ನವದೆಹಲಿ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಮೂಡಿರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸ್ವತಃ ಕೇಂದ್ರ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ಅವರು ಶುಕ್ರವಾರ(ಜೂನ್ 25) ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು
ಏಮ್ಸ್ ನಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದ ಪೋಖ್ರಿಯಾಲ್ ಅವರು ತಾವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಆತಂಕದೊಂದಿಗೆ ಪ್ರಶ್ನೆಗಳನ್ನು ಮತ್ತು ಸಂದೇಶಗಳನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಶುಕ್ರವಾರ ಸಂಜೆ 4ಗಂಟೆಗೆ(ಟ್ವಿಟರ್, ಫೇಸ್ ಬುಕ್ ಅಥವಾ ಇ-ಮೇಲ್ ಮೂಲಕ ಪ್ರಶ್ನೆ ಕೇಳಬಹುದಾಗಿದೆ) ಉತ್ತರಿಸಲಿದ್ದಾರೆ ಎಂದು ವರದಿ ವಿವರಿಸಿದೆ.
ಪ್ರೀತಿಯ ವಿದ್ಯಾರ್ಥಿಗಳೇ, ನಾನು ನಿರಂತರವಾಗಿ ನಿಮ್ಮ ಅಪಾರ ಪ್ರಮಾಣದ ಸಂದೇಶ ಮತ್ತು ಮಾಹಿತಿಯನ್ನು ಸ್ವೀಕರಿಸುತ್ತಿದ್ದೇನೆ. ಅಲ್ಲದೇ ನೀವು ನನ್ನ ಆರೋಗ್ಯದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದೀರಿ. ಇದಕ್ಕಾಗಿ ನಾನು ನಿಮಗೆ ಅಭಿನಂದನೆ ಹೇಳುತ್ತೇನೆ. ನಾನೀಗ ಆರೋಗ್ಯವಂತನಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.