ಬೆಂಗಳೂರು:ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 5, 8, 9 ಹಾಗೂ 11ನೇ ತರಗತಿಗಳಿಗೆ, ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆ ಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಗುರುವಾರ ವಿಭಾಗೀಯ ಪೀಠ ರದ್ದು ಪಡಿಸಿ ಮಧ್ಯಂತರ ಆದೇಶ ನೀಡಿದೆ. ಇದರಿಂದಾಗಿ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ.
ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆ ಯನ್ನು ಹೈಕೋರ್ಟ್ ರದ್ದುಪಡಿಸಿತ್ತು.ಇದು ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರಕಾರದ ಪ್ರಯತ್ನಕ್ಕೆ ಹಿನ್ನಡೆ ಎನ್ನಲಾಗಿತ್ತು.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ, ರಾಜ್ಯ ಸರಕಾರ ಗುರುವಾರ (ಮಾ. 7) ಮೇಲ್ಮನವಿ ಸಲ್ಲಿಸಲಿತ್ತು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದು ಮಾಡಿದೆ.
ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾ| ಕೆ. ಸೋಮಶೇಖರ್ ಹಾಗೂ ನ್ಯಾ| ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಸರಕಾರದ ಮನವಿಯನ್ನು ಪುರಸ್ಕರಿಸಿ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿ ವಿಭಾಗೀಯ ಪೀಠ ಆದೇಶಿಸಿದೆ.
ಗುರುವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ವಿಭಾಗೀಯ ನ್ಯಾಯಪೀಠ ಸುಮಾರು ಒಂದೂವರೆ ತಾಸು ವಾದ-ಪ್ರತಿವಾದ ಆಲಿಸಿ, ಬಳಿಕ ಒಂದೂವರೆ ತಾಸಿಗೂ ಅಧಿಕ ಚರ್ಚೆ ನಡೆಸಿದ ಬಳಿಕ ಸಂಜೆ 7 ಗಂಟೆಗೆ ಆದೇಶ ಪ್ರಕಟಿಸಿತು. ಪ್ರಕರಣದ ಮೆರಿಟ್ ಕುರಿತು ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ಮೇಲ್ಮನವಿಗಳ ಅಂತಿಮ ಇತ್ಯರ್ಥಕ್ಕೆ ಒಳಪಟ್ಟು, ಮಾ. 6ರಂದು ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
11ನೇ ತರಗತಿಯ (ಪ್ರಥಮ ಪಿಯು) ಅಂತಿಮ ಪರೀಕ್ಷೆ ಪೂರ್ಣಗೊಂಡಿದ್ದು, ಉಳಿದ ತರಗತಿಗಳ ಬೋರ್ಡ್ ಪರೀಕ್ಷೆ ಮಾ. 11ರಿಂದ ಆರಂಭ ಗೊಳ್ಳಲಿದೆ.