Advertisement

ನೀತಿ ಸಂಹಿತೆ ಪಾಲನೆಗೆ “ನಾಗರಿಕ ಕಣ್ಗಾವಲು’

01:00 AM Feb 24, 2019 | Team Udayavani |

ಮಣಿಪಾಲ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚ ಅಕ್ರಮಕ್ಕೆ ಅಂಕುಶ ಹಾಕುವಲ್ಲಿ ಪ್ರಜ್ಞಾವಂತ ನಾಗರಿಕರ ಸಹಭಾಗಿತ್ವ ಪಡೆಯಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.
ಇದಕ್ಕಾಗಿ “ಸಿ ವಿಜಿಲ್‌’ (ಸಿಟಿಜನ್‌ ವಿಜಿಲ್‌)ಆ್ಯಪ್‌ ಸಿದ್ಧಪಡಿಸಿದ್ದು, ನಾಗರಿಕರಿಂದ ದೂರುಗಳನ್ನು ಸ್ವೀಕರಿಸುವ ದಿಶೆಯಲ್ಲಿ ಆಯೋಗದ ಚೊಚ್ಚಲ ಉಪಕ್ರಮವಿದು. ನಾಗರಿಕರು ಇದಕ್ಕೆ ಲಾಗಿನ್‌ ಆಗಿ ಅಥವಾ ಅನಾಮಧೇಯವಾಗಿಯೂ ಈ ಆ್ಯಪ್‌ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಆಯೋಗ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬಹುದು. 

Advertisement

ಗೂಗಲ್‌ ಪ್ಲೇ ಸ್ಟೋರ್‌ನಿಂದ ಸಿ ವಿಜಿಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. 
ಲಾಗಿನ್‌ಗೆ ಮೊಬೈಲ್‌ ನಂಬರ್‌, ಒಟಿಪಿ ಮತ್ತು ಇತರ ಮಾಹಿತಿ ನೀಡಬೇಕು. ಅನಾಮಧೇಯವಾಗಿ ದೂರು ನೀಡಲು ಇಚ್ಛಿಸುವವರು “ಅನಾನಿಮಸ್‌’ ಆಯ್ಕೆಯನ್ನು ಮಾಡಿ ಕೊಳ್ಳಬಹುದು. 

ಈಗಾಗಲೇ ಆ್ಯಪ್‌ ಬಳಕೆ ಬಗ್ಗೆ ಸೆಕ್ಟರ್‌ ಅಧಿಕಾರಿಗಳು, ಸ್ಕ್ವಾಡ್‌, ಚುನಾವಣಾಧಿಕಾರಿಗಳು ಮತ್ತು ಪೊಲೀಸರಿಗೆ ತರಬೇತಿ ನೀಡಲಾಗಿದೆ. ನಾಗರಿಕರಿಗೆ ಮಾಹಿತಿ ನೀಡುವ ಕಾರ್ಯ ಶೀಘ್ರವೇ ಆರಂಭವಾಗಲಿದೆ.

ಏನು ವಿಶೇಷ?
ಆ್ಯಪ್‌ನಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಫೋಟೋ ಮತ್ತು ವೀಡಿಯೋಗಳನ್ನು ಕಳುಹಿಸಬಹುದು. ಈ ದೂರುಗಳು ಜಿಲ್ಲಾ ಸಂಪರ್ಕ ಕೇಂದ್ರದ ಮೂಲಕ ಘಟನಾ ಸ್ಥಳದ ಬಳಿ ಕಾರ್ಯನಿರ್ವಹಿಸುತ್ತಿರುವ ಫ್ಲೈಯಿಂಗ್‌ ಸ್ಕ್ವಾಡ್‌ ಅಥವಾ ಇತರ ಚುನಾವಣಾಧಿಕಾರಿಗಳ ತಂಡಕ್ಕೆ ಮಾಹಿತಿ ರವಾನೆಯಾಗುತ್ತದೆ. 

ಏನು ಪ್ರಯೋಜನ?
ನ್ಯಾಯಸಮ್ಮತ ಚುನಾವಣೆಗೆ ನಾಗರಿಕರು ಸಹಕರಿಸಲು ಇದೊಂದು ಅವಕಾಶ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಖುದ್ದಾಗಿ ನೀಡಲು ಹಿಂಜರಿಯುವವರು, ಇನ್ನು ಕೆಲವು ಪ್ರಕರಣಗಳಲ್ಲಿ ದೂರು ಸಲ್ಲಿಸಿದರೂ ತತ್‌ಕ್ಷಣದ ಕ್ರಮವಾಗುವಲ್ಲಿ ವಿಳಂಬವಾಗುತ್ತದೆ ಎನ್ನುವವರು ಈ ಆ್ಯಪ್‌ ಬಳಸಬಹುದು. ಕಾರಣ ಈ ವ್ಯವಸ್ಥೆಯಲ್ಲಿ ಮಾಹಿತಿ ತತ್‌ಕ್ಷಣ ಸಂಬಂಧಪಟ್ಟವರಿಗೆ ರವಾನೆಯಾಗುತ್ತದೆ. ಫೋಟೊ, ವೀಡಿಯೊ ಸಾಕ್ಷ್ಯಗಳಿರುವುದರಿಂದ ತಪ್ಪಿತಸ್ಥರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವುದೂ ಕಷ್ಟ. ಜಿಪಿಎಸ್‌, ಐಪಿ ಮಾಹಿತಿ ಇರುವುದರಿಂದ ಅನಾಮಧೇಯರು ಸುಳ್ಳು ದೂರು ನೀಡಲಾಗದು ಹಾಗೂ ಆ ಮೂಲಕ ಚುನಾವಣಾಧಿಕಾರಿಗಳ ಗಮನ ಬೇರೆಡೆ ಸೆಳೆಯಲೂ ಆಗದು.

Advertisement

ಜಿಪಿಎಸ್‌ ಆಧಾರ
ನಾವು ಕಳುಹಿಸುವ ಮಾಹಿತಿಯು ಘಟನ ಸ್ಥಳದ ಜಿಪಿಎಸ್‌ ಲೊಕೇಶನ್‌ ಆ್ಯಪ್‌ ಮೂಲಕ ರವಾನೆಯಾಗು ವುದರಿಂದ ಅಧಿಕಾರಿಗಳು ಧಾವಿಸು ವುದಕ್ಕೂ ಸುಲಭ. ಇದು ಜಿಲ್ಲಾ ಮಟ್ಟದಲ್ಲಿ ರೂಟ್‌ ಮ್ಯಾಪ್‌ನೊಂದಿಗೆ ಸಂಯೋಜಿತಗೊಂಡಿರುತ್ತದೆ. 

ಆ್ಯಪ್‌ನಲ್ಲಿ ಲೈವ್‌ ಫೋಟೋ ಮತ್ತು ವೀಡಿಯೋಗಳನ್ನು ಕಳುಹಿಸಲು ಮಾತ್ರ ಅವಕಾಶವಿದೆ. ಘಟನಾ ಸ್ಥಳದ ಲೊಕೇಶನ್‌ಗಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾವಾಗಿನಿಂದ ಕಾರ್ಯಾರಂಭ?
ಸದ್ಯ ಆ್ಯಪ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ತರಬೇತಿಗಾಗಿ ಬಳಸಲಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ತತ್‌ಕ್ಷಣದಿಂದ ಆ್ಯಪ್‌ ಕಾರ್ಯನಿರ್ವಹಿಸಲಿದೆ. ದೂರುಗಳ ಸಮರ್ಪಕ ನಿರ್ವಹಣೆಗೆ ನಾಗರಿಕರು, ಮಾನಿಟರ್‌, ಇನ್‌ವೆಸ್ಟಿಗೇಟರ್‌, ಅಬ್ಸರ್‌ವರ್‌ ಹೀಗೆ ನಾಲ್ಕು ಲಾಗಿನ್‌ಗಳ ಮೂಲಕ ಆ್ಯಪ್‌ ಕಾರ್ಯನಿರ್ವಹಿಸಲಿದೆ.

ಬೇಕಿದೆ ಕೊಂಚ ಬದಲಾವಣೆ
ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ನಡೆಯುವ ಘಟನೆಗಳು ಅಥವಾ ಇತರ ವ್ಯಕ್ತಿಗಳಿಂದ ಬಂದ ನಂಬಲರ್ಹ ಮಾಹಿತಿ ರವಾನೆಗೆ (ಅಪ್‌ಲೋಡ್‌) ಇದರಲ್ಲಿ ವ್ಯವಸ್ಥೆ ಇಲ್ಲ. ಈ ಸಂಬಂಧ ಕಂಟ್ರೋಲ್‌ ರೂಂಗೇ ಮಾಹಿತಿ ನೀಡಬೇಕು. ಫೋಟೋ, ವೀಡಿಯೋ ಚಿತ್ರೀಕರಣ ಸಾಧ್ಯವಿರದ ಕಡೆ ಮಾಹಿತಿಯನ್ನು ಮಾತ್ರ (ಮೆಸೇಜ್‌) ಕಳುಹಿಸಲು ಅವಕಾಶ ಇರಬೇಕು. ಇಲ್ಲಿಯೂ ಸ್ಥಳದ ಗುರುತನ್ನು ಹೊಂದಿರಬೇಕು.

ಸ್ಟೇಟಸ್‌ ಟ್ರ್ಯಾಕಿಂಗ್‌
ಸಲ್ಲಿಸಿದ ದೂರುಗಳು, ರದ್ದು ಗೊಂಡ ದೂರುಗಳು, ಪ್ರಕ್ರಿಯೆ ಯಲ್ಲಿರುವ ದೂರುಗಳು ಮತ್ತು ಒಟ್ಟು ದೂರುಗಳ ಮಾಹಿತಿ ಆ್ಯಪ್‌ನಲ್ಲಿ ಲಭ್ಯ. ದೂರು ಸಲ್ಲಿಕೆ ತತ್‌ಕ್ಷಣ ಸ್ವೀಕೃತಿ ಸಂಖ್ಯೆ ಸಿಗಲಿದ್ದು, ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಲೂಬಹುದು. 

ನೀತಿ ಸಂಹಿತೆ ಜಾರಿ ಬಳಿಕ ಸಿ ವಿಜಿಲ್‌ ಆ್ಯಪ್‌ ಕಾರ್ಯಾರಂಭ ಮಾಡಲಿದೆ. ಜತೆಗೆ 1950 ಸಹಾಯವಾಣಿ, ತಾ| ಕಂಟ್ರೋಲ್‌ ರೂಂ ಮತ್ತು ನೇರ ಅಧಿಕಾರಿಗಳಿಗೂ ದೂರು ನೀಡ ಬಹುದು. ಸ್ಥಳದಿಂದ ಫೋಟೊ/ ವೀಡಿಯೊ ತೆಗೆಯಲು ಸಾಧ್ಯವಾಗ ದಾಗ ಆ್ಯಪ್‌ ಮೂಲಕ ಸಂದೇಶ ಕಳುಹಿ ಸಲು ಅವಕಾಶಕ್ಕೆ ಕೋರಲಾಗುವುದು.
-ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ, ಉಡುಪಿ 

- ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next