ಶಿರ್ವ: ಇಲ್ಲಿನ ಗ್ರಾ.ಪಂ.ನಲ್ಲಿ ಗ್ರಾಮ ಕರಣಿಕರಾಗಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾ.ಪಂ.ಗೆ ವರ್ಗಾವಣೆಗೊಂಡ ಶಿರ್ವ ಗ್ರಾಮ ಆಡಳಿತ ಅಧಿಕಾರಿ ವಿಜಯ್ ಕುಕ್ಯಾನ್ ಅವರ ನಾಗರಿಕ ಸಮ್ಮಾನ ಸಮಾರಂಭವು ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆ. 7 ರಂದು ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆ ಬಳಿಯ ಮಹಿಳಾ ಸೌಧದಲ್ಲಿ ನಡೆಯಿತು.
ಶಿರ್ವ ನಾಗರಿಕರ ಪರವಾಗಿ ವಿಜಯ್ ಕುಕ್ಯಾನ್ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿ ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಉತ್ತರಿಸಿದ ಆಡಳಿತ ಅಧಿಕಾರಿ ವಿಜಯ್ ಕುಕ್ಯಾನ್ ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಶಿರ್ವ ಗ್ರಾಮದ ನಾಗರಿಕರು,ಅಭಿಮಾನಿಗಳು,ಗ್ರಾ.ಪಂ.ಅಧ್ಯಕ್ಷರು,ಸದಸ್ಯರು,ಅಭಿವೃದ್ಧಿ ಅಧಿಕಾರಿಗಳು ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೃತಜ್ಞತೆ ಸಲ್ಲಿಸಿದರು.ಗ್ರಾಮದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ವಿಜಯ್ ಅವರನ್ನು ಗೌರವಿಸಿದರು.
ನ್ಯಾಯವಾದಿ ಮತ್ತು ನೋಟರಿ ವಿಲ್ಸನ್ ರೊಡ್ರಿಗಸ್ ಮಾತನಾಡಿ ರೆವೆನ್ಯೂ ಸಂಬಂಧಿತ ಕೆಲಸಗಳಲ್ಲಿ ಗ್ರಾಮದ ಯಾವುದೇ ಜನರಿಗೆ ತೊಂದರೆಯಾಗದಂತೆ ಕಳೆದ 9 ವರ್ಷಗಳಿಂದ ವಿಜಯ್‌ಅವರು ಸಲ್ಲಿಸಿದ ಸೇವೆ ಶ್ಲಾಘನೀಯ ವಾಗಿದ್ದು, ಇಲಾಖೆ ಕೊಟ್ಟ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಿದ್ದ ರೀತಿ ಉತ್ಕೃಷ್ಟವಾದುದು ಎಂದು ಹೇಳಿದರು.
ಗ್ರಾ.ಪಂ. ನೋಡಲ್ ಅಧಿಕಾರಿ/ಪಶುವೈದ್ಯಾಧಿಕಾರಿ ಡಾ| ಅರುಣ್ ಹೆಗ್ಡೆ ಮಾತನಾಡಿ ಚುನಾವಣೆ, ಪ್ರಾಕೃತಿಕ ವಿಕೋಪ ಮತ್ತು ಕೊರೊನಾದಂತಹ ಸೂಕ್ಷ್ಮವಿಷಯಗಳಲ್ಲಿ ಅವರು ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಹಗಲಿರುಳೆನ್ನದೆ ಸಲ್ಲಿಸಿದ ಸೇವೆ ಅಭಿನಂದನೀಯವಾಗಿದೆ ಎಂದರು. ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಟ್ಟಲ ಅಂಚನ್, ಶಿರ್ವ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ದೇವದಾಸ್ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಮಾತನಾಡಿದರು.
ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಆಚಾರ್ಯ,ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರ್ತಿ,ಗ್ರಾ.ಪಂ. ಕಾರ್ಯದರ್ಶಿ ಚಂದ್ರಮಣಿ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ,ಅನಂತ್ರಾಯ ಶೆಣೈ,ಶಿರ್ವ ಗ್ರಾ.ಪಂ. ಸದಸ್ಯರು, ಅಂಗನವಾಡಿ ,ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಸಿಬಂದಿ, ಅಭಿಮಾನಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ಸ್ವಾಗತಿಸಿ, ವಂದಿಸಿದರು.
ಇದನ್ನೂ ಓದಿ: Jammu- Srinagar ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ, ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ