Advertisement

ದ.ಕ.: 3.50 ಲಕ್ಷ ಮನೆಗೆೆ ಪೈಪ್‌ ಅನಿಲ

09:20 AM Nov 22, 2018 | |

ಮಂಗಳೂರು: ಮಂಗಳೂರು ನಗರ ಸಹಿತ ಜಿಲ್ಲೆಯ ಐದು ತಾಲೂಕುಗಳ ಆಯ್ದ ಭಾಗಗಳಲ್ಲಿ ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಪೂರೈಕೆ ಮಾಡುವ ಕೇಂದ್ರ ಸರಕಾರದ ಮಹತ್ವದ ಯೋಜನೆ “ಸಿಟಿ ಗ್ಯಾಸ್‌’ ಶೀಘ್ರದಲ್ಲಿ ಕಾರ್ಯಾರಂಭವಾಗಲಿದೆ. ಈ ಯೋಜನೆಯಡಿ ಮುಂದಿನ ಎಂಟು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 3.50 ಲಕ್ಷ ಮನೆಗಳಿಗೆ ಗ್ಯಾಸ್‌ ಸಂಪರ್ಕ ಹಾಗೂ 100 ಸಿಎನ್‌ಜಿ (ಕಂಪ್ರಸ್ಡ್ ನ್ಯಾಚುರಲ್‌ ಗ್ಯಾಸ್‌) ಕೇಂದ್ರಗಳನ್ನು ಸ್ಥಾಪಿಸಲು ಗುರಿ ಹೊಂದಲಾಗಿದ್ದು, ಸುಮಾರು 20 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ. 

Advertisement

ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು, ದ. ಕನ್ನಡ ಜಿಲ್ಲೆಯನ್ನೊಳಗೊಂಡು ರಾಜ್ಯದ ಏಳು ಪ್ರದೇಶಗಳ ಸಹಿತ ದೇಶದ ಒಟ್ಟು 63 ಕಡೆಗಳಲ್ಲಿ ಮನೆ ಮನೆಗೆ ಪೈಪ್‌ಲೈನ್‌ ಮೂಲಕ ಗ್ಯಾಸ್‌ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗುರುವಾರ ಪ್ರಧಾನಿ ಮೋದಿ ಅವರು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಚಾಲನೆ ನೀಡಲಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಮಧ್ಯಾಹ್ನ 2.30ಕ್ಕೆ ದ.ಕ. ಜಿಲ್ಲೆಯ ಯೋಜನೆಗೆ ಚಾಲನೆ ದೊರೆಯಲಿದ್ದು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಶಾಸಕರಾದ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ, ಮೇಯರ್‌ ಭಾಸ್ಕರ್‌ ಭಾಗವಹಿಸಲಿದ್ದಾರೆ ಎಂದರು.

ಮೊದಲ ಹಂತದಲ್ಲಿ ದ.ಕನ್ನಡ, ಉಡುಪಿ, ಬಳ್ಳಾರಿ, ಗದಗ, ಬೀದರ್‌ ಚಿತ್ರದುರ್ಗ, ದಾವಣಗೆರೆ, ರಾಮನಗರ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ವಿವಿಧ ಗ್ಯಾಸ್‌ ಕಂಪೆನಿಗಳಿಗೆ ಈ ಕಾಮಗಾರಿ ವಹಿಸಿಕೊಡಲಾಗಿದೆ. ದ.ಕನ್ನಡದಲ್ಲಿ ಗೇಲ್‌ ಗ್ಯಾಸ್‌ ಲಿ. ಈ ಕಾರ್ಯನಿರ್ವಹಿಸಲಿದೆ. ಮನೆಗಳು ಮಾತ್ರವಲ್ಲದೆ, ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ವಸತಿಗೃಹಗಳು, ಹೊಟೇಲ್‌ಗ‌ಳಿಗೂ ಈ ಗ್ಯಾಸ್‌ ಸಂಪರ್ಕ ನೀಡಲಾಗುವುದು ಎಂದರು. 

1,972 ಕೋ.ರೂ. ಹೂಡಿಕೆ
ಗೇಲ್‌ ಕಂಪೆನಿಯ ಚೀಫ್ ಜನರಲ್‌ ಮ್ಯಾನೇಜರ್‌ ವಿವೇಕ್‌ ವಾಥೋಡ್ಕರ್‌ ಮಾತನಾಡಿ, ಜಿಲ್ಲೆಯಲ್ಲಿ ಸಾರಿಗೆ ಕ್ಷೇತ್ರಕ್ಕೆ ಸಿಎನ್‌ಜಿ, ಮನೆ, ಕೈಗಾರಿಕೆ, ವಾಣಿಜ್ಯ ಉದ್ದೇಶಗಳಿಗೆ ಪಿಎನ್‌ಜಿ ಪೂರೈಕೆ ಮಾಡಲಾಗುವುದು. ಮುಂದಿನ 8 ವರ್ಷಗಳಲ್ಲಿ ಜಿಲ್ಲೆಯ 4,861 ಚ.ಕಿ.ಮೀ. ವ್ಯಾಪ್ತಿಯಲ್ಲಿ ಈ ಪೈಪ್‌ಲೈನ್‌ ವ್ಯಾಪಿಸಲಿದೆ. ಇದಕ್ಕಾಗಿ ಮುಂದಿನ 25 ವರ್ಷಗಳಿಗೆ ಒಟ್ಟು 1,972 ಕೋಟಿ ರೂ. ಹೂಡಿಕೆ ಮಾಡಲಾಗುವುದು. ಕೊಚ್ಚಿಯಿಂದ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದು ಮುಕ್ತಾಯವಾದ ಕೂಡಲೇ ಮನೆಗಳಿಗೆ ಸಂಪರ್ಕ ಕಾರ್ಯ ಆರಂಭವಾಗಲಿದೆ ಎಂದರು.

ಅತ್ಯಂತ ಸುರಕ್ಷಿತ
ಕೊಚ್ಚಿಯಿಂದ ಪೈಪ್‌ಲೈನ್‌ ಮೂಲಕ ಬರುವ ನೈಸರ್ಗಿಕ ಅನಿಲದ ಒತ್ತಡ ಅತಿ ಹೆಚ್ಚಿರುತ್ತದೆ. ಮುಂದಿನ ಪ್ರತೀ ಹಂತದಲ್ಲೂ ಒತ್ತಡವನ್ನು ವೈಜ್ಞಾನಿಕವಾಗಿ ಕಡಿಮೆಗೊಳಿಸಲಿದ್ದು, ಮನೆಗಳಿಗೆ ತಲುಪುವಾಗ ಅದು ಗಣನೀಯ ಪ್ರಮಾಣದಲ್ಲಿ ತಗ್ಗಿರುತ್ತದೆ. ಅಪಾಯದ ಬಗ್ಗೆ ಭಯ ಬೇಕಾಗಿಲ್ಲ. ನೈಸರ್ಗಿಕ ಅನಿಲವು ಗಾಳಿಗಿಂತಲೂ ಕಡಿಮೆ ತೂಕ ಹೊಂದಿದ್ದು, ಸೋರಿಕೆಯಾದರೆ ಆವಿಯಾಗುತ್ತದೆ. ಅಪಾಯವಿಲ್ಲ ಎಂದು ವಿವೇಕ್‌ ವಾಥೋಡ್ಕರ್‌ ವಿವರಿಸಿದರು.

Advertisement

ಉಡುಪಿಯಲ್ಲಿ ಅನಿಲ ವಿತರಣೆ ಹೊಣೆ ಅದಾನಿ ಸಂಸ್ಥೆಗೆ 
ಪಡುಬಿದ್ರಿ:
ಉಡುಪಿ ಜಿಲ್ಲೆಯ ನಗರ ಅನಿಲ ವಿತರಣೆ ಯೋಜನೆಗೆ ನ.22ರಂದು ಅದಾನಿ ಸಂಸ್ಥೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ ಸಾಂಕೇತಿಕವಾಗಿ ಚಾಲನೆಯನ್ನು ನೀಡಲಿವೆ. ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲುರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.

ಪ್ರಧಾನ ಮಂತ್ರಿ ಮೋದಿ ಅವರು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನ. 22ರಂದು ನಗರ ಅನಿಲ ವಿತರಣೆ ಯೋಜನೆಗೆ ಚಾಲನೆಯನ್ನು ನೀಡಲಿದ್ದಾರೆ. ಮಂಡಳಿ ವತಿಯಿಂದ ಈ ಯೋಜನೆ ಹಂಚಿಕೆಯಾದ ದೇಶದ ವಿವಿಧ ಜಿಲ್ಲೆಗಳಲ್ಲೂ ಆಯಾ ಸಂಸ್ಥೆಗಳಿಂದ ಗುದ್ದಲಿ ಪೂಜೆ ನೆರವೇರಿಸಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಗೆ ನಗರ ಅನಿಲ ವಿತರಣೆಯು ಅದಾನಿ ಸಮೂಹದ ಅಂಗ ಸಂಸ್ಥೆಯಾದ ಅದಾನಿ ಗ್ಯಾಸ್‌ ಲಿಮಿಟೆಡ್‌ಗೆ ಹಂಚಿಕೆಯಾಗಿದೆ. ದಿಲ್ಲಿಯ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು. 

569 ಕಿ.ಮೀ. ಪೈಪ್‌ಲೈನ್‌
ನಗರ ಅನಿಲ ವಿತರಣೆ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಗೆ ಪೈಪ್ಡ್ ನ್ಯಾಚುರಲ್‌ ಗ್ಯಾಸ್‌ (ಪಿಎನ್‌ಜಿ) ಮತ್ತು ಕಂಪ್ರಸ್ಡ್ ನ್ಯಾಚುರಲ್‌ ಗ್ಯಾಸ್‌ (ಸಿಎನ್‌ಜಿ) ಒದಗಿಸಲು ಅದಾನಿ ಗ್ಯಾಸ್‌ ಲಿಮಿಟೆಡ್‌ ಜವಾಬ್ದಾರಿ ವಹಿಸಿಕೊಂಡಿದೆ. ಈ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 1.10 ಲಕ್ಷ ಪಿಎನ್‌ಜಿ ಮನೆ ಸಂಪರ್ಕಗಳು, 11 ಸಿಎನ್‌ಜಿ ಘಟಕಗಳು ಮತ್ತು ಉತ್ತರದ ಬೈಂದೂರು ಹಾಗೂ ಜಿಲ್ಲೆಯ ದಕ್ಷಿಣ ತುದಿಯ ಹೆಜಮಾಡಿಯನ್ನು ಸಂಪರ್ಕಿಸಲು 569 ಕಿ.ಮೀ ಉದ್ದದ ಅನಿಲ ಪೈಪ್‌ಲೈನ್‌ ನೆಟ್‌ವರ್ಕ್‌ ಸ್ಥಾಪಿಸಲಾಗುವುದು. ಅದಾನಿ ಗ್ಯಾಸ್‌ ಉಡುಪಿಯ ಜತೆಗೆ ಗುಜರಾತ್‌, ಹರಿಯಾಣ ಮತ್ತು ಉತ್ತರ ಪ್ರದೇಶಗಳ ಅನಿಲ ವಿತರಣೆಗೂ ಬಿಡ್ಡಿಂಗ್‌ನಲ್ಲಿ ಅವಕಾಶ ಪಡೆದುಕೊಂಡಿದೆ.

ಉಡುಪಿಯಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವೆ ಡಾ| ಜಯಮಾಲಾ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಸಭಾ ಸದಸ್ಯ ಆಸ್ಕರ್‌ ಫ‌ರ್ನಾಂಡಿಸ್‌, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಸುನಿಲ್‌ ಕುಮಾರ್‌, ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಅವರು ತಿಳಿಸಿದ್ದಾರೆ.

ಮಾರ್ಚ್‌ನೊಳಗೆ  5 ಸಿಎನ್‌ಜಿ ಸ್ಟೇಷ‌ನ್‌
ಜಿಲ್ಲೆಯಾದ್ಯಂತ ಗ್ಯಾಸ್‌ ಪೈಪ್‌ಲೈನ್‌ ಹರಡಲಿದ್ದು, ಮೊದಲಿಗೆ ಮನಪಾ ವ್ಯಾಪ್ತಿಯಲ್ಲಿ ಆರಂಭವಾಗಲಿದೆ. ಮಾರ್ಚ್‌ ಅಂತ್ಯದೊಳಗೆ ಮಂಗಳೂರಿನ 5 ಕಡೆಗಳಲ್ಲಿ ಸಿಎನ್‌ಜಿ ಕೇಂದ್ರ ಗಳನ್ನು ಸ್ಥಾಪಿಸಲು ಉದ್ದೇಶಿ ಸಲಾಗಿದೆ. ಅಲ್ಲಿಂದ ನಗರ ವ್ಯಾಪ್ತಿಯ ನಿಗದಿತ ಗ್ರಾಹಕರಿಗೆ ಗ್ಯಾಸ್‌ ಒದಗಿಸಲಾಗುತ್ತದೆ. ಸುರತ್ಕಲ್‌, ಬೈಕಂಪಾಡಿ ವ್ಯಾಪ್ತಿ ಯಲ್ಲಿ ಆರಂಭಿಕವಾಗಿ ಜಾರಿಗೊಳ್ಳಲಿದೆ. ಎಪ್ರಿಲ್‌ ವೇಳೆಗೆ  ಪೈಪ್‌ಲೈನ್‌ ಪೂರ್ಣವಾದ ಬಳಿಕ ಅದರ ಮೂಲಕವೇ ನಗರದ ಇತರ ಪ್ರದೇಶಗಳಿಗೆ ಪೂರೈಕೆಗೆ ನಿರ್ಧರಿಸಲಾಗಿದೆ ಎಂದು ವಿವೇಕ್‌ ವಾಥೋಡ್ಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next