ಆಂಧ್ರ ಪ್ರದೇಶ: ಹೊಸ ವರ್ಷದ ಆಚರಣೆ ವೇಳೆ ಬಾಲಕರ ಗುಂಪೊಂದು ಮದ್ಯದ ಬಾಟಲಿಗಳನ್ನು ಹಿಡಿದು ಸಂಭ್ರಮಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಈಕುರಿತು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಆಂಧ್ರಪ್ರದೇಶದ ಬಾಲಕರ ಹಾಸ್ಟೆಲ್‌ವೊಂದರಲ್ಲಿ ಡಿ.31 ರ ರಾತ್ರಿ ಹೊಸ ವರ್ಷದ ವೇಳೆ 7 ನೇ ತರಗತಿಯ ವಿದ್ಯಾರ್ಥಿಗಳು ಮದ್ಯದ ಬಾಟಲಿಗಳೊಂದಿಗೆ ಸಂಭ್ರಮಿಸುತ್ತಿದ್ದರು ಎನ್ನುವ ಬರಹದೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ರಾಪ್ತ ವಿದ್ಯಾರ್ಥಿಗಳು ಮದ್ಯ ಹಾಗೂ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದು ವೈರಲ್ ವಿಡಿಯೋದಲ್ಲಿ ಉಲ್ಲೇಖಿಸಿಲಾಗಿತ್ತು.
ಪೊಲೀಸರು ಈ ವಿಡಿಯೋ ಹಿಂದಿನ ಅಸಲಿಯತ್ತನ್ನು ಪತ್ತೆ ಹಚ್ಚಿದ್ದಾರೆ.ಈ ವಿಡಿಯೋವನ್ನು ರೀಲ್ಸ್ ಗಾಗಿ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋದಲ್ಲಿರುವ ವಿದ್ಯಾರ್ಥಿಗಳು ಯಾವುದೇ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿಲ್ಲ. ಹಾಸ್ಟೆಲ್ ಪಕ್ಕದಲ್ಲಿ ವಾಸವಿದ್ದ ಎಸಿ ಮೆಕ್ಯಾನಿಕ್ ಹಾಗೂ ಕಾರು ಚಾಲಕ ಸೇರಿ ಮದ್ಯ ಸೇವಿಸಿದ್ದಾರೆ. ರೀಲ್ಸ್ ಮಾಡುವ ನೆಪದಲ್ಲಿ ವಿದ್ಯಾರ್ಥಿಗಳು ಆ ಸ್ಥಳದಲ್ಲಿ ಕುಳಿತು ಬಿರಿಯಾನಿ ತಿನ್ನುತ್ತಿದ್ದಾಗ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಅನಕಪಲ್ಲಿ ಎಸ್‌ಪಿ ಕೆವಿ ಮುರಳಿಕೃಷ್ಣ ಹೇಳಿದ್ದಾರೆ.
ಡಿಸೆಂಬರ್ 31 ರಂದು ಈ ಘಟನೆ ನಡೆದಿದ್ದು, ವಿಡಿಯೋವನ್ನು ಮೆಕ್ಯಾನಿಕ್ ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳವು ಹಾಸ್ಟೆಲ್ ಅಲ್ಲ.ಹಾಸ್ಟೆಲ್ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವಾಗಿದೆ. ಹಾಸ್ಟೆಲ್ ಆಡಳಿತದ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದ್ದು, ಈಗ ನಾವು ವೀಡಿಯೊವನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುರಳಿಕೃಷ್ಣ ಹೇಳಿದ್ದಾರೆ.