Advertisement

2ನೇ ತರಗತಿ ಬಾಲಕಿ ಮೇಲೆ ನೃತ್ಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

03:22 PM Feb 09, 2018 | udayavani editorial |

ಕೋಲ್ಕತ : ಎರಡನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಶಾಲೆಯ ನೃತ್ಯ ಶಿಕ್ಷಕನು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ  ವಿಷಯ ಇದೀಗ ಬೆಳಕಿಗೆ ಬಂದಿದ್ದು ತೀವ್ರ ಆಕ್ರೋಶಿತರಾಗಿರುವ ವಿದ್ಯಾರ್ಥಿನಿಯ ಹಾಗೂ ಶಾಲೆಯ ಇತರ ಮಕ್ಕಳ ಹೆತ್ತವರು ಶಾಲೆಯ ಮುಂದೆ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

Advertisement

ನೃತ್ಯ  ಶಿಕ್ಷಕ ಸೌಮೇನ್‌ ಎಂಬಾತನಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಬಾಲಕಿಯು ಮೊನ್ನೆ ಬುಧವಾರದಿಂದ ಶಾಲೆಗೆ ಬರುವುದನ್ನು ನಿಲ್ಲಿಸಿದ್ದಳು. ಮನೆಯವರಿಗೆ ಆಕೆ ವಿಷಯ ತಿಳಿಸಿದಾಗ ಅವರು ಬೆಚ್ಚಿಬಿದ್ದರು. 

ಲೈಂಗಿಕ ದೌರ್ಜನ್ಯದ ವಿಷಯವನ್ನು ಯಾರಲ್ಲಾದರೂ ಬಾಯಿ ಬಿಟ್ಟರೆ ನಿನ್ನನ್ನು ಶಾಲಾ ಮೈದಾನದಲ್ಲಿ ಜೀವಂತ ಹುಗಿದು ಬಿಡುತ್ತೇನೆ ಎಂದು ನೃತ್ಯ ಶಿಕ್ಷಕನು ಬಾಲಕಿಗೆ ಬೆದರಿಕೆ ಹಾಕಿದ್ದ. ಹಾಗಾಗಿ ಆಕೆ ಒಂದು ವರ್ಷದಿಂದಲೂ ಆತನ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಂಡಿದ್ದಳು. 

ಬಾಲಕಿ ಕೊನೆಗೂ ತನ್ನ ಮೇಲಿನ ದೌರ್ಜನ್ಯವನ್ನು ಹೆತ್ತವರಲ್ಲಿ ಹೇಳಿದಾಗ ಅವರು ರೊಚ್ಚಿಗೆದ್ದು ಶಾಲೆಯ ಇತರ ಮಕ್ಕಳ ಹೆತ್ತವರಿಗೂ ವಿಷಯ ತಿಳಿಸಿ ಎಲ್ಲರೂ ಸೇರಿ ಶಾಲೆಯ ಮುಂದೆ ಇಂದು ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಪೊಲೀಸರು ಶಾಲೆಯ ಹೊರಗೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. 

ಶಾಲೆಯಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ; ಸಿಸಿಟಿ ವಿ ಇಲ್ಲವೇ ಇಲ್ಲ ಎಂದಿರುವ ಹೆತ್ತವರು, ಕಾಮಾಂಧ ನೃತ್ಯ ಶಿಕ್ಷಕನನ್ನು ರಕ್ಷಿಸುವ ಕೆಲಸವನ್ನು ಶಾಲಾಡಳಿತ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. 

Advertisement

ಪೊಲೀಸರು ಲೈಂಗಿಕ ದೌರ್ಜನ್ಯದ ಕೇಸನ್ನು ದಾಖಲಿಸಿಕೊಂಡು ನೃತ್ಯ ಶಿಕ್ಷಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪೊಲೀಸರು ನೃತ್ಯ ಶಿಕ್ಷಕನನ್ನು ಕ್ಯಾಂಪಸ್‌ನಿಂದ ಹೊರಗೆ ಒಯ್ಯುವಾಗ ಕೋಪೋದ್ರಿಕ್ತ ಹೆತ್ತವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 

ಕೋಲ್ಕತದ ಇನ್ನೊಂದು ಶಾಲೆಯಲ್ಲಿ ಕೆಲ ತಿಂಗಳ ಹಿಂದೆ ನಾಲ್ಕು ವರ್ಷ ಪ್ರಾಯದ ಬಾಲಕಿಯ ಮೇಲೆ (2018ರ ನವೆಂಬರ್‌ನಲ್ಲಿ) ಲೈಂಗಿಕ ದೌರ್ಜನ್ಯ ನಡೆದ ಬೆನ್ನಿಗೇ ಈ ಘಟನೆ ಬೆಳಕಿಗೆ ಬಂದಿರುವುದು ಆಘಾತಕಾರಿಯಾಗಿದೆ. 

ಹೆತ್ತವರಿಂದ ತೀವ್ರ ಒತ್ತಡಕ್ಕೆ ಗುರಿಯಾಗಿರುವ ಶಾಲಾಡಳಿತದವರು ತಾವಿನ್ನು ಜೂನಿಯರ್‌ ಮತ್ತು ಸೀನಿಯರ್‌ ವರ್ಗದ ನೃತ್ಯ ಶಿಕ್ಷಣಕ್ಕೆ ಪುರುಷರನ್ನು ನೇಮಿಸುವುದಿಲ್ಲ; ಮಹಿಳೆಯರನ್ನು ಮಾತ್ರವೇ ನೇಮಿಸುತ್ತೇವೆ ಮತ್ತು ಶಾಲೆಯಲ್ಲಿ , ಶಾಲಾ ಬಸ್ಸಿನಲ್ಲಿ ಸಿಸಿಟಿವಿ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next