Advertisement

Police Commissioner B. Dayananda: ನೇತ್ರದಾನ; ಅಧಿಕಾರಿಗಳಿಗೆ ಮಾದರಿಯಾದ ಆಯುಕ್ತ

02:21 PM Jan 02, 2024 | Team Udayavani |

ಬೆಂಗಳೂರು: ನಗರ ಪೊಲೀಸ್‌ ಆಯಕ್ತ ಬಿ.ದಯಾನಂದ ಅವರು ನೇತ್ರದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಪೊಲೀಸ್‌ ಇಲಾಖೆಯ ಇತರೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ನಾರಾಯಣ ನೇತ್ರಾಲಯದ ಕಣ್ಣಿನ ಫೌಂಡೇಷನ್‌ ಟ್ರಸ್ಟ್‌ಗೆ ತಮ್ಮ ನೇತ್ರದಾನ ಮಾಡಿದ್ದು, ಅಂಧತ್ವ ತೊಡೆದು ಹಾಕುವ ಉದ್ದೇಶದಿಂದ ನೇತ್ರದಾನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ನಾರಾಯಣ ನೇತ್ರಾಲಯದ ಕಣ್ಣಿನ ಫೌಂಡೇಶನ್‌ನ ಟ್ರಸ್ಟಿ ಡಾ. ನರೇನ್‌ ಶೆಟ್ಟಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರಿಗೆ ನೇತ್ರದಾನದ ಪ್ರಮಾಣ ಪತ್ರ ವಿತರಿಸಿದ್ದಾರೆ. ಈ ಫೋಟೋವನ್ನು ದಯಾ ನಂದ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು, ನಗರದ ಅನೇಕ ಅಧಿಕಾರಿಗಳು ತಮ್ಮಂತೆಯೇ ಕಣ್ಣುಗಳನ್ನು ದಾನ ಮಾಡಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ.

ಅನಾಥಾಶ್ರಮಗಳಿಗೆ ಭೇಟಿ ಕೊಟ್ಟ ಅಧಿಕಾರಿ: ಸಾಮಾನ್ಯವಾಗಿ ಹೊಸವರ್ಷಾಚರಣೆ ಸಂದರ್ಭ ದಲ್ಲಿ ನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾ ಗುವ ಹಿರಿಯ-ಕಿರಿಯ ಅಧಿಕಾರಿಗಳು ಹೂಗುಚ್ಚ, ಸಿಹಿ ತಿನಿಸುಗಳು, ಉಡುಗೊರೆಗಳನ್ನು ಕೊಂಡೊ ಯ್ಯುವುದು ಸಾಮಾನ್ಯ. ಆದರೆ, ಈ ವರ್ಷ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಈ ರೀತಿಯ ಶುಭಕೋರವ ಪದ್ಧತಿಗೆ ಬ್ರೇಕ್‌ ಹಾಕಿದ್ದಾರೆ.

ಈ ರೀತಿಯ ಅನಗತ್ಯ ವಸ್ತುಗಳನ್ನು ತರಲು ವ್ಯಯಿಸುವ ಹಣವನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ವಿನಿಯೋಗಿಸಿದರೆ ಅವರಿಗೆ ನೆರವಾಗಲಿದೆ ಎಂಬ ಸಂದೇಶ ನೀಡಿದ್ದರು. ಈ ಬೆನ್ನಲ್ಲೇ ನಗರದಲ್ಲಿರುವ ಬುದ್ದಿಮಾಂಧ್ಯ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ ಹೊಸ ವರ್ಷಾಚರಣೆ ಆಚರಿಸಿದ ಆಯುಕ್ತರು, ಮಕ್ಕಳಿಗೆ ಹಣ್ಣು ವಿತರಿಸಿ, ಅವರೊಂದಿಗೆ ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅದರ ಫೋಟೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪೊಲೀಸ್‌ ಸೇವೆ ದೊರೆಯಲಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಿಭಾಗದ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐ ಸೇರಿ ಎಲ್ಲಾ ಹಂತದ ಅಧಿಕಾರಿ-ಸಿಬ್ಬಂದಿ ಸಮೀಪದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಹಣ್ಣು ವಿತರಿಸಿದರು.

Advertisement

ಆ್ಯಸಿಡ್‌ ಸಂತ್ರಸ್ತರ ಜತೆ ನ್ಯೂಇಯರ್‌ : ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಪೊಲೀಸ್‌ ಕಮ್ಯಾಂಡ್‌ ಸೆಂಟರ್‌ ಹಾಗೂ ಸಿಎಆರ್‌ ಕಾರ್ಯಾಲಯಕ್ಕೆ ಆ್ಯಸಿಡ್‌ ದಾಳಿಗೊಳಗಾದ ಸಂತ್ರಸ್ತರು ಹಾಗೂ ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟ ಪೊಲೀಸ್‌ ಸಿಬ್ಬಂದಿ ಕುಟುಂಬಸ್ಥರನ್ನು ಕರೆಸಿ ಹೊಸ ವರ್ಷಾಚರಣೆ ಮಾಡಲಾಯಿತು. ಈ ವೇಳೆ ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಮಾತನಾಡಿ, ಪೊಲೀಸ್‌ ಇಲಾಖೆ ಹಣವಂತರಿಗೆ ಮಾತ್ರವೆಂಬ ಅಪವಾದವಿದೆ. ಆದರೆ, ಇಲಾಖೆ ನಿಜವಾಗಿ ತಲುಪಬೇಕಿರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಗಳಿಗೆ, ಪೊಲೀಸ್‌ ಇಲಾಖೆ ಸದಾ ನಮ್ಮೊಂದಿಗೆ ಇರಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.