Advertisement

ಹಳೇ ಮೈಸೂರಲ್ಲಿ ಹೆಚ್ಚು ಸೀಟು ಗೆಲ್ಲದ ಬಗ್ಗೆ ಕ್ಲಾಸ್‌

06:45 AM May 19, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಹಳೇ ಮೈಸೂರು ಭಾಗದಲ್ಲಿ ಇನ್ನೂ ಏಳು ಶಾಸಕರು ಗೆದ್ದಿದ್ದರೆ,
ಅಡೆjಸ್ಟ್‌ಮೆಂಟ್‌ ರಾಜಕಾರಣ ಮಾಡಿಕೊಳ್ಳದೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಅಥವಾ ಇನ್ನಷ್ಟು ಗೆಲ್ಲುವ
ಶಕ್ತಿಯಿದ್ದ ಪ್ರಭಾವಿ ನಾಯಕರನ್ನು ಸೆಳೆದಿದ್ದರೆ ಎಂಬಿತ್ಯಾದಿ ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

Advertisement

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಬಿಜೆಪಿಗೆ ಬಹುಮತ ಸಿಗದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಅಧಿಕಾರ ಹಿಡಿಯಲು ಮುಂದಾಗಿರುವುದು ಹಾಗೂ 104 ಸ್ಥಾನ ಗಳಿಸಿದರೂ ಅಧಿಕಾರದಿಂದ ವಂಚಿತರಾಗುವ ಸನ್ನಿವೇಶ ಒದಗಿ ಬಂದಿರುವ ಬಗ್ಗೆ ಬಿಜೆಪಿ ಹೈಕಮಾಂಡ್‌ ತೀವ್ರ ಬೇಸರಗೊಂಡಿದೆ.

ಹೀಗಾಗಿ, ಹಳೇ ಮೈಸೂರು ಭಾಗದಲ್ಲಿ ಮತ್ತಷ್ಟು ಸಾಧನೆ ಮಾಡುವ ಅವಕಾಶ ಇದ್ದರೂ ಕೈ ಚೆಲ್ಲಲಾಯಿತು ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಫ‌ಲಿತಾಂಶದ ನಂತರ ರಾಜ್ಯ ನಾಯಕರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ.

ಬಹುಮತ ಬರದೆ ಆಪರೇಷನ್‌ ಕಮಲಕ್ಕೆ ಕೈ ಹಾಕುವ ಅಥವಾ ಬೇರೆ ಪಕ್ಷದ ಶಾಸಕರನ್ನು ಸೆಳೆದು ವಿಶ್ವಾಸ ಮತ
ಪ್ರಕ್ರಿಯೆಯಿಂದ ದೂರ ಉಳಿಸುವ ಅನಿವಾರ್ಯತೆ ಸೃಷ್ಟಿಯಾಗಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ
ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರವು ಎಲ್ಲ ರೀತಿಯಲ್ಲೂ ಸಹಕಾರ ಕೊಟ್ಟರೂ ರಾಜ್ಯ ನಾಯಕತ್ವ
ಬಹುಮತದ ಗುರಿ ತಲುಪುವಲ್ಲಿ ವಿಫ‌ಲವಾಗಿರುವ ಬಗ್ಗೆ ಸಿಡಿಮಿಡಿಗೊಂಡಿದ್ದಾರೆಂದು ತಿಳಿದು ಬಂದಿದೆ.

ಚುನಾವಣೆ ಫ‌ಲಿತಾಂಶದ ದಿನ ಪ್ರಾರಂಭಿಕ ಹಂತದಲ್ಲಿ 115ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ
ಎಂಬುದಕ್ಕೆ ಸಂತಸಪಟ್ಟುಕೊಂಡು ಮೈ ಮರೆತಿದ್ದರಿಂದಲೇ ಇಂತಹ ಸ್ಥಿತಿ ಬಂದಿದೆ. ಬಿಬಿಎಂಪಿ ಚುನಾವಣೆ ಮುಗಿದ
ನಂತರವೂ ಹೀಗೆಯೇ ಆಗಿತ್ತು. ಆದರೂ ಎಚ್ಚೆತ್ತುಕೊಳ್ಳದೆ ಜೆಡಿಎಸ್‌-ಕಾಂಗ್ರೆಸ್‌ ಜತೆಗೂಡಲು ನಾವೇ ಅವಕಾಶ
ಮಾಡಿಕೊಟ್ಟಂತಾಯಿತು ಎಂದು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

Advertisement

ಹಾಸನ ಜೆಡಿಎಸ್‌ ಭದ್ರಕೋಟೆ, ಅಲ್ಲಿ ಪ್ರೀತಂ ಗೌಡ ಬಿಜೆಪಿ ಖಾತೆ ತೆರೆದಿರಬೇಕಾದರೆ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಯಾಕೆ ಸಾಧ್ಯವಾಗಲಿಲ್ಲ. ಐದು ಜಿಲ್ಲೆಗಳಲ್ಲಿ ಬಿಜೆಪಿಯದು ಶೂನ್ಯ ಸಂಪಾದನೆಯಾಗಿದೆ. ಬೆಂಗಳೂರಿನಲ್ಲಂತೂ 18 ಸ್ಥಾನದ ಗುರಿ ಹೊಂದಲಾಗಿತ್ತಾದರೂ 11 ಸ್ಥಾನ ಮಾತ್ರ ಗಳಿಸಲಾಗಿದೆ. ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಚ್ಚರವಹಿಸಿ ಅಡೆjಸ್ಟ್‌ಮೆಂಟ್‌ ರಾಜಕಾರಣ ಮಾಡದಿದ್ದರೆ ಇನ್ನೂ 5 ಸ್ಥಾನ ಗಳಿಸುವ ಸಾಧ್ಯತೆಯಿತ್ತು.

ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಈ ಮೊದಲು ಶಾಸಕರನ್ನು ಹೊಂದಿತ್ತು. ಆದರೆ, ಮತ್ತೆ ಶಕ್ತಿ ಕಳೆದುಕೊಳ್ಳಲು ಕಾರಣವೇನು? ರಾಜ್ಯದ ಉತ್ತರ ಕರ್ನಾಟದಲ್ಲಿ, ಕರಾವಳಿ ಭಾಗದಲ್ಲಿ ಹೆಚ್ಚು ಸ್ಥಾನ ಬರವುದಾದರೆ ಹಳೇ ಮೈಸೂರು ಭಾಗದಲ್ಲಿ ಯಾಕೆ ಅದು ಸಾಧ್ಯವಾಗುವುದಿಲ್ಲ ? ಎಂದು ಅಮಿತ್‌ ಶಾ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.

ಗೆಲ್ಲುವ ಅವಕಾಶವಿತ್ತು
ಕುಣಿಗಲ್‌, ತುಮಕೂರು ಗ್ರಾಮಾಂತರ, ಗುಬ್ಬಿ, ಕೆಜಿಎಫ್, ಮಾಲೂರು, ಕೆ.ಆರ್‌.ಪುರಂ, ಬ್ಯಾಟರಾಯನಪುರ, ದಾಸರಹಳ್ಳಿ, ಹೆಬ್ಟಾಳ, ಶಾಂತಿನಗರ, ಶಿವಾಜಿನಗರ,ವಿಜಯನಗರ, ಆನೇಕಲ್‌, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ, ಹನೂರು, ಬಂಗಾರಪೇಟೆ ಕ್ಷೇತ್ರಗಳು ಬಿಜೆಪಿ ಗೆಲ್ಲಬಹುದಾದ ಲಿಸ್ಟ್‌ ನಲ್ಲಿದ್ದವು ಎಂದು ಹೇಳಲಾಗಿದೆ. ಈ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ 3 ರಿಂದ 5 ಸಾವಿರ ಮತಗಳ ಅಂತದಲ್ಲಿ ಸೋತಿದೆ. ಯಡಿಯೂರಪ್ಪ ಸಹ ಶಾಸಕರ ಸಭೆಯಲ್ಲಿ ನಾವು ಮತ್ತಷ್ಟು ಸಾಧನೆ ಮಾಡಬಹುದಾಗಿತ್ತು. ಜಿಲ್ಲಾ ಉಸ್ತುವಾರಿ ನಾಯಕರು ಎಚ್ಚರಿಕೆ ವಹಿಸಬೇಕಿತ್ತು. ಪ್ರಭಾವ ಬಳಸಿದ್ದರೆ ಇನ್ನೂ ನಾಲ್ಕೈದು ಸ್ಥಾನ ಗೆಲ್ಲುವ ಅವಕಾಶವಿತ್ತು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಎಸ್‌ ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next