Advertisement

ಮೀನು ತ್ಯಾಜ್ಯ ನೀರಿನ ವಾಸನೆಯಿಂದ ನಗರಕ್ಕೆ  ಮುಕ್ತಿ ಸಿಗಲಿ

07:54 AM Mar 17, 2019 | |

ಯಾವುದೇ ತ್ಯಾಜ್ಯವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯುವಾಗ ಸೂಕ್ತ ಎಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಏಕೆಂದರೆ, ತ್ಯಾಜ್ಯ ಕೊಂಡೊಯ್ಯುವಾಗ ಅದರಿಂದ ಹೊರ ಹೋಗುವ ವಾಸನೆಯಿಂದಾಗಿ ದೇಹಾರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಮಂಗಳೂರಿನಲ್ಲಿ ಮೀನಿನ ತ್ಯಾಜ್ಯ ನೀರನ್ನು ಕೊಂಡೊಯ್ಯುವಾಗ ಇಂತಹ ನಿಯಮಗಳನ್ನು ಗಾಳಿಗೆ ತೂರಿ ಬಿಡಲಾಗುತ್ತಿದೆ ಎಂಬುದು ಅಷ್ಟೇ ಸತ್ಯ.

Advertisement

ನಗರದ ದಕ್ಕೆಯಿಂದ ತೊಕ್ಕೊಟ್ಟು ಕಡೆ ತೆರಳುವ ಮೀನು ತುಂಬಿದ ಲಾರಿಯಿಂದ ತ್ಯಾಜ್ಯ ನೀರೆಲ್ಲ ರಸ್ತೆ ಪಾಲಾಗುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಜನ, ಈ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಮೂಗು ಮುಚ್ಚಿಕೊಂಡೇ ತೆರಳಬೇಕಾದ ಪರಿಸ್ಥಿತಿ ಇದೆ.

ದಕ್ಕೆಯಿಂದ ಪಾಂಡೇಶ್ವರ, ಎಮ್ಮೆಕೆರೆ, ಮಂಕಿಸ್ಟಾಂಡ್‌, ಮೊರ್ಗನ್ಸ್‌ ಗೇಟ್‌, ಮಹಾಕಾಳಿಪಡ್ಪು, ಜೆಪ್ಪಿನಮೊಗರು ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರಿ ತೊಕ್ಕೊಟ್ಟು ಕಡೆಗೆ ಈ ಲಾರಿ ಮತ್ತು ಟೆಂಪೋಗಳು ಹೋಗುತ್ತವೆ. ಹೀಗೆ ಮೀನಿನ ತ್ಯಾಜ್ಯ ಕೊಂಡೊಯ್ಯುವಾಗ ಇಡೀ ತ್ಯಾಜ್ಯ ನೀರು ರಸ್ತೆಗೆ ಸಿಂಪಡಣೆಯಾಗುತ್ತದೆ. ಲಾರಿ ಹೋಗುವಾಗ ಹಿಂದಿನಿಂದ ವಾಹನ ಸವಾರರು ಪ್ರಯಾಣಿಸುವಂತೆಯೇ ಇಲ್ಲ; ತಪ್ಪಿ ಪ್ರಯಾಣಿಸಿದರೂ ವಾಹನ ಮಾತ್ರವಲ್ಲದೆ, ಧರಿಸಿದ ಬಟ್ಟೆಯ ಮೇಲೂ ಮೀನಿನ ನೀರು ಸಿಂಪಡಣೆಯಾಗುವುದು ಖಚಿತ.

ಹೀಗೆ ರಸ್ತೆಗೆ ಬೀಳುವ ನೀರು ಅತೀವ ವಾಸನೆಯಿಂದ ಕೂಡಿರುವುದಲ್ಲದೆ, ಶುದ್ಧ ಗಾಳಿಯ ಜತೆ ಬೆರೆತು ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಮೀನಿನ ವಾಸನೆಯನ್ನೇ ಇಲ್ಲಿನ ಜನತೆ ಉಸಿರಾಡಬೇಕಾಗಿದೆ.

ಇದು ಇಂದು ನಿನ್ನೆಯ ಕಥೆಯಲ್ಲ; ಹಲವಾರು ಸಮಯಗಳಿಂದ ಹೀಗೇ ಪರಿಸ್ಥಿತಿ ಇದ್ದರೂ, ಸಂಬಂಧಪಟ್ಟವರು ಇದರಿಂದ ಮುಕ್ತಿ ಕೊಡಲು ಮುಂದಾಗುತ್ತಿಲ್ಲ ಎನ್ನುತ್ತಾರೆ ಸುತ್ತಮುತ್ತಲಿನ ನಿವಾಸಿಗಳು. ಹೀಗಾಗಿ ಇನ್ನು ಮುಂದಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಪ್ರಕೃತಿದತ್ತ ಸ್ವಚ್ಛ ಗಾಳಿ ಸೇವನೆಗೆ ಅವಕಾಶ ಮಾಡಿಕೊಡಬೇಕಿದೆ.

Advertisement

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next