Advertisement

ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ಸ್ವಚ್ಛತೆ ಪಾಠ

06:00 AM Mar 18, 2018 | |

ಬೆಂಗಳೂರು: ಶಾಲೆಗಳಲ್ಲಿ ನಿತ್ಯ ಬೆಳಗ್ಗೆ ಪ್ರಾರ್ಥನೆಯ ಜತೆ ಜೊತೆಗೆ ಸ್ವಚ್ಛತೆಯ ಪಾಠ ಇನ್ಮುಂದೆ ಕಡ್ಡಾಯ! “ಶಾಲಾ ಹಂತದಲ್ಲೇ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ನಿತ್ಯ ಬೆಳಗ್ಗೆ ಶಾಲೆಗಳಲ್ಲಿ ನಡೆಯುವ ಪ್ರಾರ್ಥನೆ ವೇಳೆ ಕನಿಷ್ಠ ಎರಡು ನಿಮಿಷ ಸ್ವಚ್ಛತೆ ಕುರಿತು ಬೋಧನೆ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ” ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

Advertisement

ಅಂಬೇಡ್ಕರ್‌ ಭವನದಲ್ಲಿ ಶನಿವಾರ ಸ್ವಚ್ಛ ಭಾರತ್‌ ಮಿಷನ್‌ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “”ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ಕನಿಷ್ಠ ಎರಡು ನಿಮಿಷಗಳಾದರೂ ಸ್ವಚ್ಛತೆ ಬಗ್ಗೆ ಮಕ್ಕಳಿಗೆ ಬೋಧಿಸಲು ಸೂಚಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಪತ್ರಕ್ಕೆ ಪೂರಕ ಸ್ಪಂದನೆ ದೊರೆತರೆ ಮುಂದಿನ ದಿನಗಳಲ್ಲಿ ಮಹತ್ವಾಕಾಂಕ್ಷಿ “ಸ್ವಚ್ಛತೆ ಅಭಿಯಾನ’ ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ” ಎಂದು ತಿಳಿಸಿದರು.

“ಮಕ್ಕಳಿಗೆ ಬೆಳವಣಿಗೆ ಹಂತದಲ್ಲೇ ಸ್ವಚ್ಛತೆ ಮಹತ್ವ ತಿಳಿಸಿಕೊಡುವುದು ಹಾಗೂ ಅಭ್ಯಾಸ ಆಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ಮೂಲಕ ಗಾಂಧೀಜಿ ಕಂಡ ಸ್ವತ್ಛ ಭಾರತದ ಕನಸು ಸಾಕಾರಗೊಳ್ಳಲಿದೆ” ಎಂದರು. ಆದರೆ, ಸ್ವಚ್ಛತೆಯ ಪಾಠ ಯಾವ ಸ್ವರೂಪದಲ್ಲಿರಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸಚಿವರು ನೀಡಲಿಲ್ಲ.

2019ಕ್ಕೆ ಭಾರತ ಬಯಲು ಬಹಿರ್ದೆಸೆ ಮುಕ್ತ
ಮಹತ್ಮಾ ಗಾಂಧೀಜಿಯ 150 ಜಯಂತಿ ವೇಳೆಗೆ ಭಾರತ ಬಯಲು ಬಹಿರ್ದೆಸೆ ಮುಕ್ತವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕಾಗಿ ಸ್ವಚ್ಛತಾ ಆಂದೋಲನವು ಜನಾಂದೋಲನವಾಗಿ ಪರಿವರ್ತಿಸಲಾಗುತ್ತಿದೆ. ಈ ಕನಸು ಸಾಕಾರಗೊಳ್ಳುವಲ್ಲಿ ತಂತ್ರಜ್ಞಾನಗಳ ಜತೆಗೆ ಸಾರ್ವಜನಿಕ ಸಹಭಾಗಿತ್ವ ಕೂಡ ಮುಖ್ಯವಾಗಿದೆ ಎಂದರು.

ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಸ್ವಚ್ಛ ಭಾರತ ಮಿಷನ್‌ ರೂಪಿಸಿರುವ ವಿನೂತನ ಆ್ಯಪ್‌ ಅನ್ನು ಬಿಡುಗಡೆಗೊಳಿಸಲಾಯಿತು. ಕಸದಿಂದ ವಿದ್ಯುತ್‌ ಉತ್ಪಾದನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ನೆದರ್‌ಲ್ಯಾಂಡ್‌ನ‌ ನೆಕ್ಸಸ್‌ನೋವಸ್‌ ಹಾಗೂ 3ವೇಸ್ಟಿ (ಫೈನಾನ್ಸ್‌) ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

Advertisement

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

ಅಪೆಕ್ಸ್‌ ಬಾಡಿ ರಚನೆಗೆ ನಿರ್ಧಾರ
“ಸ್ಮಾರ್ಟ್‌ ಸಿಟಿ’ ಮತ್ತಷ್ಟು ಪರಿಣಾಮಕಾರಿ ಮತ್ತು ವಿನೂತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರೀಯ ಸಂಸ್ಥೆ ರಚಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದರು. 

ದೇಶದ ವಿವಿಧ ರಾಜ್ಯಗಳಲ್ಲಿನ ನಗರಗಳನ್ನು ಸ್ಮಾರ್ಟ್‌ ಸಿಟಿಗೆ ಆಯ್ಕೆ ಮಾಡಲಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳು ಹೊಸ ಆಲೋಚನೆ ಅಥವಾ ಯೋಜನೆಗಳನ್ನು ಅಳವಡಿಸಿಕೊಂಡಿರುತ್ತವೆ. ಆ ವಿಚಾರ ವಿನಿಮಯಕ್ಕೆ ಈ ಕೇಂದ್ರೀಯ ವ್ಯವಸ್ಥೆ ವೇದಿಕೆ ಆಗಲಿದೆ ಎಂದು ವಿವರಿಸಿದರು. ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ನಿರೀಕ್ಷೆ ಮೀರಿ ಪ್ರಗತಿ ಕಂಡುಬರುತ್ತಿದೆ. ಯೋಜನೆಗೆ ಆಯ್ಕೆಯಾದ 99 ನಗರಗಳ ಪೈಕಿ 86 “ವಿಶೇಷ ಉದ್ದೇಶಿತ ವಾಹಕ’ (ಎಸ್‌ಪಿವಿ) ರಚನೆ ಆಗಿದೆ. ಇದರಲ್ಲಿ ವಾರಗಳ ಹಿಂದಷ್ಟೇ ಆಯ್ಕೆಯಾದ ನಗರಗಳೂ ಸೆರಿವೆ. ಒಟ್ಟಾರೆ 15ರಿಂದ 18 ತಿಂಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next