Advertisement

ಹಳ್ಳಿಯ ಶುಚಿತ್ವಕ್ಕಾಗಿ ಸ್ವಚ್ಛ ಶನಿವಾರ

12:38 AM Dec 24, 2019 | Lakshmi GovindaRaj |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕನಸಿಗೆ ಕೈ ಜೋಡಿಸಿರುವ ಬೆಂಗಳೂರು ನಗರ ಜಿಪಂ ಹಳ್ಳಿಗಳ ಶುಚಿತ್ವಕ್ಕೆ ಸಂಬಂಧಿಸಿದಂತೆ “ಸ್ವಚ್ಛ ಶನಿವಾರ’ ಕಾರ್ಯಕ್ರಮ ರೂಪಿಸಿದೆ. “ಊರು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛವಾದ ಹಾಗೆ’ ಎಂಬ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಪಂ ಮಟ್ಟದಲ್ಲಿ “ಸ್ವಚ್ಛ ಶನಿವಾರ’ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಹಳ್ಳಿಗಳ ಶುಚಿತ್ವಕ್ಕೆ ಆದ್ಯತೆ ನೀಡುವ ಗುರಿ ಹೊಂದಿದೆ.

Advertisement

ಈ ಕಾರ್ಯಕ್ರಮದ ಅಡಿಯಲ್ಲಿ ತಿಂಗಳ ಮೂರನೇ ಶನಿವಾರದಂದು ಗ್ರಾಪಂ ಮಟ್ಟದಲ್ಲಿ ಒಂದು ಗ್ರಾಮವನ್ನು ಆಯ್ದು ಕೊಳ್ಳಲಾಗುತ್ತಿದೆ. ಹೀಗೆ ಆಯ್ದು ಕೊಂಡ ಗ್ರಾಮದಲ್ಲಿ ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಹಳ್ಳಿಗರು ಒಡಗೂಡಿ ಸ್ವಯಂ ಪ್ರೇರಿತ ಶ್ರಮದಾನ ತೊಡಗಿಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಸಂಬಂಧಿಸಿದಂತೆ “ಸ್ವಚ್ಛ ಭಾರತ್‌ ಮಿಷನ್‌’ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದಾರೆ.

ಶುಚಿತ್ವಕ್ಕೆ ಸಂಬಂಧಿಸಿಂದತೆ ಕೇಂದ್ರ ಸರ್ಕಾರ ಗ್ರಾಮೀಣ ಭಾರತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಆ ಹಿನ್ನೆಲೆಯಲ್ಲಿಯೇ ಗ್ರಾಮವನ್ನು ಸ್ವಚ್ಛವಾಗಿಡುವುದರ ಜತೆಗೆ ಶುಚಿತ್ವದ ಬಗ್ಗೆ ಹಳ್ಳಿಗರಿಗೆ ಮತ್ತಷ್ಟು ಅರಿವು ಮೂಡಿಸುವ ಸಂಬಂಧ ಸ್ವಚ್ಛ ಶನಿವಾರ ಕಾರ್ಯಕ್ರಮವನ್ನು ಪ್ರತಿ ಗ್ರಾಪಂಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಗರ ಜಿಪಂನ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರ ಜಿಪಂ ವ್ಯಾಪ್ತಿಯಲ್ಲಿ ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಅನೇಕಲ್‌ ತಾಲೂಕುಗಳು ಇವೆ. ಈ ನಾಲ್ಕೂ ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 96 ಗ್ರಾಪಂಗಳು ಬರಲಿವೆ. ಇದರಲ್ಲಿ ಬೆಂಗಳೂರು ದಕ್ಷಿಣ ತಾಲೂಕು ಬಿಟ್ಟು ಉಳಿದ ತಾಲೂಕುಗಳ ಗ್ರಾಪಂಗಳಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮ ಈಗಾಗಲೇ ಆರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಾಪಂಗಳಲ್ಲ ಚರ್ಚೆ: “ಸ್ವಚ್ಛ ಶನಿವಾರ’ ಕಾರ್ಯಕ್ರಮ ಎಲ್ಲಿ ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಒಂದೆರಡು ವಾರದ ಮೊದಲೇ ಆಯಾ ಗ್ರಾಪಂಗಳಲ್ಲಿ ಚರ್ಚೆಯಾಗುತ್ತದೆ. ಆ ನಂತರ ಕಾರ್ಯಕ್ರಮ ನಡೆಯಲಿರುವ ಗ್ರಾಮಕ್ಕೆ ಸುತ್ತೋಲೆಯನ್ನು ಕಳಿಸಲಾಗುತ್ತದೆ. ಸ್ವಯಂ ಪ್ರೇರಿತ ಶ್ರಮದಾನದಲ್ಲಿ ಗ್ರಾಮಸ್ಥರು ಕೂಡ ಭಾಗವಹಿಸಬಹುದು ಎಂದು ಸೂಚಿಸಲಾಗಿದೆ.

Advertisement

ಶಾಲಾ-ಕಾಲೇಜುಗಳಿಗೂ ಕೂಡ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆ ಹಿನ್ನೆಲೆಯಲ್ಲಿಯೇ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸುವುದರಿಂದ ಹಳ್ಳಿಗಳರಲ್ಲಿ ಸ್ವಚ್ಛತೆ ಬಗ್ಗೆ ತಿಳಿ ಹೇಳಲು ಸಹಾಯವಾಗಿದೆ ಎಂದು ಮರಸೂರು ಗ್ರಾಪಂ ಪಿಡಿಒ ಶಶಿಕಿರಣ್‌ ಮಾಹಿತಿ ನೀಡಿದ್ದಾರೆ. ಕಲ್ಯಾಣಿ, ದನಕರುಗಳ ಕುಡಿಯು ನೀರಿನ ಮೂಲ, ಚರಂಡಿ, ರಸ್ತೆ, ಬಸ್‌ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.

ಕಿಶೋರ್‌ಕುಮಾರ್‌ ಸ್ವಚ್ಛ ಯೋಜನೆ ರೂವಾರಿ: ಈಗ ಬೆಂಗಳೂರು ಉತ್ತರ ತಾಲೂಕಿನಲ್ಲಿ ಕಾರ್ಯನಿರ್ವಹಣಾಧಿಕಾರಿ ಆಗಿ ಕೆಲಸ ನಿರ್ವಹಿಸುತ್ತಿರುವ ಕಿಶೋರ್‌ಕುಮಾರ್‌ ಅವರು ಈ ಹಿಂದೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆ ವೇಳೆ ಅಲ್ಲಿಯ ಹಳ್ಳಿಗಳನ್ನು ಶುಚಿತ್ವದಲ್ಲಿರಿಸಲು ತಿಂಗಳ ಮೂರನೇ ಶನಿವಾರ ಸ್ವಚ್ಛ ಶನಿವಾರ ಕಾರ್ಯಕ್ರಮ ರೂಪಿಸಿದರು. ಈ ಕಾರ್ಯಕ್ರಮ ಹಳ್ಳಿಗರ ಮೆಚ್ಚುಗೆ ಗಳಿಸಿದ ನಂತರ ಇದೀಗ ಬೆಂ.ಉತ್ತರ ತಾಲೂಕಿಗೆ ಮತ್ತು ಅನೇಕಲ್‌ ತಾಲೂಕಿಗೆ ವಿಸ್ತಾರಗೊಂಡಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಉಪ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್‌ ಮಿಷನ್‌ನ ಜಿಲ್ಲಾ ನೋಡಲ್‌ ಅಧಿಕಾರಿ ಡಾ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಳ್ಳಿಗಳು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛವಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಹಳ್ಳಿಗಳನ್ನು ಕೇಂದ್ರೀಕರಿಸಿ “ಸ್ವಚ್ಛ ಶನಿವಾರ’ ಕಾರ್ಯಕ್ರಮ ರೂಪಿಸಲಾಯಿತು. ಜನ ಪ್ರತಿನಿಧಿಗಳು, ಸರ್ಕಾರ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಹಳ್ಳಿಗರು ಇದಕ್ಕೆ ಕೈ ಜೋಡಿಸಿದರು. ಜತೆಗೆ ಎನ್‌ಜಿಒಗಳು ಕೂಡ ಭಾಗವಹಿಸಿದ್ದರಿಂದ ಕಾರ್ಯಕ್ರಮ ಫ‌ಲ ನೀಡಿತು.
-ಕಿಶೋರ್‌ ಕುಮಾರ್‌, ಕಾರ್ಯನಿರ್ವಹಣಾಧಿಕಾರಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next