Advertisement

ನಶಿಸಿ ಹೋಗಿದ್ದ ಕಲ್ಯಾಣಿಗಳಿಗೆ ಸ್ವಚ್ಛತೆ ಭಾಗ್ಯ

09:57 PM May 25, 2019 | Lakshmi GovindaRaj |

ಶಿಡ್ಲಘಟ್ಟ: ಜಿಲ್ಲೆಯಲ್ಲಿ ಭೀಕರವಾಗಿರುವ ಬರಗಾಲವನ್ನು ಕಣ್ಣಾರೇ ಕಂಡ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಖ್‌ ಅವರು ಕಾಳಜಿ ವಹಿಸಿ ಜಲಾಮೃತ ಯೋಜನೆ ಪರಿಚಯಿಸಿ ಅಂರ್ತಜಲ ಮಟ್ಟ ವೃದ್ಧಿಗೊಳಿಸಲು ನಿರ್ಲಕ್ಷ್ಯಕ್ಕೊಳಗಾದ ಕೆರೆ-ಕುಂಟೆ,ರಾಜಕಾಲುವೆ ಮತ್ತು ಕಲ್ಯಾಣಿಗಳಿಗೆ ಜೀರ್ಣೋದ್ಧಾರ ಭಾಗ್ಯ ಲಭಿಸಿದೆ.

Advertisement

ಸರ್ಕಾರದ ಯೋಜನೆ ಅಥವಾ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳ ಮತ್ತು ಜನರ ಸಹಕಾರ ಅತ್ಯಗತ್ಯ. ಇಚ್ಛಾಶಕ್ತಿ ಇದ್ದರೆ ಯಾವುದು ಅಸಾಧ್ಯವಲ್ಲ. ಶಿಡ್ಲಘಟ್ಟ ತಾಲೂಕು ಆಡಳಿತ ಮತ್ತು ತಾಪಂ ಆಡಳಿತದ ನೇತೃತ್ವದಲ್ಲಿ ಕಂದಾಯ ಮತ್ತು ಆರ್‌ಡಿಪಿಆರ್‌ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮದಿಂದ ನಶಿಸಿ ಹೋಗಿದ್ದ ಕಲ್ಯಾಣಿಗಳಿಗೆ ಮರುಜೀವ ಬಂದಂತಾಗಿದೆ.

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ 450 ವರ್ಷಗಳ ಇತಿಹಾಸ ಹೊಂದಿರುವ ಚಂದ್ರಮೌಳೇಶ್ವರ್‌ ಕಲ್ಯಾಣಿಯನ್ನು ಕಸಬಾ ಮತ್ತು ಜಂಗಮಕೋಟೆ ಹೋಬಳಿಯ ಗ್ರಾಪಂ ಪಿಡಿಒಗಳು, ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.

ದಾಸನಕಲ್ಯಾಣಿ ಸ್ವಚ್ಛತೆ: ಪ್ರಥಮ ಹಂತದಲ್ಲಿ ಯಶಸ್ವಿ ಸಾಧನೆ ಮಾಡಿದ ಬಳಿಕ ತಾಪಂ ಇಒ ಶಿವಕುಮಾರ್‌ ಮತ್ತು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶ್ರೀನಾಥ್‌ ಗೌಡ ಮತ್ತು ಪಿಡಿಒಗಳು ತಾಲೂಕಿನ ದೊಡ್ಡತೇಕಹಳ್ಳಿಯ ಪುರಾತನ ದಾಸನಕಲ್ಯಾಣಿಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ.

ಪ್ರತಿ ವಾರ ಒಂದೊಂದು ಕಲ್ಯಾಣಿ: ತಾಲೂಕಿನಲ್ಲಿ ಬಹುತೇಕ ಜಲಮೂಲಗಳಾದ ಕೆರೆ-ಕುಂಟೆ ಮತ್ತು ಕಲ್ಯಾಣಿಗಳ ಮೇಲಿರುವ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿಗೊಳಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿರುವ ಕಲ್ಯಾಣಿಗಳನ್ನು ಗುರುತಿಸಿ ಪ್ರತಿ ವಾರ ಒಂದೊಂದು ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ನಿಸ್ವಾರ್ಥದಿಂದ ಕಾರ್ಯನಿರ್ವಸಿ ಹೊಸರೂಪ ನೀಡಲು ಮುಂದಾಗಿದ್ದಾರೆ.

Advertisement

ದೊಡ್ಡತೇಕಹಳ್ಳಿಯ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಬಶೆಟ್ಟಹಳ್ಳಿ ಹೋಬಳಿಯ ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಪಂ ಪಿಡಿಒ ಶಿವಾನಂದ್‌, ತಿಮ್ಮಸಂದ್ರ ಪಿಡಿಒ ತನ್ವೀರ್‌ ಅಹಮದ್‌, ಯಮುನಾರಾಣಿ, ಕಾರ್ಯದರ್ಶಿ ನಾಗರಾಜ್‌ ಮತ್ತು ಸಿಬ್ಬಂದಿ ಸಾಥ್‌ ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಸೂಚನೆ ಮೇರೆಗೆ ಶಿಡ್ಲಘಟ್ಟ ತಾಲೂಕಿನಾದ್ಯಂತ ಜಲಮೂಲಗಳನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ತಾಲೂಕಿನ ಜಂಗಮಕೋಟೆ ಮತ್ತು ದೊಡ್ಡತೇಕಹಳ್ಳಿಯ ಕಲ್ಯಾಣಿ ಸ್ವಚ್ಛಗೊಳಿಸಲಾಗಿದೆ. ಮುಂದಿನ ವಾರ ಸಾದಲಿಯ ಕಲ್ಯಾಣಿ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದೇವೆ.
-ಶಿವಕುಮಾರ್‌, ತಾಪಂ ಇಒ, ಶಿಡ್ಲಘಟ್ಟ ತಾಲೂಕು

ಆರ್‌ಡಿಪಿಆರ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಜಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಅವರ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನು ಪಾಲಿಸಿ ಮಳೆನೀರು ಸಂರಕ್ಷಣೆ ಮಾಡಲು ಬಹುಕಮಾನ್‌ ಚೆಕ್‌ಡ್ಯಾಂಗಳು, ಕೊಳಚೆ ನೀರು ಇಂಗಿಸಲು ಸೋಕ್‌ಫಿಟ್‌ ಮತ್ತು ಕೆರೆಗಳಲ್ಲಿ ಹೂಳು ತೆಗೆಯುವ ಕಾರ್ಯಕ್ರಮ ನಡೆಸುವ ಜೊತೆಗೆ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ.
-ಶ್ರೀನಾಥ್‌ಗೌಡ, ಸಹಾಯಕ ನಿರ್ದೇಶಕರು, ನರೇಗಾ ಶಿಡ್ಲಘಟ್ಟ ತಾಲೂಕು

Advertisement

Udayavani is now on Telegram. Click here to join our channel and stay updated with the latest news.

Next