ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಇದುವರೆಗೆ ಅಂದಾಜು 3.16 ಕೋಟಿ ರೂ. ವೆಚ್ಚದ ಆರು ಯೋಜನೆಗಳು ಪೂರ್ಣಗೊಂಡಿದ್ದು, ಇನ್ನಾರು ತಿಂಗಳಲ್ಲಿ ಅಂದಾಜು 94.3 ಕೋಟಿ ರೂ. ವೆಚ್ಚದ ಆರು ಯೋಜನೆಗಳು ಪೂರ್ಣಗೊಳ್ಳಲಿವೆ. ಒಟ್ಟಾರೆ 54 ಯೋಜನೆಗಳು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ತಿಳಿಸಿದರು.
ಈಗ ಪೂರ್ಣಗೊಂಡಿದ್ದಿಷ್ಟು: ವಿವಿಧ ಕಾರಣಗಳಿಗಾಗಿ ಸ್ಮಾರ್ಟ್‌ಸಿಟಿ ಯೋಜನೆಗಳ ಅನುಷ್ಠಾನ ವಿಳಂಬವಾಗಿದ್ದು ನಿಜ. ಇದೀಗ ಬಹುತೇಕ ಯೋಜನೆಗಳು ತೀವ್ರತೆ ಪಡೆದುಕೊಂಡಿವೆ. ಈಗಾಗಲೇ 3.16 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಎಸ್‌ಪಿವಿ ವೆಬ್‌ಸೈಟ್, ಇ-ಶೌಚಾಲಯ, ರಾಜನಾಲಾ ಸ್ವಚ್ಛತೆ, ನ್ಯಾಪ್ಕಿನ್ ವೆಂಡಿಂಗ್ ಯಂತ್ರ ಅಳವಡಿಕೆ, ಪಾಲಿಕೆ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಅಳವಡಿಕೆ ಯೋಜನೆಗಳು ಪೂರ್ಣಗೊಂಡಿವೆ ಎಂದು ವಿವರಿಸಿದರು.
ಅವಳಿ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಬಹುತೇಕ ಪೂರ್ಣ ಹಂತಕ್ಕೆ ಬಂದಿದ್ದು, ಕೆಲವೊಂದು ಯಂತ್ರೋಪಕರಣಗಳು ಬಂದಿವೆ. ಇನ್ನಷ್ಟು ಯಂತ್ರಗಳು ಬರಬೇಕಾಗಿದೆ. ಕೆಲವೇ ತಿಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾನುಷ್ಠಾನಗೊಳ್ಳಲಿವೆ ಎಂದು ಹೇಳಿದರು.
1ರಂದು ಮಂಡಳಿ ಸಭೆ: ಜು. 1ರಂದು ಬೆಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಯೋಜನೆಗಳ ಕಾಮಗಾರಿ ತ್ವರಿತಕ್ಕೆ ಇನ್ನಷ್ಟು ಕ್ರಮಗಳ ಕುರಿತಾಗಿ ಚರ್ಚಿಸಲಾಗುತ್ತದೆ ಎಂದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಘೋಷಣೆಯಾಗಿ ನಾಲ್ಕು ವರ್ಷ ಮುಗಿದಿದೆ. ಹುಬ್ಬಳ್ಳಿ-ಧಾರವಾಡ ಎರಡನೇ ಹಂತದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಸೇರ್ಪಡೆಗೊಂಡಿತ್ತು. 2017ರಲ್ಲಿ ಎಸ್‌ಪಿವಿ ಅಸ್ತಿತ್ವಕ್ಕೆ ಬಂದಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳ 1000 ಕೋಟಿ ರೂ. ಅನುದಾನದಲ್ಲಿ ಒಟ್ಟು 54 ಯೋಜನೆಗಳನ್ನು ಮೊದಲ ಹಂತದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
Related Articles
Advertisement
ಸುದ್ದಿಗೋಷ್ಠಿಯಲ್ಲಿ ಹು-ಧಾ ಸ್ಮಾರ್ಟ್ ಸಿಟಿ ಯೋಜನೆ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಕೌಲಗಿ, ಮುಖ್ಯ ಎಂಜಿನಿಯರ್ ಎಂ.ಎನ್. ನಾರಾಯಣ, ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ಇನ್ನಿತರರಿದ್ದರು.
ಅವಳಿ ನಗರದಲ್ಲಿ ಕಾಮಗಾರಿಗಳ ಸ್ಥಿತಿ-ಗತಿ:
ಒಟ್ಟು 54 ಯೋಜನೆಗಳಲ್ಲಿ ಇದುವರೆಗೆ 3.16 ಕೋಟಿ ರೂ. ವೆಚ್ಚದ 6 ಯೋಜನೆಗಳು ಪೂರ್ಣಗೊಂಡಿವೆ. 258.44 ಕೋಟಿ ರೂ. ವೆಚ್ಚದ 16 ಯೋಜನೆಗಳ ಟೆಂಡರ್ ಪ್ರಕ್ರಿಯೆ ಮುಗಿದ ಕಾರ್ಯಾದೇಶ ನೀಡಲಾಗಿದೆ. 250.44 ಕೋಟಿ ರೂ. ವೆಚ್ಚದ 15 ಯೋಜನೆಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. 94.3 ಕೋಟಿ ರೂ. ವೆಚ್ಚದ 6 ಯೋಜನೆಗಳ ಡಿಪಿಆರ್ ಸಿದ್ಧಗೊಂಡಿದ್ದು, ಒಂದುವರೆ ತಿಂಗಳಲ್ಲಿ ಟೆಂಡರ್ ಕರೆಯಲಾಗುತ್ತದೆ. 309.35 ಕೋಟಿ ರೂ. ವೆಚ್ಚದ 7 ಯೋಜನೆಗಳ ಫಿಜಿಬಿಲಿಟಿ ವರದಿ ಸಿದ್ಧಗೊಂಡಿದ್ದು, ಒಂದುವರೆ ತಿಂಗಳಲ್ಲಿ ಡಿಪಿಆರ್ ಸಿದ್ಧಗೊಳ್ಳಲಿದೆ ಎಂದು ಶಕೀಲ್ ಅಹ್ಮದ್ ವಿವರಿಸಿದರು.
ಒಂದೂವರೆ ತಿಂಗಳಲ್ಲಿ ಟೆಂಡರ್:
ಹೊಸೂರು ಕ್ರಾಸ್‌ನಲ್ಲಿರುವ ಡಾ| ಗಂಗಲ್ ಬಿಲ್ಡಿಂಗ್‌ನ 35 ಗುಂಟೆ ಜಾಗದಲ್ಲಿ ವಾಹನ ನಿಲುಗಡೆ, ಉಚಿತವಾಗಿ ಸಭಾಂಗಣ, ನವೋದ್ಯಮಿಗಳಿಗೆ ಉತ್ತೇಜನಕ್ಕೆ ಉಚಿತ ಸ್ಥಳಾವಕಾಶ, ಇಂಟರ್‌ನೆಟ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ತರಬೇತಿ ಕೇಂದ್ರಗಳಿಗೆ ಅವಕಾಶ, ರೆಸ್ಟೋರೆಂಟ್ ವ್ಯವಸ್ಥೆಯ ಯೋಜನೆ ರೂಪಿಸಲಾಗಿದೆ. ಒಂದೂವರೆ ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.
200 ಜನರ ಸ್ಥಳಾಂತರ ಅಗತ್ಯ:
ಉಣಕಲ್ಲನಿಂದ ಗಬ್ಬೂರುವರೆಗಿನ ಸುಮಾರು 10.5 ಕಿಮೀ ಉದ್ದದ ನಾಲಾ ಅಭಿವೃದ್ಧಿ ನಿಟ್ಟಿನಲ್ಲಿ 200 ಜನರನ್ನು ಸ್ಥಳಾಂತರಿಸುವ ಅವಶ್ಯಕತೆ ಇದೆ. ನಾಲಾದ ಅಗಲ 12-25 ಮೀಟರ್ ಅಗತ್ಯವಾಗಿದ್ದು, ಕೆಲವೊಂದು ಕಡೆ ಈ ಪ್ರಮಾಣದಲ್ಲಿ ಇಲ್ಲದ್ದರಿಂದ 30ರಿಂದ 40 ಕಟ್ಟಡಗಳ ತೆರವು ಹಾಗೂ ಸುಮಾರು 200 ಜನರ ಸ್ಥಳಾಂತರ ಮಾಡಬೇಕಾಗುತ್ತದೆ. ನಾಲಾ ಎರಡು ಬದಿಯಲ್ಲಿ ಪಾದಚಾರಿ-ಸೈಕಲ್ ಮಾರ್ಗ, ತಿಂಡಿ-ತಿನಿಸುಗಳ ಮಾರಾಟಕ್ಕೆ ಸ್ಥಳಾವಕಾಶ, ಪಾರ್ಕ್, ಅವಶ್ಯವಿರುವ ಕಡೆ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಕೀಲ್ ಅಹ್ಮದ್ ತಿಳಿಸಿದರು.
3,223 ಜನರಿಂದ ಇ-ಶೌಚಾಲಯ ದುರ್ಬಳಕೆ:
ಸ್ಮಾರ್ಟ್‌ಸಿಟಿ ಯೋಜನೆಯಡಿ ಅವಳಿ ನಗರದ ವಿವಿಧೆಡೆ ಇ-ಶೌಚಾಲಯ ನಿರ್ಮಿಸಲಾಗಿದೆ. ಇದುವರೆಗೆ ಸುಮಾರು 17 ಸಾವಿರಕ್ಕೂ ಅಧಿಕ ಜನರು ಇವುಗಳನ್ನು ಬಳಕೆ ಮಾಡಿದ್ದು, ಆ ಪೈಕಿ 3,223 ಜನರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇ-ಶೌಚಾಲಯಕ್ಕೆ ನಾಣ್ಯಗಳನ್ನು ಬಳಸಬೇಕಾಗಿದೆ. ಆದರೆ ಕೆಲವರು ನಾಣ್ಯದ ಬದಲು ಕಬ್ಬಿಣದ ವೈಸರ್‌ಗಳನ್ನು ಬಳಕೆ ಮಾಡಿದ್ದಾರೆ. ಇಂದಿರಾಗಾಂಧಿ ಗಾಜಿನಮನೆ ಆವರಣದ ಇ-ಶೌಚಾಲಯದಲ್ಲಿ ಒಬ್ಬರು ನಾಣ್ಯ ಹಾಕಿ ನಾಲ್ಕೈದು ಜನ ಬಳಕೆ ಮಾಡಿಕೊಂಡಿದ್ದು ಸಹ ಪತ್ತೆಯಾಗಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದರು. ನಾಗರಿಕರು ಯೋಜನೆ ಬಳಕೆಗೆ ಮುಂದಾಗಬೇಕೆ ವಿನಃ ದುರ್ಬಳಕೆಗೆ ಮುಂದಾಗುವುದು ಸರಿಯಲ್ಲ ಎಂದರು.