ನೆಲಮಂಗಲ: ತಾಲೂಕಿನ ನ್ಯಾಯಾಲಯದ ಸಂಕೀರ್ಣದಲ್ಲಿ ಶುದ್ಧ ಕುಡಿಯುವ ನೀರಿನ ಸೌಕರ್ಯವಿಲ್ಲದೆ ಪ್ರತಿನಿತ್ಯ ಕಕ್ಷಿದಾರರು, ವಕೀಲರು, ಪೊಲೀಸರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಸಮೀಪದ ಸೊಂಡೆಕೊಪ್ಪ ರಸ್ತೆಯ ನ್ಯಾಯಾಲಯದ ಸಂಕೀರ್ಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಹೈಕೋರ್ಟ್ ಆದೇಶದಂತೆ 7.5 ಲಕ್ಷ ರೂ. ಅನುದಾನವನ್ನು ಖಾಸಗಿ ಕಂಪನಿಗೆ ನೀಡಲಾಗಿತ್ತು.
ಅದರಂತೆ ಘಟಕ ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಮಾತ್ರ ದೊರಕಿಲ್ಲ. ಘಟಕದ ಸುತ್ತಲು ಗಿಡಗಳು ಬೆಳೆದಿವೆ, ಶುದ್ಧೀಕರಿಸುವ ಯಂತ್ರಗಳು ತುಕ್ಕು ಹಿಡಿಯುವ ಹಂತ ತಲುಪಿವೆ, ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಾಣ ಮಾಡಿದ ಘಟಕ ಉಪಯೋಗಕ್ಕೆ ಬಾರದೇ ಹಾಳಾಗುತಿದ್ದರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.
ನೀರಿಗಾಗಿ ಪರದಾಟ: ತಾಲೂಕಿನ ನ್ಯಾಯಾಲಯದ ಸಂಕೀರ್ಣದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ, 1ನೇ ಮತ್ತು 2ನೇ ಶ್ರೇಣಿಯ ಅಧಿಕ ಹಿರಿಯ ಶ್ರೇಣಿಯ ನ್ಯಾಯಾಲಯ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು, ಪ್ರಧಾನ ಸಿವಿಲ್ ನ್ಯಾಯಾಲಯಗಳಿಗೆ ಪ್ರತಿದಿನ ಆಗಮಿಸುವ ಸಾವಿರಾರೂ ಕಕ್ಷಿದಾರರು ಬೆಳಗ್ಗೆಯಿಂದ ಸಂಜೆಯವರೆಗೂ ನ್ಯಾಯಾಲಯದ ಆವರಣದಲ್ಲಿ ಇರುವುದರಿಂದ ಕುಡಿಯಲು ನೀರಿಗಾಗಿ ಪರದಾಡುವ ದುಸ್ಥಿತಿ ಎದುರಾಗಿದೆ.
ನಿರ್ಮಾಣವಾಗಿ ವರ್ಷ ಕಳೆದಿದೆ: 2018ರ ಬೇಸಿಗೆಯಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಟೆಂಡರ್ ಮಾಡಿಕೊಂಡ ಅಕ್ವಾéಜ್ ಶೈನ್ ಕಂಪನಿ ಘಟಕ ನಿರ್ಮಾಣ ಮಾಡಿ ವರ್ಷ ಕಳೆದರೂ ಉಸ್ತುವಾರಿ ವಹಿಸಿಕೊಂಡಿರುವ ಲೋಕೋಪಯೋಗಿ ಅಧಿಕಾರಿಗಳು ಘಟಕ ಆರಂಭಿಸಲು ಮುಂದಾಗಿಲ್ಲ. ವಕೀಲರಿಗೆ , ಕಕ್ಷಿದಾರರಿಗೆ ನೀರಿನ ಸಮಸ್ಯೆ ಎಂದು ಹೇಳಿಕೊಂಡು ವರ್ಷದಿಂದ ಮೀನಮೇಷ ಮಾಡುತ್ತಿದ್ದಾರೆ.
ನೀತಿ ಸಂಹಿತೆ ಮುಗಿಯಲಿ: ನ್ಯಾಯಾಲಯದ ಸಂಕೀರ್ಣದಲ್ಲಿ ವರ್ಷದಿಂದ ಉದ್ಘಾಟನೆಯಾಗದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಲು ನೀತಿ ಸಂಹಿತೆ ಕಾರಣ ಹೇಳುತ್ತಿರುವ ಅಧಿಕಾರಿಗಳು, ನ್ಯಾಯಾಲಯಕ್ಕೆ ಯಾವ ನೀತಿ ಸಂಹಿತೆ, ಕಕ್ಷಿದಾರರಿಗೆ ನೀರು ಹೊದಗಿಸಲು ಯಾವ ನೀತಿ ಸಂಹಿತೆ, ರಾಜಕೀಯ ವ್ಯಕ್ತಿಗಳಿಂದ ಉದ್ಘಾಟನೆ ಮಾಡಲು ಕಾಯುತಿದ್ದಾರೆಯೇ?, ನ್ಯಾಯಾಲಯದ ಸಂಕೀರ್ಣದ ಘಟಕ ಉದ್ಘಾಟನೆಗೆ ಜನಪ್ರತಿನಿಧಿಗಳು ಕಡ್ಡಾಯವೇ? ಎಂಬುದನ್ನು ಮನಗಂಡು ಘಟಕ ಉದ್ಘಾಟನೆ ಮಾಡಿ ನೀರಿನ ಸೌಲಭ್ಯ ನೀಡಬೇಕಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರಿನ ಸೌಲಭ್ಯದ ಕೊರತೆ ಇತ್ತು, ಮಲ್ಲಪುರದಿಂದ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿ ಘಟಕಕ್ಕೆ ನೀರಿನ ಸರಬರಾಜು ಮಾಡಿ ಘಟಕ ಉದ್ಘಾಟನೆ ಮಾಡಲಾಗುತ್ತದೆ.
-ಉಮೇಶ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ನ್ಯಾಯಾಲಯಕ್ಕೆ ಬೆಳಗ್ಗೆ ಕೇಸಿಗೆ ಬಂದರೆ ಕುಡಿಯಲು ನೀರಿಲ್ಲದೆ, ಬಾಯಾರಿಕೊಂಡು ನೀರಿಗಾಗಿ ಪರದಾಡಬೇಕು. ಹಣ ಇದ್ದವರು ಅಂಗಡಿಯಲ್ಲಿ ಖರೀದಿಸಿ ನೀರು ಕುಡಿಯುತ್ತಾರೆ. ನಮ್ಮಂತವರು ಬಾಯಾರಿಕೊಂಡು ಮನೆಗೆ ಹೋಗಬೇಕು. ನಿರ್ಮಾಣ ಮಾಡಿರುವ ಘಟಕ ಬಳಕೆಯಾಗದರೆ ಅನುಕೂಲವಾಗಲಿದೆ.
-ಮುತ್ತುರಾಜ್, ಕಕ್ಷಿದಾರ
* ಕೊಟ್ರೇಶ್.ಆರ್