ಯಾದಗಿರಿ: ಗ್ರಾಮಗಳು, ಸಮುದಾಯದಿಂದ ವೈಯಕ್ತಿಕ ಮಟ್ಟದಿಂದ ಪ್ರತಿ ಹಳ್ಳಿಯನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಲು ಪ್ರತಿ ಹಂತದಲ್ಲೂ ಒಟ್ಟಾಗಿ ಕೆಲಸ ಮಾಡಲು ಸ್ವಚ್ಛ ಭಾರತ್ ಮಿಷನ್ ಎಂಬ ಯೋಜನೆ ರೂಪುಗೊಂಡಿದ್ದು, ನೈರ್ಮಲ್ಯ ಮತ್ತು ಸುರಕ್ಷಿತ ನೀರಿನ ಮೂಲಕ ಜನರ ಜೀವನ ಮಟ್ಟ ಸುಧಾರಿಸುವುದರ ಜೊತೆಗೆ ಸಮಾಜದ ಉನ್ನತಿಗಾಗಿ ಕೆಲಸ ಮಾಡುತ್ತಿದೆ. ಇದು ಆರ್ಥಿಕ ಉನ್ನತಿ ಮತ್ತು ಉತ್ತಮ ಆರೋಗ್ಯಕ್ಕೆ ಕಾರಣವಾಗುವ ಯೋಜನೆಯಾಗಿದೆ ಎಂದು ಹಳಿಗೇರಾ ಗ್ರಾಪಂ ಅಧ್ಯಕ್ಷ ದೇವಿಂದ್ರಪ್ಪ ಯಡ್ಡಳಿಯೋರ್ ಹೇಳಿದರು.
ಹಳಿಗೇರಾ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಬಹುರೂಪಿ ಚೌಡಯ್ಯ ನಾಟ್ಯ ಸಂಘ ಹಾಗೂ ಹಳಿಗೇರಿ ಗ್ರಾಪಂ ಆಶ್ರಯದಲ್ಲಿ ಸ್ವತ್ಛ ಭಾರತ ಮಿಷನ್ ಹಾಗೂ ಪರಿಸರದ ಬಗ್ಗೆ ಜನ ಜಾಗೃತಿ ಮೂಡಿಸುವ ಜನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛ ಪರಿಸರವು ಇಂದಿನ ಜೀವನ ಶೈಲಿಗೆ ಅಗತ್ಯವಾಗಿದ್ದು, ಜೀವ ಸಂಕುಲಗಳ ಬದುಕಿನೊಂದಿಗೆ ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ವ್ಯಾಪಕವಾಗಿ ನಡೆಯಬೇಕಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಸುತ್ತಿದ್ದೇವೆ ಎಂದು ಹೇಳಿದರು.
ಬಹುರೂಪಿ ಚೌಡಯ್ಯ ನಾಟ್ಯ ಸಂಘ ಅಧ್ಯಕ್ಷ ಮಹಾದೇವ ಅಧ್ಯಕ್ಷತೆ ವಹಿಸಿದ್ದರು. ಕೊರೊನಾ ಜಾನಪದ ಜಾಗೃತಿ ಸಂಗೀತ ಕಾರ್ಯಕ್ರಮವನ್ನು ಶಂಕರ ಶಾಸ್ತ್ರಿ ತಂಡ ನಡೆಸಿಕೊಟ್ಟಿತು. ಬಸವರಾಜ ತಬಲಾ ವಾದನ ನುಡಿಸಿದರೆ, ಗಂಗಮ್ಮ, ನಾಗಮ್ಮ, ಸಕ್ಕುಬಾಯಿ ತಂಡ ಕಾರ್ಯಕ್ರಮ ನಡೆಸಿಕೊಟ್ಟರು.
ಸ್ವಚ್ಛ ಭಾರತ್ ಮಿಷನ್‌ನ ಯೋಜನೆಯು ಪ್ರತಿಯೊಬ್ಬರಲ್ಲಿ ನೈರ್ಮಲ್ಯದ ಪರಿಕಲ್ಪನೆ ಬಲಪಡಿಸುವ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಸೃಷ್ಟಿಸುವ ಗುರಿ ಹೊಂದಿದೆ. ಸ್ವತ್ಛ ಪರಿಸರದ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಮತ್ತು ಘನ ಮತ್ತು ದ್ರವ ತ್ಯಾಜ್ಯದ ವ್ಯವಸ್ಥಿತ ನಿರ್ವಹಣೆಯ ಅಭ್ಯಾಸ ಬೆಳೆಸಲು ಜನರನ್ನು ಪ್ರೋತ್ಸಾಹಿಸುವ ಗುರಿಯನ್ನು ಈ ಯೋಜನೆಯು ಹೊಂದಿದ್ದು, ಸರ್ವರ ಸಹಕಾರ ಅಗ್ಯವಾಗಿದೆ.
-ದೇವಿಂದ್ರಪ್ಪ ಯಡ್ಡಳ್ಳಿಯೋರ್, ಹಳಿಗೇರಾ ಗ್ರಾಪಂ ಅಧ್ಯಕ್ಷ
ಸ್ವಚ್ಛ ಭಾರತ್ ಮಿಷನ್ ಆರಂಭದೊಂದಿಗೆ ಸ್ವತ್ಛತೆ ಮತ್ತು ನೈರ್ಮಲ್ಯದ ಅಲೆ ಮತ್ತೊಮ್ಮೆ ಬಂದಿದೆ ಮತ್ತು ಜನಾಂದೋಲನವಾಗಿ ಮಾರ್ಪಟ್ಟಿದೆ. ಬಯಲು ಶೌಚ ಮುಕ್ತದ ಬಗ್ಗೆ ಬೃಹತ್ ಜಾಗೃತಿ ಮೂಡಿಸಲು ನಾವು ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಸಾಕಷ್ಟು ಚಟುವಟಿಕೆಗಳನ್ನು ಯೋಜಿಸಿದ್ದೇವೆ. ಪ್ರತಿಯೊಬ್ಬರೂ ಮುಂದೆ ಬಂದು ಇದನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇನೆ.
-ವಿಜಯಲಕ್ಷ್ಮೀ ಶಹಾಬಾದ, ಪಿಡಿಒ ಅಧಿಕಾರಿ