ಮದ್ದೂರು: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದ ಫಲವೆಂಬಂತೆ ಪಟ್ಟಣದಲ್ಲಿ ಹಾದು ಹೋಗಿರುವ ಕಾಲುವೆಗಳು ತ್ಯಾಜ್ಯದಿಂದ ತುಂಬಿ ಕಳೆ ಸಸ್ಯಗಳು ಬೆಳೆದು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ.
ಮದ್ದೂರು ಕೆರೆ ಅಚ್ಚುಕಟ್ಟು ಭಾಗದ ಜಮೀನುಗಳಿಗೆ ನೀರೊದಗಿಸುವ ಕೆಮ್ಮಣ್ಣು ನಾಲೆ, ಚಾಮನಹಳ್ಳಿ ನಾಲೆ, ಭೈರನ್‌ನಾಲೆ ಮತ್ತು ವೈದ್ಯನಾಥಪುರ ನಾಲೆಗಳೆಲ್ಲವೂ ಕಳೆಗಿಡಗಳಿಂದ ತುಂಬಿವೆ. ಜತೆಗೆ ಮದ್ದೂರು ಪಟ್ಟಣದ ಕೆಲ ಬಡಾವಣೆಗಳ ತ್ಯಾಜ್ಯ ನೀರಿನ ಹೊಂಡಗಳಾಗಿ ಪರಿವರ್ತನೆಗೊಂಡಿವೆ.
ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಕೆಮ್ಮಣ್ಣು ನಾಲೆ, ವೈದ್ಯನಾಥಪುರ ನಾಲೆ ಹಾಗೂ ಭೈರನ್ ನಾಲೆಗಳ ಕೊಳಚೆ ನೀರಿನಲ್ಲಿ ಉತ್ಪಾದನೆಯಾಗುವ ಸೊಳ್ಳೆಗಳು ಮೇಲಿನ ನಾಲಾ ದಂಡೆಗಳಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತಿರುವುದು ವಿಪರ್ಯಾಸವೇ ಆಗಿದೆ.
ನಾಲೆಗೆ ತ್ಯಾಜ್ಯವೂ ಸೇರ್ಪಡೆ: ಕೆಮ್ಮಣ್ಣು ನಾಲೆಯಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದು ನಿಂತಿರುವ ಜತೆಗೆ ತ್ಯಾಜ್ಯ ವಸ್ತುಗಳು ಸುರಿಯುವ ಕೇಂದ್ರವಾಗಿ ಮಾರ್ಪಟ್ಟಿವೆ. ವಿವಿಧ ಬಡಾವಣೆಗಳ ತ್ಯಾಜ್ಯ ನೀರು ಕೆಮ್ಮಣ್ಣು ನಾಲೆಗೆ ಸೇರುತ್ತಿದೆ. ಇದರಿಂದ ಚರ್ಮವ್ಯಾದಿ ಕಾಯಿಲೆಗಳು ಕಂಡು ಬರುತ್ತಿದ್ದು, ಸ್ಥಳೀಯ ಸಂಘ, ಸಂಸ್ಥೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಮೌನ ವಹಿಸಿದ್ದಾರೆ.
ತ್ಯಾಜ್ಯವೇ ತೆರವುಗೊಳಿಸಿಲ್ಲ: ಕಳೆದ ವರ್ಷದ ಮಳೆಗಾಲದಲ್ಲಿ ಕಾಲುವೆಯ ಕಳೆ ಸಸ್ಯಗಳು, ತ್ಯಾಜ್ಯ, ಹೂಳು ತೆಗೆಸಿ ರಸ್ತೆಬದಿ ಹಾಕಿದ ನೀರಾವರಿ ನಿಗಮದ ಅಧಿಕಾರಿಗಳು, ಮತ್ತೂಂದು ವರ್ಷದ ಮಳೆಗಾಲ ಮುಕ್ತಾಯಗೊಂಡಿದ್ದರೂ ರಾಶಿಬಿದ್ದಿರುವ ಕಸದ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸಿಲ್ಲ. ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ. ಕಾಲುವೆಗಳಲ್ಲಿ ತ್ಯಾಜ್ಯ ಹೊರತೆಗೆದು ಸ್ವಚ್ಛಗೊಳಿಸಿದ ಮೇಲೆ ಆ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸಬೇಕೆಂಬ ಪ್ರಾಥಮಿಕ ಜ್ಞಾನವೂ ಅಧಿಕಾರಿಗಳಿಗಿಲ್ಲವೇ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹಲವು ಬಾರಿ ನೀರಾವರಿ ಇಲಾಖೆ ಕಚೇರಿ ಬಳಿ ಪ್ರತಿಭಟನೆಗಳೂ ನಡೆಸಿದರೂ ಇದ್ಯಾವುದಕ್ಕೂ ಸೊಪ್ಪು ಹಾಕದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ನೀರುಗಂಟಿ ನೇಮಕದಲ್ಲಿ ಭ್ರಷ್ಟಾಚಾರ: ಈ ಹಿಂದೆ ಪ್ರತಿ ಕಾಲುವೆಗಳಿಗೂ ನಿರ್ವಹಣೆಗೆಂದು ನೇಮಿಸಲ್ಪಟ್ಟಿದ್ದ ನೀರುಗಂಟಿಗಳನ್ನು ಉಳಿತಾಯದ ನೆಪವೊಡ್ಡಿ ಆರೋಗ್ಯ, ಶಿಕ್ಷಣ ಮತ್ತಿತರ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಪ್ರಸಕ್ತ ಗುತ್ತಿಗೆ ಆಧಾರದ ಮೇಲೆ ನೀರುಗಂಟಿಗಳ ನೇಮಕ ಮಾಡಿದ್ದು ಇದು ಕಡತಗಳಿಗೆ ಮಾತ್ರ ಸೀಮಿತವಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಿಸಿರುವ ನೀರು ಗಂಟಿಗಳಿಗೆ ತಿಂಗಳಲ್ಲಿ ಐದರಿಂದ ಹತ್ತು ದಿನ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ, ಉಳಿದ ಇಪ್ಪತ್ತು ದಿನಗಳ ಹಾಜರಾತಿ ತೋರಿಸಿ ಗೋಲ್ಮಾಲ್ ಮಾಡುತ್ತಿರುವ ಬಗ್ಗೆ ಸದರಿ ಹಣ ಮೇಲ್ಮಟ್ಟದಿಂದ ಹಿಡಿದು ಕೆಳವರ್ಗದ ಗುಮಾಸ್ತರವರೆಗೂ ಹಂಚಿಕೆಯಾಗುತ್ತಿದೆ ಎಂದೂ ಸ್ಥಳೀಯರು ಆರೋಪಿಸಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮದ್ದೂರು ಪಟ್ಟಣದಲ್ಲಿ ಅಶುಚಿತ್ವ, ಅನಾರೋಗ್ಯ ತಾಂಡವವಾಡುತ್ತಿದೆ. ಮಾರಕ ರೋಗಗಳಿಗೆ ಎಡೆಮಾಡಿಕೊಟ್ಟಿದ್ದರೂ ಸ್ಥಳೀಯ ಶಾಸಕರೂ ಸೇರಿದಂತೆ ಅಧಿಕಾರಸ್ಥ ರಾಜಕಾರಣಿಗಳು ಕಂಡು ಕಾಣದಂತಿರುವುದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇವಲ ಪುರಸಭೆ, ಆರೋಗ್ಯ ಇಲಾಖೆಯತ್ತ ಬೊಟ್ಟು ಮಾಡುವ ಬದಲು ಕಾಲುವೆ ಸ್ವಚ್ಛತೆಗೆ ಮುಂದಾಗದ ನೀರಾವರಿ ನಿಗಮದ ಅಧಿಕಾರಿಗಳ ಧೋರಣೆಗೆ ತಕ್ಕ ಉತ್ತರ ನೀಡಲು ಸಾರ್ವಜನಿಕರು ಬೀದಿಗಿಳಿಯುವ ಮೊದಲು ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಿದೆ ಎಂದು ಎಚ್ಚರಿಸಿದ್ದಾರೆ.
•ಎಸ್.ಪುಟ್ಟಸ್ವಾಮಿ