ಬಾಗಲಕೋಟೆ: ಕಳೆದ ಮಾರ್ಚ್ 22ರಿಂದ ಸ್ತಬ್ಧವಾಗಿದ್ದ ನಗರದ ಹೃದಯ ಭಾಗ ಬರೋಬ್ಬರಿ 48 ದಿನಗಳ ಬಳಿಕ ಶನಿವಾರ ಓಪನ್ ಆಗಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವ್ಯಾಪಾರ-ವಹಿವಾಟು ನಡೆದವು.
ಜಿಲ್ಲೆಯಲ್ಲೇ ಮೊದಲ ಬಾರಿಗೆ ಪತ್ತೆಯಾಗಿದ್ದ ಕೋವಿಡ್ 19 ವೈರಸ್ ಓರ್ವ ವೃದ್ಧನನ್ನು ಬಲಿ ಪಡೆದಿದ್ದು, ಆ ಏರಿಯಾ ಕೂಡ ಅಡತ್ ಬಜಾರ್ ರಸ್ತೆಯಲ್ಲಿದೆ. ಅಡತ್ ಬಜಾರ್ ರಸ್ತೆಯನ್ನು ಸಂಪೂರ್ಣ ನಿಷೇಧಿತ ವಲಯವನ್ನಾಗಿ ಮಾಡಿದ್ದು, ಶನಿವಾರ ಆ ಪ್ರದೇಶದಿಂದ ಜನರು, ವಲ್ಲಭಬಾಯಿ ವೃತ್ತದೆಡೆ ಬಂದು ಹೋಗುವುದು ನಡೆದಿತ್ತು. 48 ದಿನಗಳ ಬಳಿಕ ನಗರದ ಹೃದಯ ಭಾಗದಲ್ಲಿ ವ್ಯಾಪಾರ-ವಹಿವಾಟು ಆರಂಭಗೊಂಡ ಸಂತಸ ಒಂದೆಡೆಯಾದರೆ, ಕಂಟೇನ್ಮೆಂಟ್ ಏರಿಯಾದಿಂದ ಜನರು ಬಂದು-ಹೋಗುತ್ತಿದ್ದು, ಹಲವರು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವೂ ಇಲ್ಲದೇ ತಿರುಗಾಡುತ್ತಿರುವುದು ಕಂಡು ಬಂತು. ಇದರಿಂದ ಭೀತಿಯೂ ಎದುರಾಗಿದೆ.
ಸ್ವಚ್ಛತೆಯೇ ಸವಾಲು: 48 ದಿನಗಳಿಂದ ಬಾಗಿಲು ಹಾಕಿದ್ದ ಅಂಗಡಿಗಳಲ್ಲಿ ಶನಿವಾರ ಬೆಳಗ್ಗೆ ಅಂಗಡಿ ತೆರೆದು, ಸ್ವಚ್ಛತೆಯಲ್ಲಿ ತೊಡಗಿದ್ದರು. ಕಿರಾಣಿ, ಅಡುಗೆ ಎಣ್ಣೆ ಅಂಗಡಿಗಳ ಮಾಲೀಕರು, ಬಾಗಿಲು ತೆಗೆದು ನೋಡಿದಾಗ ಒಂದು ಕ್ಷಣ ದಿಗಿಲು ಹೊಂಡಿದ್ದರು. ಹೆಗ್ಗಣ, ಇಲಿ ಮುಂತಾದವುಗಳನ್ನು ಅಂಗಡಿಯಲ್ಲಿದ್ದ ವಸ್ತುಗಳನ್ನು ತಿಂದು ಹಾಕಿದ್ದವು. ಅಡುಗೆ ಎಣ್ಣೆ ಅಂಗಡಿಯಲ್ಲಿದ್ದ ಎಣ್ಣೆ ಪ್ಯಾಕೆಟ್‌ಗಳನ್ನು ಹೆಗ್ಗಣ ಕಡಿದಿದ್ದರ ಪರಿಣಾಮ, ಅಂಗಡಿಯ ತುಂಬ ಎಣ್ಣೆ ಹರಿದಾಡಿತ್ತು. ಹೀಗಾಗಿ ಅದನ್ನು ಸ್ವಚ್ಛಗೊಳಿಸಿ, ಪುನಃ ವ್ಯಾಪಾರ ಆರಂಭಿಸುವುದು ಅಂಗಡಿಕಾರರಿಗೆ ಸವಾಲಾಗಿತ್ತು. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಎಂದಿಗಿಂತ ಹೆಚ್ಚು ಚುರುಕಾಗಿ ನಡೆದಿವೆ.
ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಾರ, ವಹಿವಾಟು ಜೋರಾಗಿರುವುದು ಕಂಡು ಬಂದಿತು. ನಗರದ ಜನತೆ ಕೂಡ ಎಂದಿನಂತೆ ತಮ್ಮ ಓಡಾಟ ಆರಂಭಿಸಿದ್ದಾರೆ. ಇದರಿಂದಾಗಿ ವಾಹನಗಳ ಸಂಚಾರ ಭರಾಟೆ ಜೋರಾಗಿದೆ. ಇದುವರೆಗೂ ಮನೆಯಲ್ಲಿದ್ದ ವ್ಯಾಪಾರಸ್ಥರು, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ಶನಿವಾರ ಅಂಗಡಿಯತ್ತ ಧಾವಿಸಿದರು. ಕೋವಿಡ್ ಭೀತಿ ಮಧ್ಯೆಯೂ ವ್ಯಾಪಾರ -ವಹಿವಾಟು, ವಾಹನಗಳ ಓಡಾಟ ಆರಂಭಗೊಂಡಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿ ಪಾಲಿಸಬೇಕಿದೆ ಎಂಬ ಮಾತೂ ಕೇಳಿ ಬಂತು.
ಈಗ ಮದುವೆ ಸೀಜನ್ ಇತ್ತು. ಕೋವಿಡ್ 19 ಹಾವಳಿ ಇಲ್ಲದಿದ್ದರೆ ಎರಡು ತಿಂಗಳಲ್ಲಿ ಕನಿಷ್ಠವೆಂದರೂ ನಾಲ್ಕೆçದು ಲಕ್ಷ ವ್ಯಾಪಾರ ನಡೆಯುತ್ತಿತ್ತು. ಕೊರೊನಾ ಬಂದು ನಮ್ಮ ವ್ಯಾಪಾರ ಸಂಪೂರ್ಣ ಹಾಳು ಮಾಡಿತು. ಮುಂದೇನಾಗುತ್ತದೆ ಎಂಬ ಭೀತಿಯೂ ಇದೆ. ಜಿಲ್ಲಾಡಳಿತ ಸೂಚಿಸಿದಂತೆ ನಾವು ನಿಗದಿತ ಸಮಯದಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. –
ಸಂಗಮೇಶ,ಬಟ್ಟೆ ಅಂಗಡಿ ವ್ಯಾಪಾರಿ
ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯವಾಗಿತ್ತು. ಉಪವಾಸವಿದ್ದರೂ ನಾವೆಲ್ಲ ಪಾಲನೆ ಮಾಡಿದ್ದೇವೆ. ಸರ್ಕಾರ ಕೆಲವು ಕುಶಲಕರ್ಮಿ ವರ್ಗಗಳಿಗೆ ಪ್ಯಾಕೇಜ್ ಘೋಷಣೆ ಮಾಡಿರುವುದು ಒಳ್ಳೆಯ ಕೆಲಸ. ಆದರೆ, ಮದುವೆ ಸೀಜನ್‌ನಲ್ಲೇ ನಮ್ಮ ದುಡಿಮೆ ಹೆಚ್ಚು. ಎರಡು ತಿಂಗಳು ನಮ್ಮ ಬದುಕು ದುಸ್ಥರವಾಗಿದೆ. ಟೇಲರಿಂಗ್ ನಂಬಿ ಜೀವನ ಮಾಡುವ ದರ್ಜಿಗಳಿಗೂ ಸರ್ಕಾರ ಪ್ಯಾಕೇಜ್ ನೀಡಬೇಕು. –
ದೀಪಕ ಹಂಚಾಕೆ, ಟೇಲರ್