ಬಳ್ಳಾರಿ: ಎಪಿಎಂಸಿ ಆವರಣದ ರೈತ ಭವನದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ನಡೆಸುತ್ತಿರುವ ರೈತಣ್ಣನ ಊಟಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಎಸ್‌ಪಿ ಸೈದುಲು ಅಡಾವತ್ ಅವರು ರೈತರೊಂದಿಗೆ ಶನಿವಾರ ಊಟ ಸವಿದರು.
ಬಳಿಕ ಮಾತನಾಡಿದ ಡಿಸಿ ಪವನ್‌ಕುಮಾರ್ ಮಾಲಪಾಟಿ, ಎಸ್‌ಪಿ ಸೈದುಲು ಅಡಾವತ್, ಸಂಸ್ಥೆಯಿಂದ ಒಳ್ಳೆಯ ಶುಚಿ-ರುಚಿ ಊಟವನ್ನು ನೀಡುವ ಮಹತ್ಕಾರ್ಯ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ.
ಜತೆಗೆ ರೈತರ ಆರೋಗ್ಯಕ್ಕಾಗಿ ಉಚಿತ ಆಸ್ಪತ್ರೆ ಸೇವೆ ನೀಡುತ್ತಿರುವ ಸಂಸ್ಥೆ ಕಾರ್ಯ ಕೊಂಡಾಡಿದರು. ಸರ್ಕಾರದಿಂದ ಬೇಕಾದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸ್ ರಾವ್, ಗೌರವ ಕಾರ್ಯದರ್ಶಿ ಯಶ್‌ವಂತ್‌ರಾಜ್ ನಾಗಿರೆಡ್ಡಿ ಅವರು, ಡಿಸಿ ಪವನ್‌ಕುಮಾರ ಮಾಲಪಾಟಿ, ಎಸ್‌ಪಿ ಸೈದುಲು ಅಡಾವತ್ ಅವರಿಗೆ ಯೋಜನೆ ಸಂಪೂರ್ಣ ಮಾಹಿತಿಯನ್ನು ಪರಿಚಯಿಸಿದರು.
2021 ನವೆಂಬರ್ 10ರಂದು ರೈತಣ್ಣನ ಮಧ್ಯಾಹ್ನದ ಬಿಸಿ ಊಟ ಯೋಜನೆಯನ್ನು ಆರಂಭಿಸಿದ್ದು ನೆರೆಯ ಕರ್ನೂಲ್, ಅನಂತಪುರ, ರಾಯದುರ್ಗ ಮತ್ತು ಬಳ್ಳಾರಿ ತಾಲೂಕು ಮತ್ತು ಜಿಲ್ಲೆಯ ಸುಮಾರು 50 ಸಾವಿರ ರೈತರು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ರೈತಣ್ಣನ ಆರೋಗ್ಯಕ್ಕಾಗಿ ಸಂಸ್ಥೆಯ ಉಚಿತ ಆಸ್ಪತ್ರೆಯನ್ನು ಸಹ ರೈತರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ರಾತ್ರಿ ವೇಳೆ ಬಳ್ಳಾರಿಯಲ್ಲಿ ತಂಗುವ ರೈತರಿಗಾಗಿ ರೈತಣ್ಣನ ಹಾಸಿಗೆ ವ್ಯವಸ್ಥೆಯನ್ನು ಆರಂಭಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ವೇಳೆ ಬುಡಾ ಅಧ್ಯಕ್ಷ ಪಿ. ಪಾಲಣ್ಣ, ಎಪಿಎಎಂಸಿ ಅಧ್ಯಕ್ಷ ಬಿ. ಉಮೇಶ್, ಎಪಿಎಂಸಿ ನಿರ್ದೇಶಕ ಕಾಂಡ್ರ ಬಾಬು, ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಮಹಾರುದ್ರಗೌಡ, ಎ.ಮಂಜುನಾಥ್, ರಮೇಶ್ ಬುಜ್ಜಿ, ಕೆ.ಸಿ.ಸುರೇಶ್ ಬಾಬು, ಮಾಜಿ ಅಧ್ಯಕ್ಷ ವಿ. ರವಿಕುಮಾರ್, ಜಂಟಿ ಕಾರ್ಯದರ್ಶಿ ಎಸ್.ದೊಡ್ಡನಗೌಡ, ಸೊಂತ ಗಿರಿಧರ್, ವಿವಿಧ ಸಮಿತಿಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.