ಕೋಲಾರ: ನಗರದಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಸಂಚರಿಸಿ ರಸ್ತೆ ಬದಿಯಲ್ಲಿ ಕಸದ ರಾಶಿ, ಪಾದಚಾರಿ ರಸ್ತೆಗಳ ಒತ್ತುವರಿ ಮಾಡಿರುವುದನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.
ನಗರದ ಪ್ರಮುಖ ರಸ್ತೆಗಳಾದ ಅಮ್ಮವಾರಿ ಪೇಟೆ ವೃತ್ತದಿಂದ ಕಾಳಮ್ಮ ಗುಡಿರಸ್ತೆ ಹೊಸ ಬಸ್ ನಿಲ್ದಾಣ, ಅಂತರಗಂಗೆ ರಸ್ತೆ, ಕಾರಂಜಿ ಕಟ್ಟೆ ರಸ್ತೆ ಮಾರ್ಗ, ಬಸ್ ನಿಲ್ದಾಣದ ಹಿಂಭಾಗದ ರಸ್ತೆ, ಸುತ್ತಮುತ್ತ ಪ್ರದೇಶಗಳನ್ನು ಬೆಳಗ್ಗೆ6ರಿಂದ9 ಗಂಟೆ ವರೆಗೆ ಸಂಚರಿಸಿ ಅವ್ಯವಸ್ಥೆಗಳನ್ನು ಕಂಡು ಕೆಂಡಮಂಡಲವಾದರು.
ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡಿ: ಕಾನೂನು ಬಾಹಿರವಾಗಿ ವೈನ್‌ಶಾಪ್‌ಗ್ಳು ಬಾಗಿಲು ತೆರೆದು ವಹಿವಾಟು ನಡೆಸುತ್ತಿದ್ದಾರೆ. ಡೀಸಿ ಬರುತ್ತಿರುವ ಮಾಹಿತಿ ತಿಳಿದು ಬಾಗಿಲು ಹಾಕಿದ್ದಾರೆ ಎಂದು ನಗರಸಭೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿ ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡಿ ಅಧಿಕಾರಿಗಳಿಗೆ ಸೂಚಿಸಿದರು.
ಕ್ರಮ ಕೈಗೊಳ್ಳಲು ಸೂಚನೆ: ಪಾದಚಾರಿ ರಸ್ತೆಗಳನ್ನು ಒತ್ತುವರಿ ಮಾಡಿದ್ದ ಅಂಗಡಿಗಳ ಮಾಲೀಕರಿಗೆ ತೆರವು ಮಾಡಲು ಸೂಚಿಸಿ ದಂಡ ಹಾಕುವುದಾಗಿ ಎಚ್ಚರಿಸಿದರು. ಬಸ್ ನಿಲ್ದಾಣದ ಮುಂಭಾಗದ ಚರಂಡಿಗಳ ಮೇಲೆ ನಿರ್ಮಿಸಿದ್ದ ಕಟ್ಟಡಗಳನ್ನು ಕೂಡಲೇ ತೆರವು ಮಾಡಿಸಿ ಪಲ್ಲವಿ ವೃತ್ತದಲ್ಲಿ ಕಸ ತುಂಬಿರುವ ಬಗ್ಗೆ ಕ್ರಮ ಕೈಗೊಳ್ಳಲು ಪೌರಾಯುಕ್ತ ಶ್ರೀಕಾಂತ್‌ಗೆ ಸೂಚಿಸಿದರು.
ಕಸ ವಿಂಗಡಿಸಿ ವಿಲೇವಾರಿ ಮಾಡಿ: ನಗರಸಭೆ ಜಾಗ ಒತ್ತುವರಿ ಮಾಡಿದ್ದವರ ಮೇಲೆ ನೋಟಿಸ್ ಜಾರಿ ಮಾಡಿ ರಸ್ತೆ ಬದಿಯಲ್ಲಿನ ಅಕ್ರಮ ಪೆಟ್ಟಿಗೆ ಅಂಗಡಿಯನ್ನು ತೆರವು ಮಾಡಿಸಿ ಅಂತರಗಂಗೆ ರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ವಿಳಂಬ ಬಗ್ಗೆ ನಗರಾಭಿವೃದ್ಧಿ ಕೋಶ ನಿರ್ದೇಶಕ ರಂಗಸ್ವಾಮಿಅವರಿಗೆ ತ್ವರಿತವಾಗಿ ಕಾಮಗಾರಿಗಳನ್ನು ಮುಗಿಸಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನುನಿವಾರಿಸಬೇಕು.ರಸ್ತೆಬದಿಗಳಲ್ಲಿನ ಕಸದ ರಾಶಿಗಳಿಗೆ ಬೆಂಕಿ ಹಚ್ಚಬೇಡಿ, ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ಅಂದಿನ ಕಸವನ್ನು ವಿಲೇವಾರಿ ಮಾಡಬೇಕು ಎಂದರು.
ನಗರದ ಪ್ರತಿ ವಾರ್ಡ್‌ಗಳಿಗೂ ಅನಿರೀಕ್ಷಿತವಾಗಿ ಭೇಟಿ ನೀಡುತ್ತೇನೆ. ಸಂಬಂಧಪಟ್ಟ ವಾರ್ಡ್‌ನ ಸದಸ್ಯರು ಸಹ ತಮ್ಮ ವಾರ್ಡ್ ಸ್ವಚ್ಛತಾ ಮಾಡಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಇರುತ್ತದೆ. ಆಯಾ ವಾರ್ಡ್‌ನ ನಗರಸಭೆ ಮೇಸ್ತ್ರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಶ್ರೀಕಾಂತ್, ಕಂದಾಯ ನಿರೀಕ್ಷಕ ತ್ಯಾಗರಾಜ್, ಸಿಬ್ಬಂದಿ ನಾಗರಾಜ್, ನಗರಸಭೆ ಸದಸ್ಯರಾದ ಜವೇರಿಲಾಲ್, ಮಂಜುನಾಥ್ ಮುಂತಾದವರು ಹಾಜರಿದ್ದರು.