Advertisement

ಹಳ್ಳಿಗಳ ವಿಂಗಡಣೆ: ಮೂಡದ ಒಮ್ಮತ

04:37 PM Apr 12, 2022 | Team Udayavani |

ತೇರದಾಳ: ತಾಲೂಕಿಗೆ ಹಳ್ಳಿಗಳ ವಿಂಗಡಣೆ ಕುರಿತು ಚರ್ಚಿಸಲು ಕರೆದಿದ್ದ ಸಾರ್ವಜನಿಕ ಸಭೆಯಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರ ನಡುವೆ ಗದ್ದಲ ಗಲಾಟೆ ನಡೆದು ಗೊಂದಲ ಗೂಡಾಗಿ ಪರಿಣಮಿಸಿ, ಹಳ್ಳಿಗಳ ವಿಂಗಡಣೆಗೆ ಒಮ್ಮತ ಮೂಡಲಿಲ್ಲ.
ಪಟ್ಟಣದ ಅಲ್ಲಮ ಪ್ರಭು ದೇವರ ದೇವಸ್ಥಾನದಲ್ಲಿ ತಾಲೂಕು ಹೋರಾಟ ಸಮಿತಿ ಆಯೋಜಿಸಿದ್ದ ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ, ತಾಲೂಕು ಘೋಷಣೆಯಾಗಿ ಮೂರು ವರ್ಷ ಕಳೆದರೂ ಹಳ್ಳಿಗಳ ವಿಂಗಡಣೆ ಆಗಿಲ್ಲ. ಈ ಕುರಿತು ಹೋರಾಟ ಸಮಿತಿ ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರಿಗೆ ತೇರದಾಳ ಹೋಬಳಿಯ ಅರ್ಧದಷ್ಟು ಹಳ್ಳಿಗಳನ್ನು ವಿಂಗಡಣೆ ಮಾಡಿಕೊಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಪಂ ವ್ಯಾಪ್ತಿಯ ಏಳು ಹಳ್ಳಿಗಳನ್ನು ಮಾತ್ರ ಸೇರ್ಪಡೆ ಮಾಡಲು ಮುಂದಾಗಿದ್ದಾರೆ. ಇದು ತೇರದಾಳ ಜನತೆಗೆ ಮಾಡುತ್ತಿರುವ ಅನ್ಯಾಯ. ಆದ್ದರಿಂದ ಸರಕಾರದ ನಿಯಮಾನುಸಾರ ಒಂದು ಲಕ್ಷ ಜನಸಂಖ್ಯೆ ಹೊಂದುವ ಹಾಗೆ ಹಳ್ಳಿಗಳನ್ನು ವಿಂಗಡಣೆ ಮಾಡಬೇಕೆಂದು ಒತ್ತಾಯಿಸಿದರು.

Advertisement

ಗೋಲಭಾವಿ ಗ್ರಾಮದ ಶಂಕರ ಹುನ್ನೂರ ಮಾತನಾಡಿ, ಈಗ ಏಳು ಹಳ್ಳಿಗಳನ್ನು ಸೇರ್ಪಡೆ ಮಾಡಲಿ. ಇದಕ್ಕೆ ಯಾವುದೇ ಅನುದಾನ ಕಡಿಮೆ ಆಗುವುದಿಲ್ಲ. ಮತ್ತು ತಾಲೂಕವೂ ಸುಳ್ಳಾಗುವುದಿಲ್ಲ ಎಂದು ಹೇಳುತ್ತಿದ್ದಂತೆ ಮಾತಿನ ಸಮರ ಪ್ರಾರಂಭಗೊಂಡಿತು. ಆಡಳಿತ ಪಕ್ಷದವರೆಲ್ಲರು ಒಂದಾದಂತೆ ಸಮಿತಿಯವರೊಂದಿಗೆ ಮಾತಿಗೆ ಮಾತು ಬೆಳೆಸಿ ಸಭೆಯಿಂದ ಹೊರ ನಡೆಯಲು ಮುಂದಾದರು.

ಕಾಲತಿಪ್ಪಿ ಗ್ರಾಮದ ಲಕ್ಕಪ್ಪ ಪಾಟೀಲ, ತಮದಡ್ಡಿ ಗ್ರಾಮದ ಸುರೇಶ ಅಕ್ಕಿವಾಟ, ಮಹಾವೀರ ಕೊಕಟನೂರ, ಶಂಕರ ಕುಂಬಾರ, ಬಸವರಾಜ ನಿರ್ವಾಣಿ, ಮುಸ್ತಫಾ ಮೋಮಿನ್‌, ಸದಾಶಿವ ಹೊಸಮನಿ ಮಾತನಾಡಿ, ಈಗ ಎಷ್ಟು ಹಳ್ಳಿಗಳನ್ನು ವಿಂಗಡಣೆ ಮಾಡುತ್ತಾರೆ ಮಾಡಲಿ. ಅವುಗಳ ಜತೆಗೆ ಸರಕಾರಿ ಕಚೇರಿ ಆರಂಭಿಸುವಂತೆ ಸರಕಾರದ ಮೇಲೆ ಒತ್ತಡ ಹೇರೋಣ. ಹಾಗೂ ಹೆಚ್ಚಿನ ಹಳ್ಳಿಗಳ ವಿಂಗಡಣೆಗೂ ಒತ್ತಾಯ ಮಾಡೋಣ. ಸಣ್ಣ ತಾಲೂಕು ಆದರೂ ಅಭಿವೃದ್ಧಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಹೋರಾಟ ಸಮಿತಿ ಅಧ್ಯಕ್ಷ ಭುಜಬಲ್ಲಿ ಕೆಂಗಾಲಿ, ಪಿ.ಎಸ್‌. ಮಾಸ್ತಿ, ನೇಮಣ್ಣ ಸಾವಂತನವರ, ಪ್ರಕಾಶ ಧುಪದಾಳ, ಅನ್ವರ ಸಂಗತ್ರಾಸ, ಈರಪ್ಪ ಬಾಳಿಕಾಯಿ ಮಾತನಾಡಿ, ಹೋಬಳಿ ಕೇಂದ್ರ, ಮತಕ್ಷೇತ್ರದ ಕೇಂದ್ರ ಸ್ಥಾನ ಆಗಿರುವ ತೇರದಾಳ ತಾಲೂಕು ಬೇಡಿಕೆಗೆ ಕಾಂಗ್ರೆಸ್‌ ಬಿಜೆಪಿ ಎರಡು ಪಕ್ಷಗಳು ದ್ರೋಹ ಬಗೆದಿವೆ. ತೇರದಾಳ ಹೋಬಳಿಯಲ್ಲಿ 32 ಹಳ್ಳಿಗಳಿದ್ದು, ಅರ್ಧದಷ್ಟು ಹಳ್ಳಿಗಳನ್ನು ತೇರದಾಳ ತಾಲೂಕಿಗೆ ವಿಂಗಡಣೆ ಮಾಡಲೇಬೇಕು. ಇದರಲ್ಲಿ ರಾಜಕೀಯ ಬೇಡ. ಪಕ್ಷಾತೀತವಾಗಿ ಹೋರಾಟ ನಡೆಸೋಣ ಎಂದು ಹೇಳಿದರು.

ನಿಂಗಪ್ಪ ಮಲಾಬದಿ ಮಾತನಾಡಿ, ನಮ್ಮ ತಾಲೂಕಿಗೆ ಬರುತ್ತೇವೆ ಎಂದು ಹೇಳಿದ ಗ್ರಾಮಗಳ ಠರಾವು ಕೂಡ ಕೊಡುತ್ತೇವೆ. ನಮಗೆ ಅನ್ಯಾಯ ಮಾಡಬೇಡಿ. ಅರ್ಧದಷ್ಟು ಹಳ್ಳಿಗಳನ್ನು ಕೊಡಿ ಎಂದು ಶಾಸಕರಿಗೆ ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಮಾತನಾಡಿ, ಶಾಸಕ ಸಿದ್ದು ಸವದಿ ಅವರ ಇಂದಿನ ಬೆಳವಣಿಗೆಗೆ ನನ್ನದು ಪಾತ್ರ ಇದೆ. ಶಾಸಕರು ತೇರದಾಳಕ್ಕೆ ಅನ್ಯಾಯ ಮಾಡುವುದಿಲ್ಲ ಎಂದಾದರೆ ಈಗಲೇ ಜಿಲ್ಲಾಧಿಕಾರಿಗಳ ಮುಂದೆ ಕುಳಿತು ತೇರದಾಳ ಹೋಬಳಿಯ ಅರ್ಧ ಹಳ್ಳಿಗಳನ್ನು ತೇರದಾಳ ತಾಲೂಕಿಗೆ ವಿಂಗಡಣೆ ಮಾಡುವುದಕ್ಕೆ ಹೇಳಲಿ ಎಂದು ಹೇಳುತ್ತಿದ್ದಂತೆ ಮತ್ತೆ ಗಲಾಟೆ ಶುರುವಾಗಿದ್ದರಿಂದ ಸಭೆ ಗೊಂದಲ ಗೂಡಾಗಿತು. ಹಳ್ಳಿಗಳ ವಿಂಗಡಣೆ ಕುರಿತು ಯಾವುದೇ ಒಮ್ಮತಕ್ಕೆ ಬಾರದೆ ಇದ್ದುದರಿಂದ ಸೇರಿದ ಜನರು ಹೊರಬಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next