Advertisement

ಪೌರ ಕಾರ್ಮಿಕರಿಂದ ಪ್ರತಿಭಟನೆ

12:48 PM Mar 15, 2017 | |

ಎಚ್‌.ಡಿ.ಕೋಟೆ: ಪೌರಕಾರ್ಮಿಕರ ಕಾಲೋನಿಯಲ್ಲಿದ್ದ ಮನೆಗಳು ಹಾಗೂ ದೇವಾಲಯವನ್ನು ನೆಲಸಮಗೊಳಿಸಿ, ಜಾಗವನ್ನು ಪಟ್ಟಣದ ಪ್ರಭಾವಿ ವ್ಯಕ್ತಿಗೆ ನೀಡಿರುವ ಕ್ರಮವನ್ನು ಖಂಡಿಸಿ ಪೌರ ಕಾರ್ಮಿಕರು ಪಟ್ಟಣದ ಸ್ವತ್ಛತೆಯನ್ನು ಸ್ಥಗಿತ ಗೊಳಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ಪಟ್ಟಣದ ಸಿದ್ದಪ್ಪಾಜಿ ಬೀದಿ ಮಾರ್ಗದಲ್ಲಿ ಸುಮಾರು 70 ವರ್ಷಗಳ ಹಿಂದಿನಿಂದ ಪೌರಕಾರ್ಮಿಕರ ಕಾಲೋನಿ ಇತ್ತು. ಈ ಜಾಗ ಪುರಸಭೆಗೆ ಸೇರಿದ್ದು, ಹಲವು ವರ್ಷಗಳ ಹಿಂದೆ ಈ ಪುರಸಭೆಗೆ ಸೇರಿದ ಜಾಗವನ್ನು ಪುರಸಭೆ ಅಧ್ಯಕ್ಷರು ಪಟ್ಟಣದ ಪ್ರಭಾವಿ ವ್ಯಕ್ತಿಯಾಗಿದ್ದ ಅಪ್ಪಾಜಿಗೌಡ ಎಂಬುವವರಿಗೆ ಖಾತೆ ನಂ.212ರಲ್ಲಿ 190×70 ಅಡಿ ಖಾಲಿ ಜಾಗವನ್ನು ಮಂಜೂರು ಮಾಡಿಕೊಟ್ಟಿದ್ದರು.

ಸದರಿ ಜಾಗ ಪುರಸಭೆಗೆ ಸೇರಿದ್ದಾಗಿದ್ದು, ಆ ಜಾಗದಲ್ಲಿ ಸುಮಾರು 70 ವರ್ಷಗಳ ಹಿಂದಿನಿಂದಲೂ ಪೌರ ಕಾರ್ಮಿಕರು ವಾಸವಾಗಿದ್ದರು. ಅಲ್ಲಿ ಅವರಿಗೆ ಸೇರಿದ ದೇವಾಲಯವೂ ಇತ್ತು. ನಿವೇಶನ ಮಂಜೂರಾತಿದಾರರ ಪುತ್ರ ಸೋಮಶೇಖರ್‌ ವಕೀಲರಾಗಿದ್ದು, ಸದರಿ ಜಾಗವನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಹೋಗಿ ದ್ದರು. ಜಾಗವು ಮಂಜೂರಾತಿದಾರ ಅಪ್ಪಾಜಿ ಗೌಡರಿಗೆ ಸೇರಿದ್ದು ಎಂದು ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್‌ ಕಳೆದ ವಾರದ ಹಿಂದೆ ಜಾಗಸ ಸರ್ವೆ ನಡೆಸಿದ್ದರು.

ಭಾನುವಾರ ಸರ್ಕಾರಿ ರಜಾ ದಿನ ವಕೀಲ ಸೋಮಶೇಖರ್‌ ಏಕಾಏಕಿ ಇತರರೊಡನೆ ಆಗಮಿಸಿ ಪೌರಕಾರ್ಮಿಕರ 2 ವಾಸದ ಮನೆಗಳು ಹಾಗೂ ದೇವಾಲಯ ಕೆಡವಿಸಿ ಭಾರಿ ಗಾತ್ರದ ಮರಗಳನ್ನು ಕೆಡವಿದ್ದಾರೆ. ಸದರಿ ಜಾಗ ಸರ್ಕಾರಿ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಂತಿದ್ದು ಕೊಟ್ಯಂತರ ರೂ. ಬೆಲೆ ಬಾಳುವ ಆಸ್ತಿ ರಕ್ಷಿಸಲು ಪುರಸಭೆ ಮುಂದಾಗಿಲ್ಲ.

70 ವರ್ಷಗಳಿಂದ ವಾಸ ವಾಗಿರುವ ಪೌರ ಕಾರ್ಮಿಕರ ಮನೆಗಳನ್ನು ಕೆಡವಿದರೂ ಹೇಳುವ ಕೇಳುವವರಿಲ್ಲ. ನಮಗೆ ನ್ಯಾಯಬೇಕು, ಪೌರಕಾರ್ಮಿಕ ಕಾಲೋನಿಯಾಗಿಯೇ ಉಳಿಯಬೇಕು ಅನ್ನುವ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೌರಕಾರ್ಮಿಕರು ಪಟ್ಟಣದ ಶುಚಿತ್ವದ ಕಾರ್ಯಗಳನ್ನು ಸ್ಥಗಿತಗೊಳಿಸಿ ಪುರಸಭೆ ಮುಂದೆ ದಿಢೀರ್‌ ಪ್ರತಿಭಟನೆಗಿಳಿದರು.

Advertisement

ತುರ್ತುಕಾರ್ಯದ ನಿಮಿತ್ತ ಪುರಸಭಾ ಮುಖ್ಯಾಧಿಕಾರಿ ಕೇಂದ್ರ ಸ್ಥಾನದಲ್ಲಿರದೆ ಬೆಂಗಳೂರಿಗೆ ಹೋಗಿರುವ ವಿಚಾರ ತಿಳಿದಿದ್ದರೂ ಬೇಡಿಕೆ ಈಡೇರಿಸುವ ತನಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಪೌರಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಪೌರಕಾರ್ಮಿಕರ ಪ್ರತಿಭಟನೆಗೆ ತಾಲೂಕು ಆದಿಕರ್ನಾಟಕ ಮಹಾಸಭಾ, ಜೀವಿಕ ಸಂಘಟನೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ಇನ್ನಿತರ ಪ್ರಗತಿಪರ ಸಂಘಟನೆಗಳು ಸ್ಥಳದಲ್ಲಿಯೇ ಉಳಿದುಕೊಂಡು ಬೆಂಬಲ ನೀಡಿವೆ.

ಪೌರಕಾರ್ಮಿಕ ಮುಖಂಡರಾದ ಗಣೇಶ, ಮಾದ, ತಾಲೂಕು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಮುದ್ದಮಲ್ಲಯ್ಯ, ಜೀವಿಕ ಸಂಘಟನೆ ಉಮೇಶ್‌, ಬಸವರಾಜು, ಎಚ್‌.ಸಿ.ಲಕ್ಷ್ಮಣ್‌, ದಲಿತ ಸಂಘರ್ಷ ಸಮಿತಿಯ ಆನಗಟ್ಟಿ ದೇವರಾಜು, ಮಲಾರ ನಾಗರಾಜು, ಪುಟ್ಟಮಾದ, ಇಟ್ನ ರಾಜಣ್ಣ, ಹೈರಿಗೆ ಶಿವರಾಜು ಚಾ.ನಂಜುಂಡಮೂರ್ತಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next