ಲಕ್ನೋ: ಒಂದು ದಿನದ ರಜೆಗಾಗಿ ಒಂದನೇ ತರಗತಿಯ ಬಾಲಕನೊಬ್ಬನನ್ನು ಅದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಇದೇ ರಾಜ್ಯದ ಗುರುಗ್ರಾಮದ ರ್ಯಾನ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿನ ಪ್ರದ್ಯು ಮನ್ ಕೊಲೆ ಪ್ರಕರಣ ಇನ್ನೂ ಹಸಿರಾಗಿರು ವಾಗಲೇ, ಲಕ್ನೋದ ಬ್ರೈಟ್‌ಲ್ಯಾಂಡ್ ಶಾಲೆ ಯಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ತೀವ್ರವಾಗಿ ಘಾಸಿಗೊಳಗಾಗಿದ್ದ ಆರು ವರ್ಷದ ಬಾಲಕ ರಿಥಿಕ್ ಸಾವಿನ ದವಡೆಯಿಂದ ಪಾರಾಗಿದ್ದಾನೆ.
2 ದಿನಗಳ ಹಿಂದೆಯೇ ಈ ಘಟನೆ ಜರುಗಿದ್ದರೂ ಶಾಲೆಯ ಆಡಳಿತ ಮಂಡಳಿ ಈ ವಿಷಯ ಮುಚ್ಚಿಟ್ಟಿದೆ. ಆದರೆ, ಸಾಮಾ ಜಿಕ ಜಾಲತಾಣಗಳು, ಮಾಧ್ಯಮ ಗಳಲ್ಲಿ ವಿಚಾರ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಶಾಲೆಯ ಪ್ರಾಂಶು ಪಾಲರ ಮೇಲೆ ಕೇಸು ದಾಖಲಿಸಿ ಬಂಧಿಸಿ ದ್ದಾರೆ. ಚಾಕುವಿನಿಂದ ಇರಿದ ವಿದ್ಯಾರ್ಥಿ ನಿಯನ್ನೂ ವಶಕ್ಕೆ ತೆಗೆದುಕೊಂಡು ಬಾಲಾಪರಾಧಿಗಳ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಜ. 16ರಂದು ಏಳನೇ ತರಗತಿ ವಿದ್ಯಾರ್ಥಿನಿ 1ನೇ ತರಗತಿಯ ರಿಥಿಕ್‌ನನ್ನು ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಮೊದಲಿಗೆ ವೈಪರ್‌ನಿಂದ ಥಳಿಸಿದ್ದಾಳೆ. ನಂತರ ಚಾಕುವಿನಿಂದ ಬಾಲಕನ ಎದೆ ಮತ್ತು ಹೊಟ್ಟೆಗೆ ಇರಿದಿದ್ದಾಳೆ. ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರು ತನಿಖೆ ಶುರು ಮಾಡಿದ್ದು, ರಿಥಿಕ್‌ಗೆ ಹಲವಾರು ಫೋಟೋ ತೋರಿಸಲಾಗಿದೆ. ಈ ಸಂದರ್ಭದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಗುರುತಿಸಿ ದ್ದಾರೆ. ಇದಾದ ಬಳಿಕ ಆಕೆ ರಜೆಗಾಗಿ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾಳೆ. ಮೂಲಗಳ ಪ್ರಕಾರ, ಈಕೆ ಈಗಾಗಲೇ 2 ಬಾರಿ ಮನೆಯಿಂದ ಓಡಿಹೋಗಿ ವಾಪಸ್ ಬಂದಿ ದ್ದಾಳೆ. ಜತೆಗೆ ಬ್ಲೂವೇಲ್‌ನಂಥ ಗೇಮ್‌ಗೂ ಅಡಿಕ್ಟ್ ಆಗಿದ್ದಳು ಎಂದು ಹೇಳಲಾಗುತ್ತಿದೆ.