Advertisement

ಸಿಟಿಲಿ ಕಾರ್ಡ್‌ ಹಳ್ಳಿಲಿ ನೋಟ್‌!

12:16 PM Nov 08, 2017 | |

ಧಾರವಾಡ: ಪೆಟ್ರೋಲ್‌ ಬಂಕ್‌, ಲಾಡ್ಜ್, ಹೋಟೆಲ್‌, ಮಹಲ್‌ಗ‌ಳಲ್ಲಿ ಓಕೆ…ಹಳ್ಳಿಗಳಲ್ಲಿ ಮತ್ತು ಸಣ್ಣ ವ್ಯಾಪಾರಿಗಳಲ್ಲಿ ಇನ್ನೂ ಇಲ್ಲ ಯಾಕೆ ? ಈ ಓಕೆ ಮತ್ತು ಯಾಕೆ ಮಧ್ಯ ಇರುವುದು ಬೇರೇನೂ ಅಲ್ಲ, ನಗದು ರಹಿತ ವಹಿವಾಟಿನ ಕಥೆ. ಹೌದು.

Advertisement

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳ ಅಪನಗದೀಕರಣ ಮಾಡಿ ಒಂದು ವರ್ಷವಾಗಿದ್ದು, ಇದೀಗ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ಸರ್ಕಾರದ ಈ ಪ್ರಯತ್ನಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಜಿಲ್ಲೆಯಲ್ಲಿ 2016 ಕ್ಕೂ ಮುಂಚಿನ ವರ್ಷಗಳಲ್ಲಿ ಇದ್ದ ಒಟ್ಟು ನಗದು ರಹಿತ ವಹಿವಾಟಿಗೆ ಹೋಲಿಸಿದರೆ, ಕಳೆದ ಒಂದು ವರ್ಷದಲ್ಲಿ ಶೇ.65 ರಷ್ಟು ನಗದು ರಹಿತ ವಹಿವಾಟು ಹೆಚ್ಚಿದ್ದು, ಜಿಲ್ಲೆಯ ಜನರು ಇ-ಪೇಮೆಂಟ್‌, ಕಾರ್ಡ್‌ಗಳ ಸ್ಪೈಪ್‌ನ್ನು ಹೆಚ್ಚಿಸಿದ್ದು ಗೋಚರಿಸುತ್ತಿದೆ. 

ನಗದು ರಹಿತ ವಹಿವಾಟಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲೇ ಹೆಚ್ಚು ಆದ್ಯತೆ ಲಭಿಸುತ್ತಿದ್ದು, ಇಲ್ಲಿನ ಪೆಟ್ರೋಲ್‌ ಬಂಕ್‌ ಗಳು, ಬಂಗಾರದ ಅಂಗಡಿ, ಬಟ್ಟೆ ಅಂಗಡಿಗಳು, ಶಾಪಿಂಗ್‌ ಮಹಲ್‌ಗ‌ಳು, ಚಿತ್ರ ಮಂದಿರಗಳು, ದೊಡ್ಡ ದೊಡ್ಡ ಹೊಟೇಲ್‌ಗ‌ಳು ಮತ್ತು ತಾರಾ ಹೊಟೇಲ್‌ಗ‌ಳು, ಲಾಡ್ಜ್ಗಳು, ರೇಸಾರ್ಟ್‌ಗಳಲ್ಲಿ ನಗದು ರಹಿತ ವಹಿವಾಟು ಅಧಿಕವಾಗುತ್ತಿದೆ. 

ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರ ಅಕ್ಕಪಕ್ಕದ ಹೋಟೆಲ್‌ಗ‌ಳು, ರೇಸಾರ್ಟ್‌ಗಳು, ಪೆಟ್ರೋಲ್‌ಬಂಕ್‌ಗಳಲ್ಲಿ ಡೆಬಿಟ್‌ ಕಾರ್ಡ್‌ ಬಳಕೆ ಜೋರಾಗಿದೆ. ಇಲ್ಲಿ ಪರ ರಾಜ್ಯಗಳ ಪ್ರವಾಸಿಗಳ ಓಡಾಟ ಹೆಚ್ಚಾಗಿದ್ದು, ಅವರೆಲ್ಲರೂ ನಗದು ರಹಿತ ವಹಿವಾಟಿಗೆ ಹೆಚ್ಚು ಒತ್ತು ನೀಡಿದ್ದಾರೆ. ಇನ್ನು ಗೋವಾ ರಸ್ತೆಯಲ್ಲಿರುವ ದಾಬಾಗಳು, ಕಾರವಾರ ರಸ್ತೆಯ ದೊಡ್ಡ ದಾಬಾಗಳು, ಹೋಟೆಲ್‌ಗ‌ಳು ಮತ್ತು ಪೆಟ್ರೊಲ್‌ಬಂಕ್‌ಗಳಲ್ಲೂ ನಗದು ರಹಿತ ವಹಿವಾಟು ತಕ್ಕಮಟ್ಟಿಗಿದೆ ಅಷ್ಟೇ.  

Advertisement

ಹಳ್ಳಿಯಲ್ಲಿ ನೋಟ್‌ ದರ್ಬಾರ್‌: ನಗರ ಪ್ರದೇಶಗಳ ಜನರು ಹೆಚ್ಚಾಗಿ ಡಿಬಿಟ್‌, ಕ್ರೆಡಿಟ್‌ ಮತ್ತು ಗೋಲ್ಡ್‌ಕಾರ್ಡ್‌ಗಳು ಸೇರಿದಂತೆ ಒಟ್ಟಾರೆ ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಿದ್ದರೆ, ಜಿಲ್ಲೆಯ ಅಣ್ಣಿಗೇರಿ, ಅಳ್ನಾವರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ನಗದು ಬಳಕೆ ವ್ಯವಹಾರವೇ ಅಧಿಕವಾಗಿದೆ.

ಹಳ್ಳಿಯ ಜನರ ಬಳಿ ಇಂದಿಗೂ ಕಾರ್ಡ್‌ಗಳೇ ಇಲ್ಲ. ಇದ್ದರೂ ಅವುಗಳ ಬಳಕೆ ಇಲ್ಲಿ ಕಷ್ಟವಾಗುತ್ತಿದೆ. ಆದರೆ ಕುಂದಗೋಳ, ಕಲಘಟಗಿ, ನವಲಗುಂದದಂತಹ ತಾಲೂಕು ಕೇಂದ್ರಗಳಲ್ಲಿ ನಗದು ರಹಿತ ವಹಿವಾಟು ಶೇ.10 ರಷ್ಟು ಮಾತ್ರ ಹೆಚ್ಚಿದೆ. ಅನಕ್ಷರತೆ ಇದಕ್ಕೆ ಪ್ರಮುಖ ಕಾರಣ ಆಗಿದ್ದರೂ, ಡಿಜಿಟಲ್‌ ವ್ಯವಹಾರಕ್ಕೆ ಅಗತ್ಯವಾದ ಯಂತ್ರಗಳು, ಕಾರ್ಡ್‌ಗಳ ಬಳಕೆ ಇಲ್ಲಿ ಕಷ್ಟವಾಗುತ್ತಿದೆ.

ಅದೂ ಅಲ್ಲದೇ ಹಳ್ಳಿಗಳಲ್ಲಿ ನಡೆಯುವ ವ್ಯಾಪಾರ ವಹಿವಾಟು ಕೂಡ ಸಣ್ಣ ಪ್ರಮಾಣದ್ದಾಗಿದೆ. ಆದರೆ ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳಾದ ಹೊಲ ಖರೀದಿ, ಹಣ ಕೊಡುವ ಕೊಳ್ಳುವಿಕೆ ಮಾತ್ರ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ನಡೆಯುತ್ತಿವೆ ಅಷ್ಟೇ. 

ಇನ್ನು ದೊಡ್ಡ ಹೋಟೆಲ್‌, ಲಾಡ್ಜ್ಗಳು ಮತ್ತು ಪೆಟ್ರೋಲ್‌ ಬಂಕ್‌ಗಳಲ್ಲಿ ಕೂಡ ನೂರಕ್ಕೆ ನೂರು ಪ್ರತಿಶತದಷ್ಟು ಕಾರ್ಡ್‌ ಬಳಕೆಯಾಗುತ್ತಿಲ್ಲ. ಬದಲಿಗೆ ಶೇ.65 ರಷ್ಟು ಮಾತ್ರ. ಇದಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲವಾದರೂ, ಕಾರ್ಡ್‌ಗಳ ಬಳಕೆ ಕುರಿತ ಜಾಗೃತಿ ಇನ್ನಷ್ಟು ಹೆಚ್ಚಬೇಕಿದೆ. ಜಿಲ್ಲೆಯ ಒಟ್ಟು ವಹಿವಾಟಿನಲ್ಲಿ ನಗದು ರಹಿತ ವಹಿವಾಟು ಪಾತ್ರ ಈಗಲೂ ಶೇ.50 ಕ್ಕಿಂತಲೂ ಕಡಿಮೆಯೇ ಇದೆ.  

ಕಾರ್‌ ಓಕೆ ಟಂಟಂ ಇಲ್ಲ ಯಾಕೆ: ಆಟೋ ಮತ್ತು ಟಂಟಂ ಡ್ರೈವರ್‌ಗಳು ತಮ್ಮ ವಾಹನದ ಇಂಧನಕ್ಕಾಗಿ ಇಂದಿಗೂ ಕಾರ್ಡ್‌ಗಳನ್ನು ಬಳಸುತ್ತಿಲ್ಲ. ಅಲ್ಲಿ ನೋಟಿನ ಚಲಾವಣೆಯೇ ಅಧಿಕವಾಗಿದೆ. ಆದರೆ ಕಾರ್‌ಗೆ ಇಂಧನ ಭರ್ತಿ ಮಾಡುವವರ ಪೈಕಿ ಶೇ.85ಕ್ಕಿಂತಲೂ ಹೆಚ್ಚು ಜನರು ತಮ್ಮ ಡೆಬಿಟ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ಆದರೆ ಲಾರಿ, ಟೆಂಪೋ, ಮಧ್ಯಮ ಗಾತ್ರದ ಸರಕು ವಾಹನಗಳು, ಮಧ್ಯಮ ಗಾತ್ರದ ಪ್ರಯಾಣಿಕರನ್ನು ಹೊತ್ತೂಯ್ಯುವ ಟಂಟಂ, ಕ್ರೂಸರ್‌ ವಾಹನಗಳಿಗೆ ಇಂಧನ ಭರ್ತಿ ವೇಳೆ ಕಾರ್ಡ್‌ನ ಬಳಕೆ ಅಷ್ಟಾಗಿ ಇಲ್ಲ. ಇಲ್ಲಿ ಇನ್ನೂ ನೋಟುಗಳ ಬಳಕೆಯೇ ಅಧಿಕವಾಗಿದೆ. 

* „ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next