ಉಡುಪಿ: ಕೋವಿಡ್ -19 ಹಲವು ಪಾಠ ಕಲಿಸಿದೆ. ಜೀವನ ಅನುಭವ ಸಿಕ್ಕಿದೆ. ಸಂಕಷ್ಟದಲ್ಲಿ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಗಣೇಶೋತ್ಸವ ಸಮಿತಿಯವರು, ಆಸರೆ ಚಾರಿಟೆಬಲ್ ಟ್ರಸ್ಟ್‌ನವರು, ನಗರಸಭೆ ಸದಸ್ಯರು, ಕಾರ್ಯಕರ್ತರು ಹಗಲು ರಾತ್ರಿ ದುಡಿದಿದ್ದಾರೆ. ಬಸ್ ಮಾಲಕ ಸಂಘದವರು, ಚಾಲಕರು ಎಲ್ಲರ ಪ್ರಯತ್ನದ ಫಲವಾಗಿ ಜನರಲ್ಲಿ ಬಸ್‌ಗಳಲ್ಲಿ ಸಂಚರಿಸಬಹುದು ಎನ್ನುವ ವಿಶ್ವಾಸ ಬಂದಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಆರು ದಿನಗಳ ಉಚಿತ ಸಿಟಿ ಬಸ್ ಸೇವೆ ಕೊನೆಯ ಹಂತದಲ್ಲಿ ಬಿಜೆಪಿ ಯುವ ಮೋರ್ಚಾ ಉಡುಪಿ ನಗರ ವತಿಯಿಂದ ಸ್ವಚ್ಛ ಭಾರತ್ ಅಭಿಯಾನದಡಿ ಕಾರ್ಯಕರ್ತರು, ಸ್ವಯಂ ಸೇವಕರು ನಡೆಸಿದ ಸಿಟಿ ಬಸ್ ನಿಲ್ದಾಣ ಸ್ವಚ್ಛತೆ ಮತ್ತು ಸ್ಯಾನಿಟೈಸಿಂಗ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿಟಿ ಬಸ್ ಮಾಲಕ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮಾತನಾಡಿ, ಉಚಿತ ಬಸ್ ಓಡಾಟದ ಮೂಲಕ ಉಡುಪಿ ಜನತೆಯಲ್ಲಿ ವಿಶ್ವಾಸ ತುಂಬಿದ್ದೇವೆ. ಬಸ್‌ನಲ್ಲಿ ಇನ್ನು ಪ್ರಯಾಣ ಬೆಳೆಸಬಹುದು ಎನ್ನುವುದು ಜನರ ಮನಸ್ಸಿಗೆ ತೋಚಿದೆ. ಯಾವುದೇ ಭೀತಿ ಇಲ್ಲದೆ ಮುಂಜಾಗ್ರತ ಕ್ರಮಗಳನ್ನು ಪಾಲಿಸುವ ಮೂಲಕ ಬಸ್‌ಗಳಲ್ಲಿ ಮುಂದಿನ ದಿನಗಳಲ್ಲಿ ಸಂಚರಿಸಬಹುದು ಎಂದರು.
ಬಿಜೆಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಶೆಟ್ಟಿ, ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ನಗರಸಭೆ ಸದಸ್ಯರು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಕೋವಿಡ್ -19 ಲಾಕ್‌ಡೌನ್‌ನಿಂದ ಸ್ಥಗಿತ ಗೊಂಡಿದ್ದ ಸಮೂಹ ಸಾರಿಗೆಯ ಬಳಕೆ ಹಾಗೂ ಕೊರೊನಾ ಭೀತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೆಬಲ್ ಟ್ರಸ್ಟ್‌ನ ಮೂಲಕ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಹಕಾರಲ್ಲಿ ಮೇ 25ರಿಂದ ನಗರದಲ್ಲಿ ಉಚಿತ ಬಸ್ ಸೇವೆ ಆರಂಭಿಸಿತ್ತು. ರವಿವಾರಕ್ಕೆ ಅದು ಮುಕ್ತಾಯ ಕಂಡಿತ್ತು. ಇದುವರೆಗೆ ಸುಮಾರು 30 ಸಾವಿರ ಮಂದಿ ಪ್ರಯಾಣಿಕರು ಉಚಿತವಾಗಿ ಬಸ್‌ನಲ್ಲಿ ಸಂಚರಿಸಿ ಪ್ರಯೋಜನ ಪಡೆಕೊಂಡಿದ್ದಾರೆ.
ದರ ಏರಿಕೆ: ಸಂಬಂಧವಿಲ್ಲ
ಸಿಟಿ ಬಸ್ ದರ ಶೇ. 15 ಏರಿಸಿರುವುದಕ್ಕೂ ಕೋವಿಡ್ -19 ಕ್ಕೂ ಸಂಬಂಧವಿಲ್ಲ. 2013ರಿಂದ ಸಿಟ ಬಸ್ ದರ ಏರಿಸಿರಲಿಲ್ಲ. ಡೀಸೆಲ್ ದರ ಹೆಚ್ಚಳ, ನಿರ್ವಹಣೆ ವೆಚ್ಚ ಇತ್ಯಾದಿ ಹೊರೆಯಿಂದ ದರ ಏರಿಕೆ ಕುರಿತು ಬಸ್ ಮಾಲಕರ ಬೇಡಿಕೆ ಇತ್ತು. ಅದಕ್ಕೆ ಈಗ ಸಮ್ಮತಿ ಸಿಕ್ಕಿದೆ. ಉಚಿತ ಬಸ್ ಓಡಿಸಿ ದರ ಏರಿಸಿದ್ದಾರೆ ಎನ್ನುವ ಟೀಕೆಗಳಿಗೆ ಅರ್ಥವಿಲ್ಲ. ಗಣೇಶೋತ್ಸವ ಸಮಿತಿ ಮತ್ತು ನಗರಸಭೆ ಸದಸ್ಯರೆಲ್ಲ ಸೇರಿ ನಾವು ಜನಪ್ರತಿನಿಧಿಗಳು ಬಸ್ ಮಾಲಕರಿಗೆ ಧೈರ್ಯ ತುಂಬಿದ್ದರಿಂದ ಅವರು ಜನರ ಕಷ್ಟಕ್ಕೆ ಸ್ಪಂದಿಸುವ ಇಚ್ಚೆ ವ್ಯಕ್ತಪಡಿಸಿದ್ದರು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಇಂದಿನಿಂದ ಸಿಟಿ ಬಸ್ ಓಡಾಟ ಆರಂಭ: ಕುಯಿಲಾಡಿ
ಉಚಿತ ಬಸ್ ಸೇವೆ ಮುಕ್ತಾಯ ಕಂಡ ಬೆನ್ನಲ್ಲೆ ಸೋಮವಾರದಿಂದ ಈ ಹಿಂದಿನಂತೆ ಸಿಟಿ ಬಸ್‌ಗಳು ಸಂಚಾರ ಆರಂಭಿಸಲಿವೆ. ಸೋಮವಾರ ಸಿಟಿ ಬಸ್ ನಿಲ್ದಾಣದಿಂದ 20 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಓಡಾಟ ನಡೆಸಲಿವೆ. ಹಂತಹಂತವಾಗಿ ಬಸ್ ಓಡಾಟ ಹೆಚ್ಚಿಸುತ್ತೇವೆ. ಸಂಚಾರ ವೇಳೆ ಉಚಿತ ಬಸ್ ಸಂಚಾರ ಅವಧಿಯಲ್ಲಿ ಪಾಲಿಸಿದ ಎಲ್ಲ ನಿಯಮಗಳನ್ನು ಪಾಲಿಸಿಕೊಂಡು ನಮ್ಮ ಬಸ್ ಸಿಬಂದಿಗಳಿಗೆ ಸಹಕಾರ ನೀಡುವಂತೆ ಸಿಟಿ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.