Advertisement

ಮೈಸೂರಲ್ಲೇ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕಟ್ಟಡ

09:09 PM Feb 15, 2020 | Lakshmi GovindaRaj |

ಮೈಸೂರು: ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಕೇಂದ್ರ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಮೈಸೂರಿನಲ್ಲಿ ಸರ್ಕಾರ ಮಂಜೂರು ಮಾಡಿರುವ ಮೂರು ಎಕರೆ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಪರಿಶೀಲಿಸಿದರು.

Advertisement

ಮೈಸೂರು ವಿವಿಯ ಮಾನಸಗಂಗೋತ್ರಿಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ ಜಮೀನಿನ ಮಂಜೂರಾತಿ ಆದೇಶ ಪತ್ರವನ್ನು ಭಾರತೀಯ ಭಾಷಾ ಸಂಸ್ಥೆಯ ನಿರ್ದೇಶಕ ಡಿ.ಜಿ.ರಾವ್‌ ಅವರಿಗೆ ಹಸ್ತಾಂತರಿಸಿ, ಕೂಡಲೇ ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಆರ್ಥಿಕ ನೆರವು: ತ್ವರಿತವಾಗಿ ಕೆಲಸ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಕಟ್ಟಡದ ತಾತ್ಕಾಲಿಕ ದುರಸ್ತಿ ಹಾಗೂ ಇನ್ನಿತರ ಸೌಲಭ್ಯಗಳ ಅಗತ್ಯವಿದ್ದಲ್ಲಿ ಅಂದಾಜು ವೆಚ್ಚಗಳ ಪ್ರಸ್ತಾವನೆಯನ್ನು ನೀಡಿದರೆ ರಾಜ್ಯ ಸರ್ಕಾರದಿಂದ ತುರ್ತಾಗಿ ಕೆಲಸ ಆರಂಭಿಸಲು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

ನೋಂದಣಿಗೆ ಕ್ರಮ: ಕೇಂದ್ರ ಸರ್ಕಾರದ ಅನುಮೋದನೆಯ ನಂತರ ಸಹಕಾರ ಸಂಘ ಕಾಯ್ದೆಯಡಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವನ್ನು ಸ್ವಾಯತ್ತ ಸಂಸ್ಥೆಯಾಗಿ ನೋಂದಣಿಗೆ ಕ್ರಮ ವಹಿಸುವುದು ಹಾಗೂ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಮಂಡಳಿಯನ್ನು ನಿಯಮಾನುಸಾರ ರಚಿಸಲು ಶೀಘ್ರ ಕ್ರಮವಹಿಸುವಂತೆ ಭಾರತೀಯ ಭಾಷಾ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆಚ್ಚಿನ ಆರ್ಥಿಕ ನೆರವಿನ ನಿರೀಕ್ಷೆ: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಹೆಚ್ಚು ಒತ್ತು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರ್ಧರಿಸಿದ್ದು, ಕಳೆದ ಏಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಈಗ ಚಾಲನೆ ನೀಡಲಾಗಿದೆ. ಬಾಲಗ್ರಹ ಪೀಡಿತವಾಗಿದ್ದ ಈ ಯೋಜನೆಗೆ ರಾಜ್ಯಸರ್ಕಾರ ಈಗ ಆರ್ಥಿಕ ನೆರವು ನೀಡಿದೆ, ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಆರ್ಥಿಕ ನೆರವು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

Advertisement

ಇಲ್ಲಿಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರೂ ಈ ಯೋಜನೆ ಬಗ್ಗೆ ಆಸಕ್ತಿ ತೋರದ್ದರಿಂದ ನೆನೆಗುದಿಗೆ ಬಿದ್ದಿತ್ತು. ದೂರದ ಊರಿನವನಾದ ನಾನು ಆಸಕ್ತಿವಹಿಸಿದ್ದರಿಂದ ಈ ಯೋಜನೆಗೆ ಈಗ ಚಾಲನೆ ದೊರೆತಿದೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಎಂಬುದು ಕೇವಲ ಫ‌ಲಕವಲ್ಲ. ಅದರ ಹಿಂದೆ ಇರುವ ಮನೋಧರ್ಮ ಬಹಳ ಮುಖ್ಯ ಎಂದರು.

ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುವ ಮೈಸೂರಿನಲ್ಲಿ ಭಾರತೀಯ ಭಾಷಾ ಅಧ್ಯಯನ ಸಂಸ್ಥೆ ಸ್ಥಾಪನೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಮುಂದೆ ಸಾಹಿತ್ಯಿಕ, ಸಾಂಸ್ಕೃತಿಕ ಜಗತ್ತೂಂದನ್ನು ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನದ ಜೊತೆಯಲ್ಲಿ ಕೊಂಡೊಯ್ಯುವ ಬದ್ಧತೆಯನ್ನು ಈ ಸಂಸ್ಥೆ ಮಾಡಲಿದೆ ಎಂದು ಹೇಳಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾತ್‌, ಕುಲಸಚಿವ ಪ್ರೊ.ಆರ್‌.ಶಿವಪ್ಪ, ಭಾರತೀಯ ಭಾಷಾ ಸಂಸ್ಥೆಯ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next