Advertisement

ಸೋಮವಾರ ಹೊರಬರಲಿದೆ ಸಿಟಿ ಮತದಾರರ ಪರಿಷ್ಕೃತ ಪಟ್ಟಿ

11:59 AM Oct 29, 2017 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಹಾನಗರದ ವ್ಯಾಪ್ತಿಯ ಎಲ್ಲ 28 ವಿಧಾನಸಭೆ ಕ್ಷೇತ್ರಗಳ ಪರಿಷ್ಕೃತ ಮತದಾರ ಪಟ್ಟಿಯನ್ನು ಅಕ್ಟೋಬರ್‌ 30ರಂದು ಪ್ರಕಟಿಸಲು ಪಾಲಿಕೆ ಸಿದ್ಧವಾಗಿದೆ.

Advertisement

2018ರ ಜನವರಿ 1ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿ ಪರಿಷ್ಕರಣೆಗೊಳ್ಳಲಿದ್ದು, ಇದರಿಂದ ಜ.1ಕ್ಕೆ 18 ವರ್ಷ ತುಂಬುವವರು ಕೂಡ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪರಿಷ್ಕೃತ ಮತದಾರರ ಪಟ್ಟಿ ಪ್ರಕಟವಾದ ದಿನದಿಂದ ಒಂದು ತಿಂಗಳು, ಅಂದರೆ ಅ.30ರಿಂದ ನ.30ರವರೆಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಮತದರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಅಥವಾ ಕೈಬಿಡುವ ಮತ್ತು ಬದಲಾವಣೆ ಮಾಡುವುದು ಸೇರಿದಂತೆ ಮತ್ತಿತರ ಮಾರ್ಪಾಡುಗಳಿಗೆ ಅವಕಾಶ ಇದೆ. 2018ರ ಜ.12ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ಕುಮಾರ್‌, ಬಿಬಿಎಂಪಿ ಹೆಚ್ಚುವರಿ ಆಯುಕ್ತೆ (ಆಡಳಿತ) ಸಾವಿತ್ರಿ, ಸಹಾಯಕ ಆಯುಕ್ತ (ಚುನಾವಣೆ) ನಟೇಶ್‌ ಇದ್ದರು. 

ಕಾಲೇಜುಗಳಲ್ಲಿ ಅಭಿಯಾನ: “ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಯುವ ಮತದಾರರನ್ನು ಪಟ್ಟಿಗೆ ಸೇರಿಸುವ ಉದ್ದೇಶದಿಂದ ಕಾಲೇಜು, ಕೈಗಾರಿಕಾ ಪ್ರದೇಶ ಮತ್ತಿತರ ಕಡೆಗಳಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತಿದೆ. ನ.15ರಿಂದ 30ರವರೆಗೆ ವಿಶೇಷ ಆಂದೋಲನದಡಿ ಮತದಾರರ ಪಟ್ಟಿ ಶುಚಿಗೊಳಿಸುವ ಕಾರ್ಯ ನಡೆಯಲಿದ್ದು, ಅರ್ಹರ ನೋಂದಣಿಗೆ ಅನುಕೂಲವಾಗುವಂತೆ ಬೂತ್‌ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ, ಮತದಾರರ ವಿವರ ಪಡೆಯಲಿದ್ದಾರೆ,’ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

ಕಳೆದ ಕಳೆದ ಎರಡು ತಿಂಗಳಾದ್ಯಂತ ನಡೆಸಿದ ಪರಿಷ್ಕರಣೆ ಅಭಿಯಾನದಲ್ಲಿ 88,308 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬೆನ್ನಲ್ಲೇ ವಿಶೇಷ ಅಭಿಯಾನದಲ್ಲಿ 1.87 ಲಕ್ಷ ಮತದಾರರೂ ಸೇರ್ಪಡೆಗೊಂಡಿದ್ದಾರೆ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು. ಮೃತಪಟ್ಟ, ವರ್ಗಾವಣೆಗೊಂಡಿರುವುದೂ ಸೇರಿ ವಿವಿಧ ಕಾರಣಗಳಿಂದ 88,308 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಒಟ್ಟಾರೆ ಮೂರು ವರ್ಷಗಳ ಮಾಹಿತಿ ಕಲೆಹಾಕಿ, ಸ್ಥಳೀಯರನ್ನು ಸಂಪರ್ಕಿಸಿ, ಹಲವು ಬಾರಿ ಕಾಲಾವಕಾಶ ನೀಡಿ, ಅಂತಿಮವಾಗಿ ಪಟ್ಟಿಯಿಂದ ಈ ಮತದಾರರನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು 32,105 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಬಿಎಂಪಿ ಕೇಂದ್ರಭಾಗದಲ್ಲಿ ಅತಿ ಕಡಿಮೆ 15,789 ಮತದಾರರನ್ನು ಕೈಬಿಡಲಾಗಿದೆ ಎಂದರು. 

ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರು
2017ರ ಜನವರಿ 1ರ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 44.61 ಲಕ್ಷ ಪುರುಷ ಮತ್ತು 40.35 ಲಕ್ಷ ಮಹಿಳೆಯರು ಸೇರಿ ಒಟ್ಟು 84,97,192 ಮತದಾರರಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಅನುಪಾತ ಶೇ.67.5ರಷ್ಟಿದೆ. ಬೆಂಗಳೂರು ನಗರ ಜಿಲ್ಲೆಯು ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ಇಲ್ಲಿ 15.71 ಲಕ್ಷ ಪುರುಷರು ಮತ್ತು 13.74 ಲಕ್ಷ ಮಹಿಳೆಯರು ಸೇರಿದಂತೆ 29,46,191 ಮತದಾರರಿದ್ದಾರೆ.

ಬಿಬಿಎಂಪಿ ಉತ್ತರದಲ್ಲಿ 10.09 ಲಕ್ಷ ಪುರುಷರು ಮತ್ತು 9.39 ಲಕ್ಷ ಸೇರಿ 19.48 ಲಕ್ಷ ಮತದಾರರು, ದಕ್ಷಿಣದಲ್ಲಿ 10.13 ಲಕ್ಷ ಪುರುಷ ಮತ್ತು 9.15 ಲಕ್ಷ ಮಹಿಳೆಯರು ಒಳಗೊಂಡು 19.28 ಲಕ್ಷ ಹಾಗೂ ಬಿಬಿಎಂಪಿ ಕೇಂದ್ರ ಭಾಗದಲ್ಲಿ 8.67 ಲಕ್ಷ ಪುರುಷ ಮತ್ತು 8.06 ಲಕ್ಷ ಮಹಿಳೆಯರು ಸೇರಿ 16.73 ಲಕ್ಷ ಮತದಾರರು ಇದ್ದಾರೆ. 

ಹೆಸರು ಸೇರ್ಪಡೆ, ಮಾರ್ಪಾಡು ಎಲ್ಲಿ?
ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಎಲ್ಲ 198 ವಾರ್ಡ್‌ಗಳ ಕಚೇರಿ, 115 “ಬೆಂಗಳೂರು ಒನ್‌’ ಕೇಂದ್ರಗಳು, ಬಿಬಿಎಂಪಿ ಕಚೇರಿ ವ್ಯಾಪ್ತಿಯ ಎಲ್ಲ ಸಕಾಲ ಕೇಂದ್ರಗಳು ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಮತದಾರರ ಹೆಸರು ಸೇರ್ಪಡೆ, ಮಾರ್ಪಾಡು ಮಾಡಲು ಅವಕಾಶವಿದ್ದು, www.ceokarnataka.kar.nic.in ಮೂಲಕವೂ ಸಾರ್ವಜನಿಕರು ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಸೇರ್ಪಡೆ ಮತ್ತು ಕೈಬಿಟ್ಟ ಮತದಾರರ ವಿವರ
* ವಲಯ    ಸೇರ್ಪಡೆ    ಕೈಬಿಟ್ಟದ್ದು
-ಕೇಂದ್ರ    32,147    15,789
-ಉತ್ತರ    41,091    21,291
-ದಕ್ಷಿಣ    38,441    19,123
-ನಗರ (ಆನೇಕಲ್‌ ಸೇರಿ)    75,336    32,105
-ಒಟ್ಟಾರೆ    1,87,015    88,308

Advertisement

Udayavani is now on Telegram. Click here to join our channel and stay updated with the latest news.

Next