ನಾನೋರ್ವ ಪದವಿ ಶಿಕ್ಷಕಿ. ನಾನು ಮನೆಗಿಂತ ಹೆಚ್ಚಾಗಿ ಇದ್ದಿದ್ದು ಮಕ್ಕಳೊಟ್ಟಿಗೆ. ಬೆಳಿಗ್ಗೆ 8:00 ಗಂಟೆಗೆ ಮನೆ ಬಿಟ್ಟರೆ, ಮತ್ತೆ ಮನೆ ಸೇರೋದು ರಾತ್ರಿ 8:30 – 9:00 ಗಂಟೆಗೆ. ಬೆಳಿಗ್ಗೆ ಕಾಲೇಜು ನಂತರ ಸಾಯಂಕಾಲ ಶಾಲಾ ಮಕ್ಕಳಿಗೆ ಕನ್ನಡ ಮತ್ತು ಹಿಂದಿ ಟ್ಯೂಷನ್ ಕೊಡುತ್ತಾ ಹೀಗೆ ನನ್ನ ಸಮಯ ಮಕ್ಕಳ ಜೊತೆಗೆ. ನನ್ನ ಪದವಿ ಮಕ್ಕಳು ನನಗಿಂತ ಉದ್ದ ಇದ್ದರೂ ನನ್ನ ಮುಂದೆ ಪುಟ್ಟ ಮಕ್ಕಳಾಗಿ ತಮಾಷೆ-ನಗು, ಆಟ-ಪಾಠ, ಹುಟ್ಟು ಹಬ್ಬ ಆಚರಣೆ ಹೀಗೆ ಅವರೆಲ್ಲರಿಗೂ ನಾನೆಂದರೆ ಏನೋ ಪ್ರೀತಿ.
ಕೆಲವೊರ್ವರು ಅವರ ಬದುಕಿನ ಕಹಿ-ಸಿಹಿ, ಕನಸು ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಈ ಒಡನಾಟದಿಂದ ಅಲ್ಲೊಂದು ಪ್ರೀತಿಯ ಬಾಂಧವ್ಯ ಅವರೊಂದಿಗೆ ನಾನು ಒರ್ವಳಾಗಿ ಸಮಯ ಕಳೆಯುತ್ತಿದ್ದರೆ ವ್ಹಾ ಎಷ್ಟು ಚೆನ್ನಾಗಿತ್ತು ನನ್ನ ಪ್ರಪಂಚ! ಅಲ್ಲಿಂದ ನೇರ ಟ್ಯೂಷನ್ ಕಡೆ ಹೊರಟರೆ ಅದೊಂದು ಬೇರೆಯದೆ ಪ್ರಪಂಚ. ಅಲ್ಲಿ ನನ್ನ ಸುತ್ತ ಮಿನುಗೊ ಚುಕ್ಕಿಗಳಂತೆ ಆ ಮಕ್ಕಳು ಮ್ಯಾಂ , ಎಕ್ಸ್ಯೂಸ್ಮಿ ಮ್ಯಾಂ, ಟುಡೆ ಐ ಗೊಟ್ ಫುಲ್ ಇನ್ ಡಿಕ್ಟೆಷನ್ ಮ್ಯಾಂ, ಟುಮಾರೊ ಐಯಂ ಹಾವಿಂಗ್ ಟೆಸ್ಟ್ ಮ್ಯಾಂ, ಐ ಕಂಪ್ಲಿಟೆಡ್ ಮೈ ಹೊಂ ವರ್ಕ್ ಮ್ಯಾಂ… ಪ್ಲೀಸ್ ಮ್ಯಾಂ, ಯೆಸ್ ಮ್ಯಾಂ , ಥ್ಯಾಂಕ್ಯೂ ಮ್ಯಾಂ ಹೀಗೆ ಹೋದ ತಕ್ಷಣ ಅವರ ಮುದ್ದು ಮುದ್ದು ಧ್ವನಿ ಎಷ್ಟು ಖುಷಿ ಕೊಡುತ್ತೆ ಗೊತ್ತಾ!
ಅದೆಷ್ಟೇ ಆಯಾಸ ಇದ್ದರೂ ಒಮ್ಮೆ ಅವರ ಜೊತೆ ಕುಳಿತು ಪಾಠ ಶುರು ಮಾಡಿದರೆ ಏನೋ ಖುಷಿ. ನಾವಿನ್ನೂ ಆ ಮಕ್ಕಳ ಮುಂದಿನ ಕಲಿಕೆಗೆ ಉಪಯುಕ್ತ ಆಗುವ ಹಾಗೆ ಅವರಿಗೊಂದಿಷ್ಟು ಹೆಚ್ಚಿನ ಚಟುವಟಿಕೆಗಳನ್ನು ಯೋಚಿಸಿ ಏನೇನೋ ಯೋಚಿಸಿದ್ವಿ, ಆದರೆ ಅಷ್ಟರಲ್ಲಿ ಈ ಕೋವಿಡ್ ಗ್ರಹಣದ ರೀತಿ ಬಂದುಬಿಟ್ಟಿತು. ಈ ಕೋವಿಡ್ ಎಂಬ ಮಹಾಮಾರಿ ಮಕ್ಕಳ ಪಾಲಿಗಂತು ನಿಜವಾಗಿಯು ಮಾರಿಯಾಗಿ ಬಿಟ್ಟಿತು. ಅದೆಷ್ಟೋ ಶಿಕ್ಷಕರು ತುಂಬಾ ಕಷ್ಟ ಪಟ್ಟು ಮಕ್ಕಳನ್ನು ಒಂದು ಮಟ್ಟಕ್ಕೆ ತಂದಿರ್ತಾರೆ. ಆದರೆ ಮತ್ತೆ ಶಾಲೆ ಶುರುವಾದಾಗ ಅವರ ನಿರೀಕ್ಷೆ ಸುಳ್ಳಾಗಲೂಬಹುದು. ದಿನಾಲೂ ಮಕ್ಕಳ ಬೊಬ್ಬೆ, ದೂರು, ಜಗಳ ಪರಿಹರಿಸುತ್ತಿದ್ದ ನಾವು (ಟೀಚರ್ಸ್) ಈಗ ಏನೋ ಕಳೆದುಕೊಂಡ ಹಾಗಿರುವುದು ಸುಳ್ಳಲ್ಲ. ಮಕ್ಕಳ ಟೀಚರ್, ಮ್ಯಾಂ ಅನ್ನೋ ಸಪ್ತಸ್ವರ ಇಲ್ಲದ ನಮಗೆ ಶಾಲೆಯ ಆವರಣ ಬಿಕೋ ಅನಿಸುತ್ತೆ! ನಿಜ ಹೇಳಬೇಕಂದರೆ ನಮಗೆ ಆನ್ ಲೈನ್ ಕ್ಲಾಸ್ ನಲ್ಲಿ ಸಮದಾನ ಇಲ್ಲ. ಎಲ್ಲೋ ಏನೊ ಮಿಸ್ ಮಾಡಿದ್ವಿ ಅನಿಸ್ತಿರುತ್ತೆ. ಮಕ್ಕಳ ಪಕ್ಕದಲ್ಲಿ ನಿಂತು ಪಾಠ ಮಾಡಿ ಅವರಿಗೆ ಅರ್ಥ ಮಾಡಿಸುತ್ತಿದ್ದಾಗ ಇದ್ದ ಸಮಾಧಾನ ಈ ಆನ ಲೈನ್ ಪಾಠದಲ್ಲಿಲ್ಲ. ದೇವರಲ್ಲಿ ಬೇಡುವುದೊಂದೆ ಈ ಮಹಾಮಾರಿ ಕೊನೆಯಾಗಿ ಎಲ್ಲವೂ ಮೊದಲಿನಂತಾಗಿ ಎಲ್ಲರ ಕಷ್ಟನು ದೂರಾವಾಗಲಿ ಅಷ್ಟೆ. ನನ್ನ ಪ್ರೀತಿಯ ಮಕ್ಕಳೆ ಆದಷ್ಟು ಬೇಗ ಭೇಟಿಯಾಗ್ತೀವಿ ನಾವು. ಅಲ್ಲಿವರೆಗೂ ಮಿಸ್ ಯೂ
ನಿಮ್ಮ ಪ್ರೀತಿಯ ಶಿಕ್ಷಕಿ
ಶ್ರುತಿ