ಹೊಸದಿಲ್ಲಿ: ಹತ್ತನೇ ಮತ್ತು ಹನ್ನೆರಡನೇ ತರಗತಿಗೆ ವರ್ಷಕ್ಕೆ 2 ಬಾರಿ ನಡೆಸಲಾಗುವ ವಾರ್ಷಿಕ ಪರೀಕ್ಷೆ ಕಡ್ಡಾಯ ಅಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
2 ತರಗತಿಗಳ ಪರೀಕ್ಷೆಗಳಲ್ಲಿನ ಅತ್ಯುತ್ತಮ ಅಂಕಗಳನ್ನು ಪರಿಗಣಿಸಲಾಗುತ್ತದೆ. ಜೆಇಇ ಮಾದರಿಯನ್ನು ಇಲ್ಲಿ ಅನುಸರಿಸಲಾಗುತ್ತದೆ ಎಂದು “ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮೊದಲ ಪರೀಕ್ಷೆಗೆ ಚೆನ್ನಾಗಿ ಓದಿ ಪರೀಕ್ಷೆ ಬರೆದು, ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದರೆ 2ನೇ ಪರೀಕ್ಷೆ ಬರೆಯಬೇಕಾಗಿಲ್ಲ. ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದವರಿಗೆ ಅಂಥವರಿಗೆ 2ನೇ ಪರೀಕ್ಷೆಯಲ್ಲಿ ಸಾಧನೆ ಉತ್ತಮ ಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದರು.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಜಾರಿಯಾದ ಬಳಿಕ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಹೇಳಿಕೊಂಡರು.
ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ಪಡೆಯುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಉತ್ತರಿಸಿದ ಸಚಿವ ಪ್ರಧಾನ್ ಇದೊಂದು ಸೂಕ್ಷ್ಮ ವಿಚಾರ. ಅವರು ನಮ್ಮ ಮಕ್ಕಳು. ವಿದ್ಯಾರ್ಥಿಗಳಿಗೆ ಒತ್ತಡ ರಹಿತ ಪರಿಸರ ನಿರ್ಮಾಣ ಮಾಡಿಕೊಡಬೇಕಾಗಿದೆ ಎಂದರು.