Advertisement

ಚೆನ್ನಾವರ ಸರಕಾರಿ ಕಿ.ಪ್ರಾ.ಶಾಲೆ: ತರಗತಿ ಕೊಠಡಿ ಕೊರತೆ

07:48 PM Sep 19, 2021 | Team Udayavani |

ಸವಣೂರು: ಸವಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಪಾಲ್ತಾಡಿ ಗ್ರಾಮದ ಚೆನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗೆ ಅನುಗುಣವಾಗಿ ಕೊಠಡಿಯಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಜತೆಗೆ ಶಾಲೆ ಸಂಪರ್ಕ ರಸ್ತೆಯೂ ಅಭಿವೃದ್ಧಿಯಾಗಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.

Advertisement

ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗಿನ ನಡುವೆಯೂ ಈ ಕಿ.ಪ್ರಾ. ಶಾಲೆಯಲ್ಲಿ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ 41 ಮಕ್ಕಳು ಇದ್ದಾರೆ.

ಜಿಲ್ಲಾ ಮಟ್ಟದಲ್ಲಿ ಹೆಸರು :

ಚೆನ್ನಾವರ ಕಿ.ಪ್ರಾ. ಶಾಲೆಯಲ್ಲಿ ಧನಾತ್ಮಕ ಚಟುವಟಿಕೆಯ ಮೂಲಕ ಜಿಲ್ಲಾ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಈ ಶಾಲೆಗೆ ನಾಲ್ಕು ಬಾರಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ದೊರಕಿದೆ. ಶಾಲೆಯ ಆವರಣದಲ್ಲಿ ವಿವಿಧ ಸಸ್ಯಗಳನ್ನು ಬೆಳೆಸಲಾಗಿದೆ. ಜತೆಗೆ ಮಳೆಕೊಯ್ಲು ಘಟಕ, ಜಲಮರು ಪೂರಣ ಘಟಕಗಳನ್ನು ಅಳವಡಿಸಲಾಗಿದೆ.

ಬೇಕಿದೆ ಹೆಚ್ಚುವರಿ ಕೊಠಡಿ :

Advertisement

ಈ ಶಾಲೆಯಲ್ಲಿ ಮೂರು ಕೊಠಡಿಗಳಿವೆ. ಇದರಲ್ಲಿ ಒಂದು ಕೊಠಡಿಯಲ್ಲಿ ಮುಖ್ಯ ಶಿಕ್ಷಕರ ಕಚೇರಿ ಮಾಡಲಾಗಿದೆ.

ಉಳಿದ ಎರಡು ಕೊಠಡಿಗಳಲ್ಲಿ 1ರಿಂದ 5ನೇ ತರಗತಿಗಳನ್ನು ನಡೆಸಬೇಕಾದ ಪರಿಸ್ಥಿತಿ ಇದೆ. 5 ತರಗತಿಗಳಿಗೆ ಇರುವುದು ಇಬ್ಬರು ಶಿಕ್ಷಕರು. ಕಚೇರಿ ಕೆಲಸಗಳೊಂದಿಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕಿದೆ.

ಈ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್‌ ತರಗತಿಗಳನ್ನೂ ಗುಬ್ಬಚ್ಚಿ ಸ್ಪೀಕಿಂಗ್‌ ಎಂಬ ಹೆಸರಿನಿಂದ ಕಲಿಸಲಾಗುತ್ತದೆ. ಜತೆಗೆ ದಾನಿಗಳ ನೆರವಿನಿಂದ ಕಂಪ್ಯೂಟರ್‌ ಅಳವಡಿಕೆ, ಆಟದ ಮೈದಾನದ ವಿಸ್ತರಣೆಯಾಗಿದೆ.

ರಸ್ತೆಯೂ ಅಭಿವೃದ್ಧಿಯಾಗಬೇಕಿದೆ:

ಬೆಟ್ಟದ ಮೇಲೋಂದು ಮನೆಯ ಮಾಡಿ ಎಂಬಂತೆ ಈ ಶಾಲೆ ಎತ್ತರವಾದ ಸ್ಥಳದಲ್ಲಿದ್ದು,ಈ ಶಾಲೆಗೆ ಬರುವ ರಸ್ತೆಯೂ ಅಭಿವೃದ್ಧಿಯಾಗಬೇಕಿದೆ. ಅಕ್ಷರ ದಾಸೋಹದ ಅಕ್ಕಿ ಬರುವ ಲಾರಿಗಳು ಶಾಲೆಗೆ ಬರಲು ಹರಸಾಹಸ ಮಾಡಬೇಕಾದ ಸ್ಥಿತಿ ಇಲ್ಲಿದೆ.

ಈಡೇರಲಿ ಬೇಡಿಕೆ :

ಈ ಶಾಲೆಗೆ ಇನ್ನೂ ಮೂರು ಕೊಠಡಿಗಳ ಆವಶ್ಯಕತೆ ಇದೆ. ಜತೆಗೆ ಶಾಲಾ ಸಂಪರ್ಕ ರಸ್ತೆಯೂ ಅಭಿವೃದ್ದಿಯಾಗಬೇಕಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರಿಯಾದ ಶೌಚಾಲಯವೂ ಇಲ್ಲದ ಪಟ್ಟಿಗೆ ಸೇರಿದೆ. ಈ ಎಲ್ಲ ಬೇಡಿಕೆಗಳು ಶೀಘ್ರವಾಗಿ ಈಡೇರಲಿ ಎಂಬುದು ಶಿಕ್ಷಣ ಪ್ರೇಮಿಗಳ ಆಶಯ.

 

-ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next