡಬೇಕಾಗುತ್ತದೆ. ರಾಶಿಯಲ್ಲಿ ಹುದುಗಿ ಹೋದ ಬಟ್ಟೆಗಳು ಬೇಗನೆ ಹಾಳಾಗುವುದೂ ಸುಳ್ಳಲ್ಲ.

ಎರಡು ವಿಭಾಗ ಮಾಡಿ
ಕಪಾಟನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಎರಡು ವಿಭಾಗಗಳನ್ನಾಗಿ ಮಾಡಿ. ಅಂದರೆ, ಕಪಾಟಿನ ಒಂದು ಭಾಗದಲ್ಲಿ ದಿನ ನಿತ್ಯ ಧರಿಸುವ ಉಡುಗೆಗಳನ್ನು (ಡೇಲಿ ವೇರ್‌) ಜೋಡಿಸಿ. ಇನ್ನೊಂದೆಡೆ, ಹಬ್ಬ- ಸಮಾರಂಭಗಳಂಥ ಅಪರೂಪದ ಸಂದರ್ಭದಲ್ಲಿ ತೊಡುವ ಅದ್ಧೂರಿ ಬಟ್ಟೆಗಳನ್ನು ಇಡಿ. ಆಗ ನಿಮಗೆ ಬೇಕಾದ ಬಟ್ಟೆ ಸುಲಭಕ್ಕೆ ಕೈಗೆ ಸಿಗುವುದಲ್ಲದೆ, ಬಟ್ಟೆಗಳು ಹಾಳಾಗುವುದನ್ನೂ ತಡೆಯಬಹುದು. ಯಾಕೆಂದರೆ, ರೇಷ್ಮೆ ಬಟ್ಟೆಗಳಿಗೆ, ಹತ್ತಿ ಬಟ್ಟೆಗಳಿಗೆ, ಸಿಂಥೆಟಿಕ್‌ ಬಟ್ಟೆಗಳಿಗೆ ಬೇರೆ ಬೇರೆ ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ.

ರೇಷ್ಮೆ ಬಟ್ಟೆಗಳನ್ನು ಜೋಪಾನವಾಗಿ ಮಡಚಿ, ಕವರ್‌ನಲ್ಲಿ ಭದ್ರವಾಗಿಟ್ಟರೆ ಒಳ್ಳೆಯದು. ಒಗೆದ ನಂತರವೂ ಬಟ್ಟೆಗಳಿಂದ ಕೆಲವೊಮ್ಮೆ ಹಸಿ ದುರ್ವಾಸನೆ ಅಥವಾ ಕಪಾಟಿನ ದುರ್ವಾಸನೆ ಬರುತ್ತದೆ. ಯಾವುದೇ ರೀತಿಯ ದುರ್ವಾಸನೆ ಬಾರದಿರಲು ಒಗೆದು, ಮಡಚಿಟ್ಟ ಬಟ್ಟೆಗಳ ಮಧ್ಯೆ ನುಸಿಗುಳಿಗೆ, ಕರ್ಪೂರ, ಗಂಧದ ತುಂಡು, ಮಾತ್‌ ಬಾಲ್‌ಗ‌ಳು (ಜಿರಳೆ, ಇರುವೆ, ಕೀಟಗಳನ್ನು ದೂರವಿಡುವ ಗುಳಿಗೆ) ಇಡಬಹುದು. ಈಗೆಲ್ಲಾ ಪರ್ಫ್ಯೂಮ ಏರ್‌ ಪಾಕೆಟ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವುಗಳನ್ನೂ ಕಪಾಟಿನೊಳಗೆ ಇಟ್ಟರೆ ದುರ್ವಾಸನೆ ದೂರವಾಗುತ್ತದೆ. ಬಟ್ಟೆ ಮೇಲೆ ಪರ್ಫ್ಯೂಮ್‌ ಸಿಂಪಡಿಸಿದರೆ ಕೆಲವೊಮ್ಮೆ ಕಲೆ ಉಳಿದುಕೊಳ್ಳುತ್ತದೆ. ಹಾಗಾಗಿ ಕರ್ಪೂರ ಅಥವಾ ಏರ್‌ಪಾಕೆಟ್‌ಗಳನ್ನು ಬಳಸುವುದು ಉತ್ತಮ. ಇನ್ಯಾಕೆ ತಡ? ಇಯರ್‌ ಎಂಡ್‌ ಕ್ಲಿಯರೆನ್ಸ್‌ಗೆ ನೀವು ರೆಡಿಯಾಗಿ.

ಖರೀದಿಗೂ ಮುನ್ನ
ಈಗ ದಿನಕ್ಕೊಂದು ಬಗೆಯ ಫ್ಯಾಷನ್‌ ಟ್ರೆಂಡ್‌ ಸೃಷ್ಟಿಸುತ್ತಿವೆ. ಹಾಗಂತ, ಎಲ್ಲ ಬಗೆಯ ಫ್ಯಾಷನ್‌ ಅನ್ನು ಟ್ರೈ ಮಾಡಬೇಕೆಂದಿಲ್ಲ. ಹೊಸ ಬಟ್ಟೆ ಖರೀದಿಸುವಾಗ ಅಗತ್ಯಕ್ಕೆ ಮೊದಲ ಆದ್ಯತೆ ನೀಡಿ. ಆರಾಮಕ್ಕೆ ಎರಡನೇ ಆದ್ಯತೆ ಮತ್ತು ಸ್ಟೈಲ್‌ ಗೆ ಮೂರನೇ ಆದ್ಯತೆ. ನೋಡಲು ಚಂದವಿದ್ದರೂ, ತೊಡಲು ಕಷ್ಟಕರವಾಗಿದ್ದರೆ ಅಂತ ಉಡುಗೆಯಿಂದ ಪ್ರಯೋಜನವೇನು, ಅಲ್ವಾ?

-ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next