Advertisement

ಇನ್ನಾರು ತಿಂಗಳಲ್ಲಿ ಸಿಟಿ ತುಂಬಾ ವೈ-ಫೈ

12:30 PM Sep 24, 2018 | Team Udayavani |

ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ಇಡೀ ನಗರಕ್ಕೆ ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು. ಇಲ್ಲಿನ ಗೋವಿಂದರಾಜ ನಗರದಲ್ಲಿ ಪಾಲಿಕೆ ಸೌಧ ಮತ್ತು ಶಕ್ತಿ ಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಪ್ರಗತಿ ಇಂದು ಕ್ರಾಂತಿ ಮಾಡುತ್ತಿದ್ದು, ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ.

Advertisement

ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನಗರವೂ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮುಂದಿನ ಆರು ತಿಂಗಳಲ್ಲಿ ಇಡೀ ನಗರಕ್ಕೆ ವೈ-ಫೈ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ನಗರದಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ಳ ಹಾವಳಿ ಮಿತಿಮೀರಿದ್ದು, ಹೇಳುವವರು-ಕೇಳುವವರು ಇಲ್ಲದಂತಾಗಿತ್ತು. ಈಗ ಇದಕ್ಕೆ ಕಡಿವಾಣ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಒತ್ತಡ ಬರುತ್ತಿದೆ. ಆದರೆ, ಅದಾವುದಕ್ಕೂ ಕ್ಯಾರೆ ಎನ್ನುವುದಿಲ್ಲ.

ಅನಧಿಕೃತ ಕೇಬಲ್‌ಗ‌ಳನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದ ಅವರು, ಅಧಿಕೃತವಾಗಿ ಕೇಬಲ್‌ ಅಳವಡಿಕೆಗೆ ನಮ್ಮ ತಕರಾರಿಲ್ಲ. ಆದರೆ, ಶೇ.90ರಷ್ಟು ಕೇಬಲ್‌ಗ‌ಳನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂದೂ ಸ್ಪಷ್ಟಪಡಿಸಿದರು.  

ಅದೇ ರೀತಿ, ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಈಗಾಗಲೇ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ನಿಯಮ ಉಲ್ಲಂ ಸಿದವರ ವಿರುದ್ಧ 300ರಿಂದ 400 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದ ಸಚಿವರು, ನಿತ್ಯ ಮಳೆಯಿಂದ ರಸ್ತೆ ಗುಂಡಿಗಳು ಬಿದ್ದಿರುವುದು, ರಸ್ತೆ ಜಲಾವೃತಗೊಂಡಿರುವುದು ಸೇರಿದಂತೆ ಒಂದಿಲ್ಲೊಂದು ಸಮಸ್ಯೆಗಳು ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ.

Advertisement

ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರಸ್ತೆಗಳನ್ನೂ ಕಾಂಕ್ರೀಟ್‌ ರಸ್ತೆಗಳನ್ನಾಗಿ ಮಾರ್ಪಡಿಸಲಾಗುತ್ತಿದೆ ಎಂದು ಹೇಳಿದರು. ಮೇಯರ್‌ ಸಂಪತ್‌ರಾಜ್‌, ಬಿಬಿಎಂಪಿ ಪ್ರತಿ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಮಾಜಿ ಮೇಯರ್‌ ಶಾಂತಕುಮಾರಿ, ಸದಸ್ಯ ಉಮೇಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆದಿಚುಂಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

2,500 ಕೋಟಿ ತೆರಿಗೆ ಗುರಿ – ವಿಫ‌ಲವಾದರೆ ಕಠಿಣ ಕ್ರಮ: ಪ್ರಸಕ್ತ ಹಣಕಾಸು ವರ್ಷದ ಒಳಗೆ ಎರಡೂವರೆ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಖಡಕ್‌ ಎಚ್ಚರಿಕೆ ನೀಡಿದರು.

ಹತ್ತು ಸಾವಿರ ಕೋಟಿ ರೂ. ದಾಟಿದ ಬಿಬಿಎಂಪಿ ಬಜೆಟ್‌ಗೆ ಅನುಮೋದನೆ ನೀಡುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ನಾನು ಅನುಮತಿ ನೀಡಿದ್ದೇನೆ. ಜತೆಗೆ ಪಾಲಿಕೆ ಸಂಪನ್ಮೂಲ ಹೆಚ್ಚಿಸಲಿಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ತೆರಿಗೆ ಸಂಗ್ರಹದ ಮೂಲಕ ಇದನ್ನು ಸರಿದೂಗಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಎರಡೂವರೆ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುರಿ ಸಾಧನೆಯಲ್ಲಿ ವಿಫ‌ಲವಾದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ಹೇಳಿದರು. ಜನ ಕೂಡ ಇದಕ್ಕೆ ಕೈಜೋಡಿಸಬೇಕು. ತಮ್ಮ ಮನೆ ಚೆನ್ನಾಗಿರಲಿ ಮತ್ತು ನೀರಿನ ಸಂಪರ್ಕ ವ್ಯವಸ್ಥಿತವಾಗಿರಲಿ.

ಆದರೆ, ಹಣ ಖರ್ಚಾಗದಿರಲಿ ಎಂಬ ಮನೋಭಾವ ಬಿಡಬೇಕು. ಸ್ವಯಂಪ್ರೇರಿತವಾಗಿ ತೆರಿಗೆ ಪಾವತಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಶಾಸಕ ವಿ.ಸೋಮಣ್ಣ, ಗೋವಿಂದರಾಜ ನಗರಕ್ಕೆ 200 ಹಾಸಿಗೆಗಳ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಚಿವ ಪರಮೇಶ್ವರ ಒಪ್ಪಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next