ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ರಸ್ತೆ ಸುರಕ್ಷತಾ ಆಡಿಟ್ ತರಬೇತಿ, ಇಲಾಖೆ ಬಲವರ್ಧನೆಗೆ ಸಂಬಂಧಿಸಿದಂತೆ ನಗರ ಸಂಚಾರ ವಿಭಾಗ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ.
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ನಗರ ಸಂಚಾರ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆಗೆ ಸಂಚಾರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಹಂಚಿಕೊಳ್ಳುವುದು, ಈ ದತ್ತಾಂಶಗಳ ಆಧರಿಸಿ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ನಗರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಲು ಅಗತ್ಯ ಸಲಹೆಗಳು ನೀಡುವುದು ಹಾಗೂ ರಸ್ತೆ ಸುರಕ್ಷತಾ ಆಡಿಟ್ ತರಬೇತಿ ಮತ್ತು ಇಲಾಖೆಯ ಬಲವರ್ಧನೆಗೆ ಈ ಒಪ್ಪಂದ ಅನುಕೂಲವಾಗಲಿದೆ.
ಸುರಕ್ಷತಾ ಕ್ರಮಗಳಿಗೆ ಸಹಕಾರಿ: ಈ ಕುರಿತು ಮಾತನಾಡಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ಸಂಚಾರ ವಿಭಾಗದಲ್ಲಿ ಪ್ರತಿ ತಿಂಗಳು 30 ಪೆಟಾಬೈಟ್ಸ್ ನಷ್ಟು ದತ್ತಾಂಶ ಹೆಚ್ಚಾಗುತ್ತಿದೆ. ಈ ದತ್ತಾಂಶವನ್ನು ಭಾರತೀಯ ವಿಜ್ಞಾನ ಸಂಸ್ಥೆಯು ವಿಶ್ಲೇಷಿಸಿ ನಗರದ ಸಂಚಾರ ದಟ್ಟಣೆಗೆ ಪರಿಹಾರ ಒದಗಿಸುವುದರ ಜತೆಗೆ ಸುರಕ್ಷತಾ ಕ್ರಮಗಳ ಬಗ್ಗೆಯ ಸಹಕರಿಸಲಿದೆ. ಜತೆಗೆ ಐಐಎಸ್‌ಸಿ ಸಹಯೋಗದಲ್ಲಿ ಸಂಚಾರ ಸಿಬ್ಬಂದಿಗೆ ಅಗತ್ಯ ತರಬೇತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಹೇಳಿದರು.
ಸುಗಮ ಸಂಚಾರಕ್ಕೆ ಅಗತ್ಯ ಯೋಜನೆ: ಐಐಎಸ್ ಸಿಯ ಮೂಲ ಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದ ಪ್ರೊ.ಅಬ್ದುಲ್ ರವೂಪ್ ಪಿಂಜಾರಿ ಮಾತನಾಡಿ, ಸಂಚಾರ ಪೊಲೀಸರು ನೀಡುವ ದತ್ತಾಂಶಗಳನ್ನು ವಿಶ್ಲೇಷಿಸಿ, ನಗರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಯೋಜನೆಗಳನ್ನು ತಮ್ಮ ಸಂಸ್ಥೆ ನೀಡಲು ಸಹಕರಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಐಐಎಸ್‌ಸಿಯ ಪ್ರೊ.ವಿಜಯ್‌ಕೋವಳ್ಳಿ, ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ಕುಮಾರ್ ಜೈನ್, ಐಐಎಸ್‌ಸಿಯ ಡಾ.ರಘುಕೃಷ್ಣಪುರಂ, ರಕ್ಷಿತ್ ರಮೇಶ್ ಇತರರಿದ್ದರು.